ನವದೆಹಲಿ: ಐತಿಹಾಸಿಕ ಕೆಂಪು ಕೋಟೆಯ ಮೇಲೆ ನಾಳೆ 79 ನೇರ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದ್ದು, ಪ್ರಧಾನಿ ಮೋದಿ ಅವರು ಧ್ವಜಾರೋಹಣ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಂಪು ಕೋಟೆ ಸರ್ವ ರೀತಿಯಲ್ಲಿ ಸಜ್ಜಾಗಿದೆ.
ಸ್ವಾತಂತ್ರ್ಯ ದಿನದ ಬೆಳಗ್ಗೆ 9 ಗಂಟೆಗೆ ಕೆಂಪು ಕೋಟೆಯಲ್ಲಿ ಸಶಸ್ತ್ರ ಪಡೆಗಳು ಮತ್ತು ದೆಹಲಿ ಪೊಲೀಸರಿಂದ ಗೌರವ ವಂದನೆಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜ ಹಾರಿಸಲಿದ್ದಾರೆ. ನಂತರ ರಾಷ್ಟ್ರಗೀತೆ ಹಾಡಲಾಗುವುದು. 21 ಗುಂಡುಗಳ ಗೌರವ ವಂದನೆ ಮತ್ತು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್‌ಗಳಿಂದ ಹೂವಿನ ಮಳೆಗೆರೆಯಲಾಗುತ್ತದೆ.
ನಂತರ ಪ್ರಧಾನಿ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಆ ಬಳಿಕ ಮತ್ತೆ ರಾಷ್ಟ್ರಗೀತೆ ಹಾಡಲಾಗುತ್ತದೆ. ನಂತರ ತ್ರಿವರ್ಣದ ಬಲೂನ್‌ಗಳನ್ನು ಗಾಳಿಯಲ್ಲಿ ಹಾರಿ ಬಿಡಲಾಗುವುದು.
ಆ. 14 ರಂದು ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ದೇಶ ಬೆಳೆದು ಬಂದ ಹಾದಿ, ದೇಶದ ಮುಂದಿರುವ ಹೊಸ ಸವಾಲುಗಳು, ಅವಕಾಶಗಳ ಕುರಿತು ಅವರು ಮಾತನಾಡಲಿದ್ದಾರೆ.
ಕೇಂದ್ರ ಗೃಹ ಸಚಿವಾಲಯವು ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನ ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ, ರಾಷ್ಟ್ರ ಪತಿಗಳ ವಿಶಿಷ್ಟ ಸೇವಾ ಪದಕ, ಪ್ರತಿಭಾನ್ವಿತ ಸೇವಾ ಪದಕ ವಿಜೇತರ ಹೆಸರನ್ನು ಪ್ರಕಟಿಸುತ್ತದೆ.
























