ಪುತ್ತೂರು: ಪುತ್ತೂರು ವಿವೇಕಾನಂದ ಶಿಶುಮಂದಿರ ಮತ್ತು ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಆಶ್ರಯದಲ್ಲಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಯೋಗದಲ್ಲಿ 27ನೇ ವರ್ಷದ ಶ್ರೀಕೃಷ್ಣ ಲೋಕ ಮೆರವಣಿಗೆ ಪುತ್ತೂರು ನಗರದಾದ್ಯಂತ ಶನಿವಾರ ಸಂಭ್ರಮದಿಂದ ನಡೆಯಿತು.

ಬೆಳಿಗ್ಗೆ ಪರ್ಲಡ್ಕದಲ್ಲಿರುವ ವಿವೇಕಾನಂದ ಶಿಶುಮಂದಿರದಲ್ಲಿ ಬಾಲಕೃಷ್ಣನ ತೊಟ್ಟಿಲ ಸಂಭ್ರಮ ನಡೆದ ಬಳಿಕ ಶ್ರೀಕೃಷ್ಣ ಲೋಕ ಶೋಬಾಯಾತ್ರೆ ಶಿಶುಮಂದಿರದಿಂದ ಆರಂಭಗೊಂಡು ಮುಖ್ಯರಸ್ತೆಗೆ ಬಂದಿ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ನಿರ್ಮಿಸಿದ ಸಭಾಭವನಕ್ಕೆ ಆಗಮಿಸಿತು. ಸಾವಿರಾರು ಮಕ್ಕಳು ಶ್ರೀ ಕೃಷ್ಣನ ವೇಷ ಧರಿಸಿ, ಹೆತ್ತವರು ಸಾಂಪ್ರದಾಯಿಕ ಉಡುಗೆ ತೊಟ್ಟು ಮೆರವಣಿಗೆಯೊಂದಿಗೆ ಸಾಗಿದರು. ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಶ್ರೀ ಕೃಷ್ಣ ವೇಷಧಾರಿಗಳಿಗೆ ಸ್ಮರಣಿಕೆ ನೀಡಲಾಯಿತು.

ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ಪಂಜಿಗುಡ್ಡೆ ಉದ್ಘಾಟಿಸಿ ಶುಭ ಹಾರೈಸಿದರು. ಅಗಲ್ಪಾಡಿಯ ಅಧ್ಯಾಪಕ ಹರಿನಾರಾಯಣ ಶಿರಂತಡ್ಕ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಮಾಜ ಸೇವಕ ಅಗಿಲೆ ಯೋಗೀಶ್ಹಾಸನ ಭಾಗವಹಿಸಿದ್ದರು. ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಡೀನ್ಡಾ.ವಿಜಯ ಸರಸ್ವತಿ ದಿಕ್ಸೂಚಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಮೋಹನ್ ಕೆ., ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಗೌರವಾಧ್ಯಕ್ಷೆ ರಾಜೀ ಬಲರಾಮ ಆಚಾರ್ಯ, ಉಪಾಧ್ಯಕ್ಷೆ ಮಾಲಿನಿ ಕಷ್ಯಪ್, ಸದಸ್ಯ ಉಮೇಶ್ ಕುಮಾರ್, ವಿವೇಕಾನಂದ ಶಿಶು ಮಂದಿರದ ಸಂಚಾಲಕ ಅಕ್ಷಯ ಕುಮಾರ್ ಬಿ.ಎಸ್. ಮತ್ತಿತರರು ಉಪಸ್ಥಿತರಿದ್ದರು.
























