ತಮಿಳುನಾಡಿನ ಹಿರಿಯ ನಾಯಕ ಸಿ.ಪಿ.ರಾಧಾಕೃಷ್ಣನ್ಗೆ ಒಲಿದು ಬಂದ ಭಾಗ್ಯ
ನವದೆಹಲಿ: ಜಗದೀಪ್ ಧನ್ಕರ್ ರಾಜೀನಾಮೆಯಿಂದ ತೆರವಾಗಿರುವ ಉಪರಾಷ್ಟ್ರಪತಿ ಸ್ಥಾನದ ಚುನಾವಣೆಗೆ ಅಭ್ಯರ್ಥಿಯನ್ನು ಆಯಕೆ ಮಾಡುವಲ್ಲೂ ಬಿಜೆಪಿ ಅಚ್ಚರಿಯೆ ನಡೆ ತೋರಿಸಿದೆ. ಕರ್ನಾಟಕದ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಸಹಿತ ಹಲವು ಪ್ರಮುಖರು ಉಪರಾಷ್ಟ್ರಪತಿ ರೇಸ್ನಲ್ಲಿ ಇದ್ದರೂ ಕೊನೆಗೆ ಆಯ್ಕೆಯಾಗಿರುವುದು ಮಹಾರಾಷ್ಟ್ರದ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್. ಅಷ್ಟರ ತನಕ ರಾಧಾಕೃಷ್ಣನ್ ಹೆಸರು ಉಲ್ಲೇಖದಲ್ಲೇ ಇರಲಿಲ್ಲ ಎನ್ನುವುದು ಗಮನಾರ್ಹ ಅಂಶ.
ಉಪರಾಷ್ಟ್ರಪತಿ ಚುನಾವಣೆಗೆ ಸಿ.ಪಿ.ರಾಧಾಕೃಷ್ಣನ್ ಅವರನ್ನು ಎನ್ಡಿಎ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವತದಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ರಾಧಾಕೃಷ್ಣನ್ ಹೆಸರನ್ನು ಅಂತಿಮಗೊಳಿಸಲಾಯಿತು. ಉಪರಾಷ್ಟ್ರಪತಿ ಹುದ್ದೆಗೆ ಹಲವು ಹೆಸರುಗಳು ಕೇಳಿ ಬಂದಿದ್ದರೂ ಅಂತಿಮವಾಗಿ ಸಿ.ಪಿ ರಾಧಾಕೃಷ್ಣನ್ ಅವರನ್ನು ಆಯ್ಕೆ ಮಾಡಲಾಯಿತು.
ವಿಷಯಗಳ ಬಗ್ಗೆ ಜ್ಞಾನ, ಉತ್ತಮ ಸಂಸದೀಯ ಪಟು ಜೊತೆಗೆ ದಕ್ಷಿಣ ಭಾರತದ ಮೂಲದ ವ್ಯಕ್ತಿಯನ್ನು ಆಯ್ಕೆ ಮಾಡಲಾಗಿದೆ ಎಂಬ ಸಂದೇಶ ಕಳುಹಿಸಲು ಸಿ.ಪಿ ರಾಧಾಕೃಷ್ಣನ್ ಅವರ ಹೆಸರನ್ನೇ ಬಿಜೆಪಿ ಅಂತಿಮಗೊಳಿಸಿದೆ ಎನ್ನಲಾಗುತ್ತಿದೆ. ರಾಧಾಕೃಷ್ಣನ್ ತಮಿಳುನಾಡಿನವರು, ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದವರು. 40 ವರ್ಷಕ್ಕೂ ಅಧಿಕ ವರ್ಷ ಸಾರ್ವಜನಿಕ ರಂಗದಲ್ಲಿದ್ದಾರೆ. ತಮಿಳುನಾಡಿನಲ್ಲಿ ನೆಲೆ ಗಟ್ಟಿಗೊಳಿಸಲು ಯತ್ನಿಸುತ್ತಿರುವ ಬಿಜೆಪಿ ಅಲ್ಲಿನವರನ್ನೇ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಮಾಡಿದೆ.
ಸಿಪಿ ರಾಧಾಕೃಷ್ಣನ್ ಯಾರು?
ತಮಿಳುನಾಡಿನಲ್ಲಿ ಜನಿಸಿದ ರಾಧಾಕೃಷ್ಣನ್ ಕಳೆದ ವರ್ಷ ಜುಲೈನಿಂದ ಮಹಾರಾಷ್ಟ್ರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 68 ವರ್ಷ ವಯಸ್ಸಿನ ಅವರು ಈ ಹಿಂದೆ ಫೆಬ್ರವರಿ 2023ರಿಂದ ಜುಲೈ 2024ರವರೆಗೆ ಜಾರ್ಖಂಡ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಮಾರ್ಚ್ ಮತ್ತು ಜುಲೈ 2024ರ ನಡುವೆ ಅವರು ತೆಲಂಗಾಣ ರಾಜ್ಯಪಾಲರಾಗಿ ಮತ್ತು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದರು. 2023ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ನೇಮಕಗೊಂಡ ಮೊದಲ ನಾಲ್ಕು ತಿಂಗಳೊಳಗೆ ರಾಧಾಕೃಷ್ಣನ್ ರಾಜ್ಯದ ಎಲ್ಲ 24 ಜಿಲ್ಲೆಗಳಿಗೆ ಪ್ರಯಾಣಿಸಿ ನಾಗರಿಕರು ಮತ್ತು ಜಿಲ್ಲಾ ಅಧಿಕಾರಿಗಳೊಂದಿಗೆ ಸಂವಹನ ನಡೆಸಿದ್ದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಭಾರತೀಯ ಜನಸಂಘದೊಂದಿಗೆ ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದ ಅವರು 1998 ಮತ್ತು 1999ರಲ್ಲಿ ಎರಡು ಬಾರಿ ಕೊಯಮತ್ತೂರು ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದಾಗ (2004-2007) ಅವರು 93 ದಿನಗಳ ಕಾಲ 19 ಸಾವಿರ ಕಿಮೀ ‘ರಥಯಾತ್ರೆ’ಯನ್ನು ಕೈಗೊಂಡಿದ್ದರು. ಭಾರತದ ಎಲ್ಲಾ ನದಿಗಳ ಜೋಡಣೆ, ಭಯೋತ್ಪಾದನೆ ನಿರ್ಮೂಲನೆ, ಏಕರೂಪ ನಾಗರಿಕ ಸಂಹಿತೆ ಜಾರಿ, ಅಸ್ಪೃಶ್ಯತೆಯನ್ನು ಹೋಗಲಾಡಿಸುವುದು ಮತ್ತು ಮಾದಕ ದ್ರವ್ಯಗಳ ಪಿಡುಗನ್ನು ಎದುರಿಸುವುದು ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಯಾತ್ರೆಯನ್ನು ಆಯೋಜಿಸಲಾಗಿತ್ತು. ಅವರು ವಿಭಿನ್ನ ಕಾರಣಗಳಿಗಾಗಿ ಇನ್ನೂ ಎರಡು ಪಾದಯಾತ್ರೆಗಳನ್ನು ಕೈಗೊಂಡಿದ್ದರು.
1957 ರಲ್ಲಿ ತಮಿಳುನಾಡಿನ ತಿರುಪ್ಪೂರಿನಲ್ಲಿ ಜನಿಸಿದ ಅವರು ಕೊಯಮತ್ತೂರಿನ ಚಿದಂಬರಂ ಕಾಲೇಜಿನಿಂದ ಬಿಬಿಎ ಪದವಿ ಪಡೆದಿದ್ದಾರೆ. ಒಬ್ಬ ಉತ್ಸಾಹಿ ಕ್ರೀಡಾಪಟುವಾಗಿರುವ ಇವರು ಟೇಬಲ್ ಟೆನ್ನಿಸ್ನಲ್ಲಿ ಕಾಲೇಜು ಚಾಂಪಿಯನ್ ಆಗಿದ್ದರು. ಅಷ್ಟೇ ಅಲ್ಲದೇ ಓಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಸಂಸದರಾಗಿದ್ದಾಗ ಅವರು ಜವಳಿ ಸ್ಥಾಯಿ ಸಮಿತಿಯ ಅಧ್ಯಕ್ಷತೆ ವಹಿಸಿದ್ದರು ಮತ್ತು ಹಣಕಾಸು ಮತ್ತು ಸಾರ್ವಜನಿಕ ಉದ್ಯಮಗಳಿಗೆ ಸಂಬಂಧಿಸಿದ ಹಲವಾರು ಸಮಿತಿಗಳಿಗೆ ಕೊಡುಗೆ ನೀಡಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (2004) ಸಂಸದೀಯ ನಿಯೋಗದ ಭಾಗವಾಗಿದ್ದರು ಮತ್ತು ತೈವಾನ್ಗೆ ತೆರಳಿದ್ದ ಮೊದಲ ಭಾರತೀಯ ನಿಯೋಗದ ಭಾಗವಾಗಿದ್ದರು.
ರಾಧಾಕೃಷ್ಣನ್ ಸಾರ್ವಜನಿಕ ಆಡಳಿತದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ತೆಂಗಿನ ನಾರು ಮಂಡಳಿಯ ಅಧ್ಯಕ್ಷರಾಗಿದ್ದಾಗ (2016–2020) ಬೋರ್ಡ್ ದಾಖಲೆಯ 2,532 ಕೋಟಿ ರೂ. ಮೌಲ್ಯದ ವಸ್ತುಗಳನ್ನು ರಫ್ತು ಮಾಡಿತ್ತು. ಕೇರಳದ ಬಿಜೆಪಿಯ ಅಖಿಲ ಭಾರತ ಉಸ್ತುವಾರಿಯಾಗಿ (2020–2022) ಕೆಲಸ ಮಾಡಿದ್ದಾರೆ.
























