13ನೇ ಸ್ಥಳದಲ್ಲಿ ಗುಂಡಿ ಅಗೆಯುವ ಕಾರ್ಯಾಚರಣೆಯೂ ಮುಗಿಯಿತು, ಮುಂದೇನು?

ಎಷ್ಟು ಅಗೆದರೂ ಶವದ ಕುರುಹು ಸಿಗದಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ನಡೆ ಬಗ್ಗೆ ಕುತೂಹಲ

ಧರ್ಮಸ್ಥಳ : ಮುಸುಕುಧಾರಿ ಅನಾಮಿಕನ ಹೇಳಿಕೆ ನಂಬಿ ಮಾಡಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಸತತ 14 ದಿನ ಭೂಮಿ ಅಗೆದರೂ ಶವ ಹೂತಿರುವ ಯಾವುದೇ ಕುರುಹು ಪತ್ತೆಯಾಗಿಲ್ಲ. ಹೀಗಾಗಿ ಎಸ್‌ಐಟಿಯ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲ ಮೂಡಿದೆ. ಮುಸುಕುಧಾರಿ ಇನ್ನೂ ಅನೇಕ ಜಾಗಗಳನ್ನು ತೋರಿಸಲು ಮುಂದಾಗಿದ್ದಾನೆ. ಆದರೆ ಇಷ್ಟರ ತನಕ ಅವನು ತೋರಿಸಿದ ಯಾವ ಜಾಗದಲ್ಲೂ ಯಾವುದೇ ಕುರುಹು ಸಿಗದಿರುವಾಗ ಎಸ್‌ಐಟಿ ಇನ್ನಷ್ಟು ಗುಂಡಿ ಅಗೆಯಲಿದೆಯಾ ಅಥವಾ ತನಿಖೆ ಬೇರೆ ಮಜಲಿನತ್ತ ಹೊರಳುತ್ತದೆಯೇ ಎನ್ನುವುದು ಇಂದು ಗೊತ್ತಾಗಲಿದೆ.

ಹತ್ತಾರು ಶವಗಳಿವೆ ಎನ್ನಲಾದ 13ನೇ ಸ್ಥಳದಲ್ಲಿ ಮಂಗಳವಾರ ಮತ್ತು ಬುಧವಾರ ಎರಡು ದಿನ ಗುಂಡಿ ಅಗೆಯಲಾಗಿದೆ. ಆದರೆ ಇಲ್ಲಿ ಕೆಸರು ಮಣ್ಣು ಬಿಟ್ಟರೆ ಮೂಳೆಯ ಒಂದು ತುಂಡು ಕೂಡ ಸಿಕ್ಕಿಲ್ಲ. ಹೀಗಾಗಿ ಮುಸುಕುಧಾರಿ ದೂರುದಾರನ ಮೇಲೆಯೇ ಅನುಮಾನ ಮೂಡಲಾರಂಭಿಸಿದೆ. ಈ ನಡುವೆ ದೂರುದಾರ ಹೆಣ ಹೂತು ಹಾಕಿದ್ದನ್ನು ನಾವು ನೋಡಿದ್ದೇವೆ ಎಂದು ಹೇಳಿಕೊಂಡು ಮತ್ತಿಬ್ಬರು ಮುಂದೆ ಬಂದಿರುವುದು ಬುಧವಾರ ನಡೆದಿರುವ ಹೊಸ ಬೆಳವಣಿಗೆ.





















































 
 

13ನೇ ತಾಣದ 2ನೇ ಜಾಗದಲ್ಲಿ ಬುಧವಾರ ಶೋಧಕಾರ್ಯ ನಡೆಸಲಾಗಿತ್ತು. 32 ಅಡಿ ಆಳಕ್ಕೆ, 13 ಅಡಿ ಅಗಲಕ್ಕೆ ಅಗೆದರೂ ಕುರುಹು ಪತ್ತೆಯಾಗಿಲ್ಲ. ಈ ನಡುವೆ ಇಬ್ಬರು ಸಾಕ್ಷಿದಾರರು ಮುಂದೆ ಬಂದಿದ್ದು, 13ನೇ ಜಾಗದಲ್ಲಿ ಶವ ಹೂತಿದ್ದನ್ನು ನಾವೂ ನೋಡಿದ್ದೇವೆ ಎಂದು ತುಕಾರಾಮ ಗೌಡ ಹಾಗೂ ಪುರಂದರ ಗೌಡ ಎಂಬವರು ಹೇಳಿದ್ದಾರೆ.

ಎಸ್‌ಐಟಿಗೆ ದೂರು ಕೊಡಲಾಗಿದೆ. ಅವರು ತನಿಖೆ ನಡೆಸಿದರೆ ನಾವು ಎಲ್ಲ ಸಾಕ್ಷಿ ಹೇಳಲು ಸಿದ್ಧ ಎಂದಿದ್ದಾರೆ. ನೇತ್ರಾವತಿ ನದಿಯ ತಟದಲ್ಲಿ ಶವ ಹೂತಿರುವ ಪ್ರಕರಣದಲ್ಲಿ ಒಬ್ಬ ಅಧಿಕಾರಿಯ ಪಾತ್ರವೂ ಇದೆ, ಅದನ್ನು ಎಸ್‌ಐಟಿಯ ಬಳಿ ಹೇಳುತ್ತೇವೆ. ಅಂಬಾಸಿಡರ್ ಕಾರಿನ ಡಿಕ್ಕಿಯಿಂದ ಹೆಣ ತೆಗೆದು ಸಂಜೆ 4-5 ಗಂಟೆಗೆ ಕದ್ದುಮುಚ್ಚಿ ಹೆಣ ಹೂತುಹಾಕಿದ್ದನ್ನು ನಾನು ನೋಡಿದ್ದೇನೆ ಎಂದು ಪುರಂದರ ಗೌಡ ಹೇಳಿದ್ದಾರೆ.

ಭಯದಿಂದ ಇಲ್ಲಿಯವರೆಗೂ ಯಾರಿಗೂ ಹೇಳಿರಲಿಲ್ಲ. ಈಗ ಸರ್ಕಾರ ಎಸ್‌ಐಟಿ ರಚನೆ ಮಾಡಿರುವುದರಿಂದ ಹೇಳಲು ಧೈರ್ಯ ಬಂದು ಮುಂದೆ ಬಂದಿದ್ದೇವೆ ಎಂದು ಹೇಳಿದ್ದಾರೆ. ಈಗ ಹೆಣದ ಕುರುಹು ಸಿಗದಿರಲು ಆ ಜಾಗ ಅಭಿವೃದ್ಧಿಯಾಗಿರುವುದೇ ಕಾರಣ ಎಂದು ಪುರಂದರಗೌಡ ಹೇಳಿದ್ದಾರೆ. ಭಾರಿ ಮಳೆ ಬಂದು ಪ್ರವಾಹ ಆದ ಕಾರಣ, ಅಣೆಕಟ್ಟು ಕೆಲಸದ ಕಾರಣದಿಂದಾಗಿಯೂ ಆ ಜಾಗದ ವ್ಯತ್ಯಾಸ ಆಗಿದೆ ಎಂದು ಪುರಂದರ ಗೌಡ ಹೇಳಿದ್ದಾರೆ.

ಆ.17ರಂದು ಬೃಹತ್‌ ಪ್ರತಿಭಟನೆ

ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರವಾಗುತ್ತಿರುವುದು ರಾಜ್ಯಾದ್ಯಂತ ಕ್ಷೇತ್ರದ ಭಕ್ತರ ಅಸಹನೆಗೆ ಕಾರಣವಾಗುತ್ತಿದೆ. ಹುಬ್ಬಳ್ಳಿಯಲ್ಲಿರುವ ವಿವಿಧ ಸಂಘಟನೆಗಳ ಮುಖಂಡರು ಬುಧವಾರ ಸುದ್ದಿಗೋಷ್ಠಿ ಕರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಆ.17ರಂದು ಹುಬ್ಬಳ್ಳಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.

ಜೈನ, ಬಂಟ, ಬಿಲ್ಲವ ಸೇರಿದಂತೆ ವಿವಿಧ ಜಾತಿ ಸಂಘಟನೆಗಳ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯುತ್ತಿದೆ. ಧರ್ಮಸ್ಥಳ ತನಿಖೆಯ ಹಿಂದೆ ವ್ಯವಸ್ಥಿತವಾದ ಷಡ್ಯಂತ್ರವಿದೆ. ಸರ್ಕಾರ ಶವ ಪತ್ತೆಹಚ್ಚಲು ಎಸ್‌ಐಟಿ ರಚಿಸಿದಂತೆ ಈ ಷಡ್ಯಂತ್ರದ ಮೂಲ ಕಂಡುಕೊಳ್ಳಲು ತನಿಖೆ ನಡೆಸಬೇಕೆನ್ನುವುದು ಅವರ ಬೇಡಿಕೆಯಾಗಿದೆ.

error: Content is protected !!
Scroll to Top