ಬಿಜೆಪಿ-ಕಾಂಗ್ರೆಸ್ ಕಿತ್ತಾಟ ; ರಾಜಕೀಯ ವಿವಾದವಾಗಿ ಬದಲಾದ ಪ್ರಕರಣ
ಧರ್ಮಸ್ಥಳ: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಆರೋಪದ ತನಿಖೆಗೆ ಅವರಸದಲ್ಲಿ ಎಸ್ಐಟಿ ರಚನೆ ಮಾಡಿದ ವಿಚಾರ ಈಗ ರಾಜಕೀಯ ವಿವಾದವಾಗಿ ಬದಲಾಗಿದೆ. ಸರ್ಕಾರದ ವಿರುದ್ಧ ಬಿಜೆಪಿ ಮುಗಿಬಿದ್ದಿದ್ದು, ನಿನ್ನೆ ಬಿಜೆಪಿ ಎಂಎಲ್ಸಿ ವಿಶ್ವನಾಥ್ ನೇತೃತ್ವದಲ್ಲಿ ಬೆಂಗಳೂರಿನಿಂದ ಧರ್ಮಸ್ಥಳ ತನಕ ಬೃಹತ್ ವಾಹನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಇದರ ಬೆನ್ನಿಗೆ ಭಾನುವಾರ (ಆ.17) ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಶಾಸಕರ ನಿಯೋಗ ಧರ್ಮಸ್ಥಳಕ್ಕೆ ಭೇಟಿ ನೀಡಲಿದೆ.
ಪೊಲೀಸರ ವಿಚಾರಣೆ, ಸ್ಥಳ ಪರಿಶೋಧನೆಯಲ್ಲಿ ಅನಾಮಿಕ ಮುಸುಕುಧಾರಿ ಮಾಡಿದ ಆರೋಪ ಸಾಬೀತಾಗಿಲ್ಲ. ಹೀಗಾಗಿ ಇದು ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯಕ್ಕೆ ಧಕ್ಕೆ ತರಲು ಮಾಡಿದ ಷಡ್ಯಂತ್ರ ಎಂದು ಬಿಜೆಪಿ ಆರೋಪಿಸುತ್ತಿದೆ. ಧರ್ಮಸ್ಥಳ ಕ್ಷೇತ್ರದ ಜೊತೆ ನಾವು ಎಂಬ ಘೋಷವಾಕ್ಯದಡಿ ಈಗಾಗಲೇ ಸಾವಿರಾರು ಜನ ಧರ್ಮಸ್ಥಳ ತಲುಪಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಇಂದು ಶಾಸಕರ ಜೊತೆ ಬಂದು ದೇವಸ್ಥಾನದಲ್ಲಿ ಸಂಕಲ್ಪ ಮಾಡಲಿದ್ದಾರೆ.
ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತಿದ್ದೇನೆ ಎಂಬ ಅನಾಮಿಕನ ಹೇಳಿಕೆ ಇಡೀ ದೇಶದಲ್ಲಿ ಕೋಲಾಹಲ ಸೃಷ್ಟಿಸಿದೆ. ಧರ್ಮಸ್ಥಳ ಕ್ಷೇತ್ರದ ಭಕ್ತರಿಗೂ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬ ಸಂಶಯ ಕಾಡಿತ್ತು. ಇದಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡದ ಮೂಲಕ ವಿಚಾರಣೆ, ಶೋಧನೆ ನಡೆಸಿದೆ. ಆದರೆ ಶೋಧಕಾರ್ಯದಲ್ಲಿ ಯಾವುದೇ ಕುರುಹುಗಳು ಸಿಗದಿರುವ ಹಿನ್ನೆಲೆ ಇದೀಗ ಬಿಜೆಪಿ ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬಿದ್ದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಬಿಜೆಪಿ ಶಾಸಕರ ಜೊತೆ ಇಂದು ದೇವರ ದರ್ಶನ ಮಾಡಲಿದ್ದಾರೆ.
ಮುಸುಕುಧಾರಿಯ ವಿಚಾರಣೆ
ಈ ನಡುವೆ ಧರ್ಮಸ್ಥಳಲ್ಲಿ ಉತ್ಖನನ ಕಾರ್ಯವನ್ನು ವಿಶೇಷ ತನಿಖಾ ತಂಡ ತಾತ್ಕಾಲಿಕವಾಗಿ ಕೈಬಿಟ್ಟಿದ್ದು ದೂರುದಾರ ಮುಸುಕುಧಾರಿಯನ್ನು ತೀವ್ರ ವಿಚಾರಣೆ ನಡೆಸುತ್ತಿದೆ. ಕಳೆದ ಜುಲೈ 29ರಂದು ಆರಂಭಗೊಂಡು 15 ದಿನಗಳ ಕಾಲ 17 ಜಾಗದಲ್ಲಿ ನಡೆದ ಉತ್ಖನನದ ವೇಳೆ ಅನಾಮಿಕ ಮುಸುಕುಧಾರಿ ಹೇಳಿದಂತೆ 6ನೇ ಜಾಗ ಬಿಟ್ಟರೆ ಬೇರೆ ಎಲ್ಲೂ ಏನೂ ಸಿಗದ ಕಾರಣ ಎಸ್ಐಟಿ ಅಧಿಕಾರಿಗಳು ಉತ್ಖನನ ಕಾರ್ಯವನ್ನು ಅಂತ್ಯಗೊಳಿಸಿದ್ದಾರೆ. ಮುಸುಕುಧಾರಿ ಇನ್ನೂ 13 ಪಾಯಿಂಟ್ಗಳು ಬಾಕಿ ಇವೆ ಅಂತ ಹೇಳಿದರೂ ಗುಂಡಿ ಶೋಧವನ್ನು ಕೈಬಿಟ್ಟು ದೂರುದಾರನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡು ಸಂಜೆಯವರೆಗೆ ವಿಚಾರಣೆ ಮಾಡಿದ್ದಾರೆ.
ತಲೆ ಬುರುಡೆ ತಂದ ಸ್ಥಳದಲ್ಲಿ ಸೋಮವಾರ ಮಹಜರು ನಡೆಸಲಿದ್ದು ಬಳಿಕ ತನಿಖೆಯನ್ನು ಎಸ್ಐಟಿ ಮುಂದುವರಿಸಲಿದೆ. 2010ರಲ್ಲಿ ಕಲ್ಲೇರಿಯಲ್ಲಿ ಬಾಲಕಿಯ ಶವ ಹೂತಿದ್ದಾಗಿ ಹೇಳಿದ ದೂರುದಾರ ಉತ್ಖನನ ನಡೆಸಿದಾಗ ಕಳೇಬರ ಸಿಗದೆ ಇದ್ದಾಗ ಸ್ಥಳೀಯರನ್ನು ಕೇಳಿ ಎಂದು ವಾದಿಸಿದ್ದ. ಶವ ಹೂತ ನಂತರ ಕುಡಿಯಲು ನೀರು, ಸಲಕರಣೆಗಳನ್ನು ತೊಳೆಯಲು ಸ್ಥಳೀಯ ಮನೆಗೆ ಹೋಗಿದ್ದಾಗಿ ಆತ ಹೇಳಿದ್ದ. ಹೀಗಾಗಿ ಸ್ಥಳೀಯರನ್ನು ಎಸ್ಐಟಿ ವಿಚಾರಣೆ ಒಳಪಡಿಸಿದೆ. ನ್ಯಾಯಾಲಯಕ್ಕೆ ತಂದಿದ್ದ ತಲೆಬುರುಡೆ ಬಗ್ಗೆ ಅನಾಮಿಕ ಗೊಂದಲದ ಹೇಳಿಕೆ ನೀಡುತ್ತಿದ್ದಾನೆ ಎನ್ನಲಾಗುತ್ತಿದೆ.
























