ಪುತ್ತೂರು: ಅನ್ಯಾಯ ಮಾಡಿದವರಿಗೆ ಅನ್ಯಾಯದ ರೀತಿಯಲ್ಲಿ ಬುದ್ದಿ ಕಲಿಸಿದರೆ ಏನೂ ತೊಂದರೆ ಇಲ್ಲ, ಶ್ರೀಕೃಷ್ಣ ಕೂಡಾ ಅನ್ಯಾಯ ಮಾಡಿದವರಿಗೆ ಅನ್ಯಾಯವಾಗಿ ಬಾಣ ಹೂಡುತ್ತಾನೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಪುತ್ತೂರು ತಾಲೂಕು ಯಾದವ ಸಂಘ ಹಾಗೂ ಯಾಧವ ಸಭಾ ಸಮಿತಿ ಸಂಯುಕ್ತ ಆಶ್ರಯದಲ್ಲಿ ನಡೆದ
ಶ್ರೀಕೃಷ್ಣ ಜಯಂತಿ ದಿನಾಚರಣೆಯ ಅಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮಗೆ ಮೊದಲ ದೇವರು ತಂದೆ ತಾಯಿ, ಆದರೆ ದೇವರ ಪೂಜೆಯಿಂದ ಖಂಡಿತಾ ಪ್ರತಿಫಲ ಸಿಗುತ್ತದೆ. ಆಗ ನಮ್ಮ ನಡತೆ ಒಳ್ಳೆಯ ರೀತಿ ಇರಬೇಕು ಎಂದರು. ಕೃಷ್ಣನ ಸಂದೇಶಗಳು ಎಲ್ಲಾ ಸಮಾಜಕ್ಕೆ ದಾರಿ ದೀಪ. ಭಗವದ್ಗೀತೆಯಲ್ಲಿನ ವಿಚಾರ ನಮ್ಮ ಜೀವನಕ್ಕೆ ಅಗತ್ಯವಾಗಿದೆ. ಅನ್ಯಾಯ ಮಾಡುವವರಿಗೆ ಅನ್ಯಾಯದ ರೀತಿಯಲ್ಲಿ ಬುದ್ದಿ ಕಲಿಸಿದರೆ ಎನು ತೊಂದರೆ ಇಲ್ಲ ಎಂದು ಶ್ರೀಕೃಷ್ಣ ತಿಳಿಸಿದ್ದಾನೆ ಎಂದರು.
ಬನ್ನೂರು ಎ.ವಿ.ಜಿ. ಆಂಗ್ಲಮಾಧ್ಯಮ ಶಾಲೆಯ ಆಡಳಿತಾಧಿಕಾರಿ ಗುಡ್ಡಪ್ಪ ಗೌಡ ಬಲ್ಕ ಉಪನ್ಯಾಸ ನೀಡಿ, ಹುಟ್ಟಿದವನು ಬಡವನಾಗಿದ್ದರೂ ಸಾಧಕನಾಗಬೇಕು ಎಂಬುದನ್ನು ಶ್ರೀಕೃಷ್ಣ ತೋರಿಸಿಕೊಟ್ಟಿದ್ದಾನೆ. ಆಡಳಿತ ಮಾಡಲು ಅಧಿಕಾರ, ಹುದ್ದೆಗಿಂತ ಜವಾಬ್ದಾರಿ, ನಿಷ್ಟೆ ಅಗತ್ಯ ಎಂಬುದಕ್ಕೆ ಕೃಷ್ಣ ಉದಾಹರಣೆ. ಹಾಗಾಗಿ ಕೃಷ್ಣ ನಮಗೆ ಪರಮಾತ್ಮನಾದ ಆತ ಬದುಕಿನಲ್ಲಿ ಸಾಮಾನ್ಯ ಮನುಷ್ಯರು ಏನು ಮಾಡಬಹುದು ಅದನ್ನೆ ಮಾಡಿದ್ದಾರೆ. ಶ್ರೀಕೃಷ್ಣ ನಮಗೆ ಭಗವದ್ಗೀತೆಯ ದೊಡ್ಡ ಜ್ಞಾನ ಭಂಡಾರವನ್ನೇ ಕೊಟ್ಟಿದ್ದಾನೆ. ಇದು ಅಧಿಕಾರಿ, ರಾಜಕೀಯ, ಅಧ್ಯಾಪಕ, ಕೃಷಿ ಸಹಿತ ಹಲವಾರು ಕ್ಷೇತ್ರದ ಮಾರ್ಗದರ್ಶನ ಅದರಲ್ಲಿದೆ. ಕೋಮುವಾದ ಬದಿಗಿಟ್ಟು ಎಲ್ಲರು ಸಮಾನರು ಎಂದು ತೋರಿಸಿದವನು ಶ್ರೀಕೃಷ್ಣ ಎಂದರು.
ಯಾಧವ ಸಭಾ ತಾಲೂಕು ಸಮಿತಿ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಮಾತನಾಡಿ, ಯಾರು ನಡೆಯದ ಹಾದಿಯಲ್ಲಿ ನಡೆದ ಸಾವಿರಾರು ಮಂದಿ ಅದೇ ಹಾದಿಯಲ್ಲಿ ನಡೆಯುವಂತೆ ಮಾಡುವಲ್ಲಿ ಶ್ರೀಕೃಷ್ಣ ನಮಗೆ ಆದರ್ಶ. ಸಾಮಾಜಿಕ ಮೌಲ್ಯ ಎತ್ತಿ ಹಿಡಿಯುವ ಕೆಲಸವನ್ನು ಶ್ರೀಕೃಷ್ಣ ಮಾಡುತ್ತಾನೆ. ಅದೆ ರೀತಿ ನಮ್ಮ ಶಾಸಕರು ಪುತ್ತೂರಿನ ಜನತೆಯ ಬೇಡಿಕೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಯವವ ಸಮುದಾಯದಿಂದ ಶಾಸಕರಿಗೆ ಪೂರ್ಣ ಸಹಕಾರ ನೀಡುತ್ತೇವೆ ಎಂದರು.
ತಾಲೂಕು ಗ್ಯಾರೆಂಟಿ ಯೋಜನೆ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ತಹಸೀಲ್ದಾರ್ ಎಸ್.ಬಿ ಕೂಡಲಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಕಂದಾಯಾಧಿಕಾರಿ ದಯಾನಂದ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗೋಪಾಲ್ ವಂದಿಸಿದರು.
























