ಕಾರವಾರ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ದೂರು ನೀಡಿದ ಮುಸುಕುಧಾರಿ ವ್ಯಕ್ತಿಯನ್ನು ಸರಿಯಾಗಿ ತನಿಖೆ ನಡೆಸಿ, ಷಡ್ಯಂತ್ರ ಬಯಲು ಮಾಡುವ ಕೆಲಸವನ್ನು ಸರ್ಕಾರ ಮಾಡಲಿ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಸರ್ಕಾರ SIT ರಚನೆ ಮಾಡಿದ್ದರ ಬಗ್ಗೆಯೇ ಅನುಮಾನವಿದೆ. ಕ್ಷೇತ್ರದ ಹೆಸರು ಹಾಳು ಮಾಡಲು ಎಡಪಂಥೀಯರ ಜೊತೆಗೆ ಸಿಎಂ ಸಿದ್ದರಾಮಯ್ಯ ಕೈಜೋಡಿಸಿದ್ದಾರೆಯೇ ಎಂಬ ಬಗ್ಗೆ ಸಂದೇಹ ಇದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಸುಕುಧಾರಿ ಶವ ಹೂತಿದ್ದಾಗಿ ಹೇಳಿ ಕಾಡು ಪೂರ್ತಿ ಅಗೆಸಿದರೂ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಅವನ ಹಿನ್ನೆಲೆ, ಅವನು ಈ ಕೆಲಸಕ್ಕೆ ಕೈ ಹಾಕಿದ್ದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ತಿಳಿಯಲು SIT ವಿಶೇಷ ತನಿಖೆ ನಡೆಸಲಿ ಎಂದು ಅವರು ಆಗ್ರಹಿಸಿದ್ದಾರೆ.
























