ಪುತ್ತೂರು: ಸ್ವಾತಂತ್ರ್ಯ ದಿನಾಚರಣೆ ಅಂದರೆ ಅದು ಸಾವಿರಾರು ದೇಶಭಕ್ತರ ತ್ಯಾಗ ಬಲಿದಾನಗಳ ಸ್ಮರಣೆಯಾಗಿದೆ. ಪ್ರತಿಯೊಬ್ಬ ಭಾರತೀಯನೂ ತಾನು ಮಾಡಬೇಕಾದ ಕರ್ತವ್ಯವನ್ನು ಸದಾ ನೆನಪಿನಲ್ಲಿ ಇಡಬೇಕಾಗಿದೆ ಎಂದು ನಿವೃತ್ತ ಯೋಧ ಮೋಹನ ಗೌಡ ಹೇಳಿದರು.

ಅವರು ತೆಂಕಿಲ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಗೈದು ಮಾತನಾಡಿದರು.
ಇಂದಿನ ಮಕ್ಕಳು ಶಾಲೆಗಳಲ್ಲಿ ತಮ್ಮ ಜವಾಬ್ದಾರಿಯನ್ನು ಅರಿತು ಶಿಕ್ಷಣವನ್ನು ಮುಂದುವರಿಸಿದರೆ ಸತ್ಪ್ರಜೆಗಳಾಗುವರು ಎಂದು ಅವರು ನುಡಿದರು.
ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ವಿವೇಕಾನಂದ ಬಿ ಎಡ್ ಕಾಲೇಜು ಹಾಗೂ ನರೇಂದ್ರ ಪದವಿಪೂರ್ವ ಕಾಲೇಜುಗಳ ಜಂಟಿ ಆಶ್ರಯದಲ್ಲಿ ಜರಗಿದ 79ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಹಿರಿಯ ಸದಸ್ಯರಾದ ಶ್ರೀನಿವಾಸ್ ಪೈ, ನಾಲ್ಕೂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಪದಾಧಿಕಾರಿಗಳು, ಪೋಷಕ ಬಂಧುಗಳು, ಶಿಕ್ಷಕ-ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನರೇಂದ್ರ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ವಂದೇ ಮಾತರಮ್, ಬಿ.ಎಡ್ ಪ್ರಶಿಕ್ಷಣಾರ್ಥಿಗಳು ಧ್ವಜಗೀತೆ ಹಾಡಿದರು. ವಿಶೇಷವಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಘೋಷ್ ಮೂಲಕ ರಾಷ್ಟ್ರಗೀತೆ ನುಡಿಸಿದರು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕ ಗುರುಗಳಾದ ಸತೀಶ್ ಕುಮಾರ್ ರೈ ಸ್ವಾಗತಿಸಿ, ನರೇಂದ್ರ ಪದವಿಪೂರ್ವ ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕಿ ರೇಣುಕಾ ವಂದಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.
ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಎನ್.ಸಿ.ಸಿ ವಿದ್ಯಾರ್ಥಿ ವೈಭವ್ ಕಾಮತ್ ಪೆರೇಡ್ ಕಮಾಂಡ್ ಮತ್ತು ಸ್ಕೌಟ್ ವಿದ್ಯಾರ್ಥಿ ಜೀವಿತ್ ಘೋಷಣೆ ಜವಾಬ್ದಾರಿ ನಿರ್ವಹಿಸಿದರು.
ಸಮಾರಂಭದ ಬಳಿಕ ಯಾದವಶ್ರೀ ಸಭಾಂಗಣದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ಕುರಿತು “ರಸಪ್ರಶ್ನೆ” ಹಮ್ಮಿಕೊಳ್ಳಲಾಗಿತ್ತು. ವಿಶೇಷವಾಗಿ ಪುತ್ತೂರು ಪುರಭವನದಲ್ಲಿ ಆಯೋಜಿತವಾದ ತಾಲೂಕು ಸ್ವಾತಂತ್ರ್ಯ ದಿನಾಚರಣಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ದೇಶಭಕ್ತಿ ನೃತ್ಯರೂಪಕವನ್ನು ಪುನಃ ಪ್ರದರ್ಶಿಸಲಾಯಿತು..
























