ಧರ್ಮಸ್ಥಳಕ್ಕೆ ಹೊರಟಿದೆ ಬೃಹತ್‌ ವಾಹನ ರ‍್ಯಾಲಿ

ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಸಿದವರ ವಿರುದ್ಧ ಸಿಡಿದೆದ್ದಿರುವ ಭಕ್ತರು

ಧರ್ಮಸ್ಥಳ : ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ಅಪಪ್ರಚಾರವನ್ನು ಖಂಡಿಸಿ ಬಿಜೆಪಿ ನೇತೃತ್ವದಲ್ಲಿ ಬೃಹತ್‌ ವಾಹನ ರ‍್ಯಾಲಿ ನೆಲಮಂಗಲದಿಂದ ಇಂದು ಹೊರಟಿದೆ. ಧರ್ಮಸ್ಥಳದೊಂದಿಗೆ ನಾವಿದ್ದೇವೆ ಎಂಬ ಘೋಷವಾಕ್ಯ ಕೂಗುತ್ತಾ ಕಾರ್ಯಕರ್ತರು ಮತ್ತು ಧರ್ಮಸ್ಥಳದ ಭಕ್ತರು ರ‍್ಯಾಲಿಯಲ್ಲಿ ಹೊರಟಿದ್ದಾರೆ. ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಈ ರ‍್ಯಾಲಿ ನಡೆಯುತ್ತಿದೆ. ರ‍್ಯಾಲಿಯಲ್ಲಿ 400ಕ್ಕೂ ಹೆಚ್ಚು ವಾಹನಗಳಲ್ಲಿ ಬಿಜೆಪಿ ಕಾರ್ಯಕರ್ತರು ಹೊರಟಿದ್ದಾರೆ.

ನೆಲಮಂಗಲ-ಕುಣಿಗಲ್ ರಸ್ತೆಯ ಕುಣಿಗಲ್ ಟೋಲ್‍ಗೇಟ್‍ನಿಂದ ಯಾತ್ರೆ ಆರಂಭಗೊಂಡಿದ್ದು, ಹಾಸನ ದಾಟಿ ಮುಂದುವರಿದಿದೆ. ಸಕಲೇಶಪುರದ ಮೂಲಕ ಶಿರಾಡಿ ಘಾಟ್ ರಸ್ತೆ ಮಾರ್ಗವಾಗಿ ರ‍್ಯಾಲಿ ಧರ್ಮಸ್ಥಳಕ್ಕೆ ತಲುಪಲಿದೆ.





















































 
 

ರ‍್ಯಾಲಿಯಲ್ಲಿ ನೂರಾರು ಜನ ಭಗವಾಧ್ವಜ ಹಿಡಿದು ಕೇಸರಿ ಶಾಲು ಧರಿಸಿ ಪಾಲ್ಗೊಂಡಿದ್ದಾರೆ. ಮಧ್ಯಾಹ್ನ ಸುಮಾರು 3 ಗಂಟೆಗೆ ರ‍್ಯಾಲಿ ಧರ್ಮಸ್ಥಳ ತಲುಪಲಿದೆ. ಕಾರ್ಯಕರ್ತರು ದೇವರ ದರ್ಶನ ಪಡೆದು ಧರ್ಮಸ್ಥಳದಲ್ಲೇ ಇಂದು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.

ಇದಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಶಾಸಕರ ನಿಯೋಗ ಭಾನುವಾರ ಧರ್ಮಸ್ಥಳಕ್ಕೆ ಭೇಟಿ ಮಾಡಲಿದೆ. ಉಡುಪಿ, ಮಂಗಳೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳ ಬಿಜೆಪಿ ಶಾಸಕರು ನಿಯೋಗದಲ್ಲಿರಲಿದ್ದಾರೆ. ಬಿಜೆಪಿ ನಾಯಕರು ಧರ್ಮಾಧಿಕಾರಿಗಳನ್ನೂ ಭೇಟಿ ಮಾಡಿ ನೈತಿಕ ಬೆಂಬಲ ಸೂಚಿಸಲಿದ್ದಾರೆ.

ಭೂಮಿ ಅಗೆಯುವ ಕಾರ್ಯ ಮುಕ್ತಾಯ?

ಈ ನಡುವೆ ಧರ್ಮಸ್ಥಳದಲ್ಲಿ ಮುಸುಕುಧಾರಿಯ ಮಾತು ನಂಬಿ ಭೂಮಿ ಅಗೆಯುವ ಕಾರ್ಯಾಚರಣೆ ಇಂದು ಮುಕ್ತಾಯವಾಗಲಿದೆ ಎನ್ನಲಾಗುತ್ತಿದೆ. ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ಹೂತು ಹಾಕಿದ್ದೇನೆಂದು ಹೇಳಿದ್ದ ಅನಾಮಿಕ ದೂರುದಾರನ ಮಾತು ನಂಬಿದ ಎಸ್‌ಐಟಿ ಅಧಿಕಾರಿಗಳು ಧರ್ಮಸ್ಥಳದ ಅರಣ್ಯದಲ್ಲಿ ಉತ್ಖನನ ನಡೆಸಿದ್ದರು. ಎಲ್ಲೂ ಏನೂ ಸಿಗದೆ ಇರುವುದರಿಂದ ಉತ್ಖನನವನ್ನು ಅಂತ್ಯಗೊಳಿಸಲು ಎಸ್‌ಐಟಿ ನಿರ್ಧರಿಸಿದೆ.

ಇನ್ನರೆಡು ದಿನದಲ್ಲಿ ಎಲ್ಲವೂ ಬಹಿರಂಗಗೊಳ್ಳಲಿದೆ. ಅನಾಮಿಕನ ಮಾತು ನಂಬಿ 15 ದಿನದಲ್ಲಿ 25ಕ್ಕೂ ಹೆಚ್ಚು ಗುಂಡಿ ತೋಡಿದರೂ ಯಾವುದೇ ಸಾಕ್ಷಿ ಸಿಗದ ಹಿನ್ನೆಲೆ ಎಸ್‌ಐಟಿ ಅಧಿಕಾರಿಗಳೇ ಮೋಸ ಹೋದಂತಿದೆ. ಹಾಗಾಗಿ, ಎಸ್‌ಐಟಿ ಅಧಿಕಾರಿಗಳು ಗುಂಡಿ ತೆಗೆದು ಮಣ್ಣು ಮುಚ್ಚುವುದನ್ನು ಕೈಬಿಟ್ಟು, ತನಿಖೆಯ ದಾರಿಯನ್ನೇ ಬದಲಿಸಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

ತನಿಖೆಗಾಗಿ ಅಧಿಕಾರಿಗಳು ಆತ ಹೇಳಿದಂತೆಲ್ಲಾ ನೆಲ ಅಗೆದಿದ್ದರು. ಜಿಪಿಆರ್ ಕೂಡ ತರಿಸಿದ್ದರು. ಆದರೆ ಒಂದೇ ಒಂದು ಕಳೇಬರದ ಎಲುಬು ಸಹ ಸಿಕ್ಕಿಲ್ಲ. ಹಾಗಾಗಿ, ಮುಂದಕ್ಕೆ ಮತ್ತೆ ನೆಲ ಅಗೆದರೆ ಉಪಯೋಗವಿಲ್ಲ ಅಂತ ಐಪಿಎಸ್ ಅಧಿಕಾರಿಗಳು ಅನಾಮಿಕನಿಗೆ ಆರಂಭದಲ್ಲೇ ಮಾಡಬೇಕಿದ್ದ ಮಂಪರು ಪರೀಕ್ಷೆ ಮಾಡಲು ಸಿದ್ಧತೆ ನಡೆಸಿದ್ದಾರೆ. ಹೀಗಾಗಿ ಇನ್ನು ಉತ್ಖನನ ನಡೆಸದಿರಲು ತೀರ್ಮಾನಿಸಿದ್ದು, ಇಂದೇ ಬಹುತೇಕ ಉತ್ಖನನ ಕಾರ್ಯ ಕೊನೆಗೊಳ್ಳಲಿದೆ.

20 ದಿನದಿಂದ ಒಂದೂ ಸಾಕ್ಷಿಯೂ ಸಿಗದ ಕಾರಣ ಧರ್ಮಸ್ಥಳದ ಭಕ್ತರು-ವಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದಿದ್ರೆ, ಇತ್ತ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಖಾಲಿ ಡಬ್ಬ, ಷಡ್ಯಂತ್ರ, ಕುತಂತ್ರ ಎಂದಿರುವುದು ತನಿಖೆಯ ಹಾದಿಯ ಬದಲಾವಣೆಗೆ ಕಾರಣವಾಗಿದೆ.

ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡ ಸೋಮವಾರ ಮಾತನಾಡ್ತೀನಿ ಎಂದಿರುವುದರಿಂದ ಎಸ್‌ಐಟಿ ನೆಲ ಅಗೆಯುವ ಕಾರ್ಯ ಕೈಬಿಟ್ಟು ಸರ್ಕಾರಕ್ಕೆ ವರದಿ ನೀಡಲಿದೆ. ಈ ನಡುವೆ ಆರಂಭದಲ್ಲಿ ಅನಾಮಿಕ ತಂದ ತಲೆ ಬುರುಡೆಯ ರಹಸ್ಯ ಬೇಧಿಸಲು ಆರಂಭಿಸಿರುವ ಎಸ್‌ಐಟಿ ಈ ಕೇಸ್‌ನಲ್ಲಿ ಆತನನ್ನು ಬಂಧಿಸಿ ತನಿಖೆ ನಡೆಸುವ ಸಾಧ್ಯತೆಯಿದೆ.

error: Content is protected !!
Scroll to Top