ಪುತ್ತೂರು: ವಿಶ್ವಹಿಂದೂ ಪರಿಷದ್ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ವಿಶ್ವಹಿಂದೂ ಪರಿಷದ್ ಪುತ್ತೂರು ಜಿಲ್ಲೆ, ನಗರ ಪ್ರಖಂಡ, ಗ್ರಾಮಾಂತರ ಪ್ರಖಂಡ ಮತ್ತು ಪುತ್ತೂರು ಮೊಸರುಕುಡಿಕೆ ಉತ್ಸವ ಸಮಿತಿಯಿಂದ ಅಟ್ಟಿ ಮಡಿಕೆ ಒಡೆಯುವ ಸಾಹಸ ಹಾಗೂ ವೈಭವದ ಶೋಭಾಯಾತ್ರೆ ಶನಿವಾರ ಸಂಜೆ ಸಂಭ್ರಮ ಸಡಗರದಿಂದ ನಡೆಯಿತು.

ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿ ಅಟ್ಟಿ ಮಡಕೆ ಒಡೆಯುವ ಸಾಹಸ ಪ್ರದರ್ಶನಕ್ಕೆ ವಿಶ್ವಹಿಂದು ಪರಿಷದ್ ಪುತ್ತೂರು ಪ್ರಖಂಡದ ಮಾಜಿ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ಅವರು ಉದ್ಘಾಟಿಸಿದರು. ಬಜರಂಗದಳ ಪುತ್ತೂರು ಜಿಲ್ಲೆ ಸುರಕ್ಷಾ ಪ್ರಮುಖ್ ಸಂತೋಷ್ ಸರಪಾಡಿ ಅವರು ಧ್ವಜ ಹಸ್ತಾಂತರ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು.
ಶೋಭಾಯಾತ್ರೆಯಲ್ಲಿ ಶ್ರೀ ಕೃಷ್ಣನ ಸುಂದರ ರಥದೊಂದಿಗೆ ಕೊಂಬು ಕಹಳೆಯೊಂದಿಗೆ ವಿಶೇಷ ಆಕರ್ಷಣೆಯಾಗಿ ಚಂದಳಿಕೆ ವೀರಾಂಜನೇಯ ವ್ಯಾಯಾಮ ಶಾಲೆಯಿಂದ ತಾಲೀಮು ಪ್ರದರ್ಶನ, ಕುಣಿತ ಭಜನಾ ತಂಡಗಳಿಂದ ಕುಣಿತ ಭಜನೆ, ಕೀಲುಕುದುರೆ, ಗೊಂಬೆ, ನಾಸಿಕ್ ಬ್ಯಾಂಡ್, ಶ್ರೀರಾಮ್ ಚೆಂಡೆ ಮತ್ತು ವಿವಿಧ ಕಲಾತಂಡಗಳು ಮೆರುಗು ನೀಡಿದವು. ನಗರದಲ್ಲಿ ಆಯ್ದ ಭಾಗಗಳಲ್ಲಿ ಅಟ್ಟಿ ಮಡಕೆ ಒಡೆಯುವ ಸಾಹಸಿಗರು ಅಟ್ಟಿ ಮಡಕೆ ಒಡೆದರು. ಶೋಭಾಯಾತ್ರೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವನ್ನು ತಲುಪಿ ಅಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು. ಸಭಾ ಕಾರ್ಯಕ್ರಮದ ಬಳಿಕ ಪುನಃ ಆಯ್ದ ಭಾಗಗಳಲ್ಲಿ ಹಾಕಿದ ಅಟ್ಟಿ ಮಡಕೆ ಒಡೆಯುವ ಸಾಹಹ ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಸಂಜೀವ ಮಠಂದೂರು, ವಿಶ್ವಹಿಂದು ಪರಿಷದ್ ಬಜರಂಗದಳ ಪುತ್ತೂರು ನಗರ ಮಂಡಲದ ಅಧ್ಯಕ್ಷ ದಾಮೋದರ ಪಾಟಾಳಿ, ಪುತ್ತೂರು ಮೊಸರುಕುಡಿಕೆ ಉತ್ಸವ ಸಮಿತಿ ಅಧ್ಯಕ್ಷೆ ವೇದ ಲಕ್ಷ್ಮೀಕಾಂತ್, ಸಂಚಾಲಕ ಅರುಣ್ ಕುಮಾರ್ ರೈ ಆನಾಜೆ, ಕಾರ್ಯದರ್ಶಿ ಗಣೇಶ್ ಕಾಮತ್, ವಿಶ್ವಹಿಂದೂ ಪರಿಷದ್ ಬಜರಂಗದಳ ಪುತ್ತೂರು ಗ್ರಾಮಾಂತರ ಪ್ರಖಂಡ ಅದ್ಯಕ್ಷ ಜಯಂತ್ ಶೆಟ್ಟಿ ಕಂಬಳತ್ತಡ್ಡ ಮತ್ತಿತರರು ಉಪಸ್ಥಿತರಿದ್ದರು. ಬಿಜೆಪಿ ಮುಖಂಡ ಮುರಳೀಕೃಷ್ಣ ಹಸಂತಡ್ಕ ಉಪಸ್ಥಿತರಿದ್ದರು.
























