ಪುತ್ತೂರು: ಕಠಿಣ ಪರಿಶ್ರಮವಿಲ್ಲದೆ ಸಫಲತೆ ಸಾಧ್ಯವಿಲ್ಲ. ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರವಿರಬೇಕು. ಸಮಯ ವ್ಯರ್ಥ ಮಾಡದೆ ಅಭ್ಯಾಸದಲ್ಲಿ ತೊಡಗಿಕೊಳ್ಳುವಂತೆ ವಿದ್ಯಾರ್ಥಿಗಳ ಹೆತ್ತವರು ಮಕ್ಕಳನ್ನು ಗಮನಿಸುತ್ತಿರಬೇಕು. ಅಂಬಿಕಾ ವಿದ್ಯಾಲಯ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಆಟೋಟ, ಸಾಂಸ್ಕೃತಿಕ ಸ್ಪರ್ಧೆಗಳಿಗೆ ಪ್ರೋತ್ಸಾಹ ಕೊಡುತ್ತಿದೆ. ನೈತಿಕ ತರಗತಿ, ಮಾರ್ಗದರ್ಶನ ತರಬೇತಿಗಳು ನಡೆಯುತ್ತ ಇವೆ. ದೇಶಭಕ್ತಿಯನ್ನು ಮೂಡಿಸುವ ಕಾರ್ಯಕ್ರಮಗಳು , ಇಂಡಸ್ಟ್ರಿಯಲ್ ವಿಸಿಟ್, ಸಿ ಎ ಕೋಚಿಂಗ್ ತರಗತಿಗಳು, ಮೆಂಟರಿಂಗ್ ಸಿಸ್ಟಮ್ ಮುಂತಾದವುಗಳಿಂದ ವಿದ್ಯಾರ್ಥಿಗಳ ಸಮಸ್ಯೆಗಳ ನಿವಾರಣೆ, ಸರ್ವಾಂಗೀಣ ಬೆಳವಣಿಗೆಗೆ ಬೇಕಾದ ವ್ಯವಸ್ಥೆಗಳೆಲ್ಲವೂ ಇವೆ ಎಂದು ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಹೇಳಿದರು.
ಅವರು ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ಆಚಾರ್ಯ ಮಾತನಾಡಿ, ವೈಯಕ್ತಿಕವಾಗಿ ಪೋಷಕರು ಸಲಹೆ ಸೂಚನೆಗಳನ್ನು ನೀಡಿ. ಪ್ರಥಮ ಪಿಯುಸಿ ಆರಂಭದಿಂದಲೇ ಚೆನ್ನಾಗಿ ತಯಾರಿ ಮಾಡುವಂತೆ ಪೋಷಕರು ಪ್ರೋತ್ಸಾಹಿಸಿ .ಅನುಭವಿ ಅಧ್ಯಾಪಕರಿಂದ ಪಡೆದ ವಿದ್ಯಾಭ್ಯಾಸ ಶಾಶ್ವತ ಎಂದರು.
ಸಭೆಯ ಅಧ್ಯಕ್ಷತೆಯನ್ನು ನಟ್ಟೋಜ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ವಹಿಸಿ, ಮಾತನಾಡಿ, ದೇಶದ ಋಣ ಮಕ್ಕಳಿಗೆ ಮಾತ್ರವಲ್ಲ ಎಲ್ಲರಿಗೂ ಇರಬೇಕು. ರಾಷ್ಟ್ರಭಕ್ತಿಯ ಶಿಕ್ಷಣ ವಿದ್ಯಾಲಯಗಳಲ್ಲಿ ಅಗತ್ಯ. ಅಂಬಿಕಾದ ವಿದ್ಯಾರ್ಥಿಗಳು ಯಾವುದರಲ್ಲೂ ಹಿಂದೆ ಇಲ್ಲ. ನಮ್ಮ ವಿದ್ಯಾರ್ಥಿಗಳು ಎನ್ ಡಿ ಎ ತೇರ್ಗಡೆ ಹೊಂದಿ ಡಿಫೆನ್ಸ್ ಕಾಲೇಜಿಗೆ ಸೇರಿದ್ರೆ ಒಂದು ಲಕ್ಷ ರೂಪಾಯಿ ಕೊಡುವ ಘೋಷಣೆ ಮಾಡಿದರು.
ನಟ್ಟೋಜಾ ಫೌಂಡೇಶನ್ ಟ್ರಸ್ಟ್ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ , ಉಪನ್ಯಾಸಕ ವರ್ಗ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕಿ ಅಶ್ವಿನಿ ಯು ನಾಯಕ್ ಕಾರ್ಯಕ್ರಮ ನಿರೂಪಿಸಿದರು.
























