ಸಾಲ ಪಡೆದು ಹಿಂದಿರುಗಿಸದ ಕುರಿತು ಕೇಸ್ ದಾಖಲಿಸಿದ ಉದ್ಯಮಿ
ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ವಿರುದ್ಧ 60 ಕೋ. ರೂ. ವಂಚಿಸಿದ ಕುರಿತು ಎಫ್‌ಐಆರ್ ದಾಖಲಾಗಿದೆ. ಮುಂಬೈ ಮೂಲದ ಉದ್ಯಮಿಯೊಬ್ಬರು ದಂಪತಿ ವಿರುದ್ಧ ದೂರು ನೀಡಿದ್ದಾರೆ.
ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ಜುಹು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚನೆ ಮೊತ್ತ 10 ಕೋಟಿ ರೂ.ಗಳಿಗಿಂತ ಹೆಚ್ಚಿರುವುದರಿಂದ ಪೊಲೀಸರು ಪ್ರಕರಣವನ್ನು ಆರ್ಥಿಕ ಅಪರಾಧಗಳ ವಿಭಾಗಕ್ಕೆ ವರ್ಗಾಯಿಸಿದ್ದಾರೆ. ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ದೀಪಕ್ ಕೊಠಾರಿ ಎಂಬ ಹಿರಿಯ ಉದ್ಯಮಿ 60 ಕೋಟಿ ರೂ. ವಂಚನೆ ಪ್ರಕರಣ ದಾಖಲಿಸಿದ್ದಾರೆ. ದೀಪಕ್ ಕೊಠಾರಿ ಲೋಟಸ್ ಕ್ಯಾಪಿಟಲ್ ಫೈನಾನ್ಶಿಯಲ್ ಸರ್ವೀಸಸ್ ಎಂಬ ಸಂಸ್ಥೆಯ ನಿರ್ದೇಶಕರಾಗಿದ್ದಾರೆ.
ಶಿಲ್ಪಾ ಮತ್ತು ರಾಜ್ ಕುಂದ್ರಾ ಅವರನ್ನು ದಲ್ಲಾಳಿ ರಾಜೇಶ್ ಆರ್ಯ ಎಂಬಾತ ಕೊಠಾರಿಗೆ ಪರಿಚಯಿಸಿದ್ದ. ಈ ಸೆಲೆಬ್ರಿಟಿ ದಂಪತಿ ಆ ಸಮಯದಲ್ಲಿ ‘ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್’ ಎಂಬ ಕಂಪನಿಯ ನಿರ್ದೇಶಕರಾಗಿದ್ದರು. ಶಿಲ್ಪಾ ಮತ್ತು ರಾಜ್ 2015ರಲ್ಲಿ ದೀಪಕ್ ಬಳಿ 75 ಕೋಟಿ ರೂ. ಸಾಲಕ್ಕಾಗಿ ಬೇಡಿಕೆ ಇಟ್ಟಿದ್ದರು. ಅದಕ್ಕೆ ಅವರು ಶೇಕಡಾ 12ರಷ್ಟು ಬಡ್ಡಿಯನ್ನು ಪಾವತಿಸಬೇಕಾಗಿತ್ತು. ಈ ಬಡ್ಡಿಯನ್ನು ತಪ್ಪಿಸಲು ಮೊತ್ತವನ್ನು ಸಾಲದ ಬದಲು ಕಂಪನಿಯಲ್ಲಿ ಹೂಡಿಕೆ ಎಂದು ತೋರಿಸಿದರು. ದೀಪಕ್ ಕೊಠಾರಿ ಮೊದಲ ಕಂತಲ್ಲಿ 31.95 ಕೋಟಿ ರೂ. ಹಾಗೂ ಎರಡನೇ ಕಂತಲ್ಲಿ 28.54 ಕೋಟಿ ರೂ. ನೀಡಿದ್ದರು. ಈ ಮೂಲಕ ಒಟ್ಟೂ 60.48 ಕೋಟಿ ಸಾಲವನ್ನು ಈ ಶಿಲ್ಪಾ ಶೆಟ್ಟಿ ದಂಪತಿಗೆ ನೀಡಲಾಯಿತು. ರಾಜ್ ಮತ್ತು ಶಿಲ್ಪಾ ಪ್ರತಿ ತಿಂಗಳು ಮೊತ್ತವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡಿದ್ದರು. ಆದರೆ ಆ ಮಾತು ಉಳಿಸಿಕೊಂಡಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎಫ್‌ಐಆರ್ ಪ್ರಕಾರ ಶಿಲ್ಪಾ ಶೆಟ್ಟಿ ಈ ವಹಿವಾಟಿಗೆ ಸಾಕ್ಷಿಯಾಗಿದ್ದರು. ಆದರೆ ಅವರು ಸೆಪ್ಟೆಂಬರ್ 2016ರಲ್ಲಿ ಕಂಪನಿಯ ನಿರ್ದೇಶಕಿ ಹುದ್ದೆಗೆ ರಾಜೀನಾಮೆ ನೀಡಿದರು. ನಂತರ ದೀಪಕ್ ಕೊಠಾರಿ ಅವರಿಗೆ ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ಅವರ ಹಿಂದಿನ ಚಟುವಟಿಕೆಗಳ ಬಗ್ಗೆ ತಿಳಿದುಕೊಂಡರು. ಈಗ ಶಿಲ್ಪಾ ಮತ್ತು ರಾಜ್ ಈ ಹಣ ಹಿಂದಿರುಗಿಸಿಲ್ಲ ಎನ್ನಲಾಗಿದೆ.
ರಾಜ್ ಕುಂದ್ರಾ ವಿವಾದಗಳಲ್ಲಿ ಸಿಲುಕಿಕೊಳ್ಳುವುದು ಇದೇ ಮೊದಲಲ್ಲ. ಈ ಹಿಂದೆ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ಬಂಧಿಸಲಾಗಿತ್ತು.
























