ತೀವ್ರ ವಿಚಾರಣೆ ನಡೆಸಿದರೂ ಬಾಯಿ ಬಿಡದ ಮುಸುಕುಧಾರಿ ನಡೆಯ ಬಗ್ಗೆ ಅನುಮಾನ
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವ ಶೋಧವನ್ನು ಸ್ಥಗಿತಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಅನಾಮಿಕ ಮುಸುಕುಧಾರಿಯ ವಿಚಾರಣೆ ಪ್ರಾರಂಭಿಸಿದ್ದಾರೆ. ಸೋಮವಾರವೂ ಸುಮಾರು ಆರು ತಾಸುಗಳ ಕಾಲ ಮುಸುಕುಧಾರಿಯನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಕರಣದ ತನಿಖಾಧಿಕಾರಿ ಜಿತೇಂದ್ರ ದಯಾಮ ಮತ್ತು ಸುಮಾರು 25 ಪೊಲೀಸರ ತಂಡ ಎಸ್ಐಟಿ ಠಾಣೆಯಲ್ಲಿ ತೀವ್ರ ವಿಚಾರಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಮುಸುಕುಧಾರಿ ಹೇಳಿದ ಕಡೆಯಲೆಲ್ಲ ಅಗೆದರೂ ಶವಗಳ ಯಾವುದೇ ಕುರುಹು ಸಿಗದಿರುವ ಹಿನ್ನೆಲೆಯಲ್ಲಿ ಅವನ ಮೇಲಿನ ಅನುಮಾನ ಇನ್ನಷ್ಟು ದಟ್ಟವಾಗಿದೆ. ಹೀಗಾಗಿ ಎಸ್ಐಟಿ ಈಗ ಅವನನ್ನೇ ವಿಚಾರಣೆಗೆ ಗುರಿಪಡಿಸಿದೆ. ನಿನ್ನೆಯಿಂದೀಚೆಗೆ ಪ್ರಕರಣ ಭಾರಿ ತಿರುವು ಪಡೆದುಕೊಂಡಿದ್ದು, ಸದನದಲ್ಲೂ ನಿನ್ನೆ ಕಾವೇರಿದ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಮುಸುಕುಧಾರಿ ನಾನು ʼಅವರುʼ ಹೇಳಿದಂತೆ ಮಾಡಿದ್ದೇನೆ, ನನಗೇನೂ ಗೊತ್ತಿಲ್ಲ. ತಮಿಳುನಾಡಿನಲ್ಲಿ ಕೆಲವರು ಬಂದು ನನ್ನನ್ನು ಭೇಟಿಯಾಗಿ ಹೇಳಿಕೊಟ್ಟಿದ್ದಾರೆ. ಅವರು ಹೇಳಿ ಕೊಟ್ಟಂತೆ ದೂರು ಕೊಟ್ಟಿದ್ದೇನೆ ಎಂದು ಬಾಯಿಬಿಟ್ಟಿದ್ದಾನೆ ಎಂದೆಲ್ಲ ವದಂತಿಗಳು ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದವು.
ನಿನ್ನೆ ಇಡೀ ದಿನ ಮುಸುಕುಧಾರಿಯನ್ನು ಅಧಿಕಾರಿಗಳ ಪ್ರಶ್ನಿಸಿ ಸಂಜೆ ಬಿಟ್ಟು ಕಳುಹಿಸಿದ್ದಾರೆ, ಇಂದು ಮತ್ತೆ ಅವನ ವಿಚಾರಣೆ ನಡೆಯಲಿದೆ ಎಂದು ತಿಳಿದುಬಂದಿದೆ. ಬೆಳಗ್ಗೆ 10 ಗಂಟೆಯಿಂದ ನಿರಂತರವಾಗಿ ಎಸ್ಐಟಿ ಪೊಲೀಸರು ವಿವಿಧ ಆಯಾಮಗಳಲ್ಲಿ ಅನಾಮಿಕನ ಮುಂದೆ ಪ್ರಶ್ನೆಗಳನ್ನು ಇಟ್ಟಿದ್ದಾರೆ. ಕೋರ್ಟ್ಗೆ ಪ್ರೊಡ್ಯೂಸ್ ಮಾಡಿದ ತಲೆಬುರುಡೆ ತಂದದ್ದೆಲ್ಲಿಂದ? ಬುರುಡೆ ತಂದಾಗ ಸ್ಥಳದಲ್ಲಿ ಇದ್ದವರು ಯಾರು? ಕತ್ತಿಯಲ್ಲಿ ಬುರುಡೆ ಎತ್ತಿದವರು ಯಾರು? ಸಮಾಧಿಯೊಳಗಿಂದ ನೀನು ಬುರುಡೆ ಅಗೆದು ತಂದಿರುವೆಯಾ? ಕಾಡಿನೊಳಗಿಂದ ಬುರುಡೆ ಎತ್ತಿದ ವೀಡಿಯೋದಲ್ಲಿ ಇರುವವರು ಯಾರು? ಕಾಡಿನ ಒಳಗೆ ಬುರುಡೆ ಸಿಕ್ಕಿದ್ದರೆ ಅದು ಅಸಹಜ ಸಾವಿನ ಪ್ರಕರಣವೋ? ಸಮಾಧಿಯಿಂದ ಬುರುಡೆ ಆಗಿದ್ದು ತಂದದ್ದು ಹೌದಾ? ನಿನ್ನ ಜೊತೆ ಕೈ ಜೋಡಿಸಿದವರು ಯಾರು ಎಂಬೆಲ್ಲಾ ಪ್ರಶ್ನೆಗಳನ್ನು ತನಿಖಾಧಿಕಾರಿ ಜಿತೇಂದ್ರ ದಯಾಮ ಅನಾಮಿಕನಿಗೆ ಕೇಳಿದ್ದಾರೆ.
ಈ ಎಲ್ಲ ಪ್ರಶ್ನೆಗಳಿಗೆ ಯಾವುದೇ ಉತ್ತರಗಳು ಅನಾಮಿಕನಿಂದ ಬಂದಿಲ್ಲ. ಕೋರ್ಟ್ಗೆ ಪ್ರೊಡ್ಯೂಸ್ ಮಾಡಿದ ಬುರುಡೆ ಯಾವ ಭಾಗದಿಂದ ತೆಗೆದು ತಂದದ್ದು ಎಂಬ ಪ್ರಶ್ನೆಗೂ ಸರಿಯಾದ ಉತ್ತರ ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಬಂಗ್ಲೆಗುಡ್ಡೆ, ಕಲ್ಲೇರಿ, ರತ್ನಗಿರಿ, ಬೊಳಿಯಾರು ಎಂಬ ಉತ್ತರವನ್ನು ಹೇಳಿದ್ದಾನೆ.
ಸುಜಾತ ಭಟ್ ಕುರಿತು ತನಿಖೆ
ಈ ನಡುವೆ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾಳೆ ಎನ್ನಲಾಗುತ್ತಿರುವ ಅನನ್ಯ ಭಟ್ ಕೇಸ್ ಬಗ್ಗೆಯೂ ತನಿಖೆ ನಡೆದಿದೆ. ಸುಜಾತಾ ಭಟ್ ಶಿವಮೊಗ್ಗದ ರಿಪ್ಪನಪೇಟೆಯಲ್ಲಿ ವಾಸವಾಗಿದ್ದ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಎಸ್ಐಟಿ ಪೊಲೀಸರು ಅಲ್ಲಿಗೆ ಹೋಗಿ ತನಿಖೆ ನಡೆಸಿದ್ದಾರೆ. ಸುಜಾತಾ ಭಟ್ ಮದುವೆಯಾಗದೆ ಪ್ರಭಾಕರ್ ಬಾಳಿಗ ಎಂಬ ವ್ಯಕ್ತಿಯ ಜೊತೆ ಲಿವ್ಇನ್ ರಿಲೇಶನ್ಶಿಪ್ನಲ್ಲಿದ್ದರು. ಆದರೆ ಅವರಿಗೆ ಮಗು ಆಗಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಹೀಗಾಗಿ ಅನನ್ನ ಭಟ್ ಇದ್ದಳೋ ಇಲ್ವೋ ಎನ್ನುವುದೇ ನಿಗೂಢವಾಗಿದೆ.
1999ರಿಂದ 2007ರ ವರೆಗೆ ಸುಜಾತಾ ಭಟ್ ರಿಪ್ಪನಪೇಟೆಯಲ್ಲಿ ವಾಸವಾಗಿದ್ದರು. ರಿಪ್ಪನ್ಪೇಟೆಯ ಹೊಸನಗರ ರಸ್ತೆ ಬಳಿ ಪ್ರಭಾಕರ್ ಬಾಳಿಗ ಜೊತೆ ಲಿವಿಂಗ್ ರಿಲೇಶನ್ಶಿಪ್ನಲ್ಲಿದ್ದರು. ಆದರೆ, ಪ್ರಭಾಕರ್ ಮತ್ತು ಸುಜಾತಾ ದಂಪತಿ ಎಂದು ಎಲ್ಲರೂ ಭಾವಿಸಿದ್ದರು. ಪ್ರಭಾಕರ್ ಈಗಾಗಲೇ ಮೃತಪಟ್ಟಿದ್ದಾರೆ. ಸುಜಾತಾ ಭಟ್ ರಿಪ್ಪನಪೇಟೆಯಲ್ಲಿ ಎರಡು ನಾಯಿಗಳನ್ನೇ ತಮ್ಮ ಮಕ್ಕಳು ಎಂದುಕೊಂಡು ಆರೈಕೆ ಮಾಡುತ್ತಿದ್ದರು. ಇವರ ಈ ನಿಸ್ವಾರ್ಥ ಸೇವೆ ನೋಡಿ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗೆ ಸುಜಾತಾ ಭಟ್ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು.
ಸುಜಾತಾ ಭಟ್ ರಿಪ್ಪನಪೇಟೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 2004ರಲ್ಲಿ ತೇಜಸ್ವಿನಿ ಮಹಿಳಾ ಸ್ವಸಹಾಯ ಸಂಘದ ಸದಸ್ಯತ್ವ ಪಡೆದಿದ್ದರು. ರಿಜಿಸ್ಟ್ರರ್ನಲ್ಲಿ ಸುಜಾತಾ ಬಾಳಿಗ ಹೆಸರಿನಲ್ಲಿ ಹಸ್ತಾಕ್ಷರ ಕಂಡುಬಂದಿದೆ. ಇದರ ನಂತರ 2007ರ ನಂತರ ಸೊಸೈಟಿಯಲ್ಲಿ ಯಾವುದೇ ಹಣಕಾಸಿನ ವ್ಯವಹಾರ ಇಟ್ಟುಕೊಂಡಿರಲಿಲ್ಲ. ಸಂಘದ ಹೆಸರಿನಲ್ಲಿ ಒಂದಿಷ್ಟು ಸಾಲ ಪಡೆದಿದ್ದರು. ಅದನ್ನು ವಾಪಸ್ ಕಟ್ಟಿರಲಿಲ್ಲ. ಪ್ರಭಾಕರ್ ಬೀಡಾ ಅಂಗಡಿ ಇಟ್ಟುಕೊಂಡಿದ್ದರು. ಅವರ ಎಲ್ಲ ಹಣಕಾಸಿನ ವ್ಯವಹಾರವನ್ನು ಸುಜಾತಾ ಅವರೇ ನೋಡಿಕೊಳ್ಳುತ್ತಿದ್ದರು ಎಂಬ ಮಾಹಿತಿಯನ್ನು ಎಸ್ಐಟಿ ಕಲೆಹಾಕಿದೆ.
























