ಪೌತಿ ಖಾತೆ ಮಾಡಿಕೊಡಲು 20 ಸಾವಿರ ರೂ. ಲಂಚ ಸ್ವೀಕರಿಸುವಾಗ ರೆಡ್ಹ್ಯಾಂಡ್ ಆಗಿ ಹಿಡಿದ ಪೊಲೀಸರು
ಬಂಟ್ವಾಳ : ಜಮೀನಿಗೆ ಪೌತಿ ಖಾತೆ ಮಾಡಿಕೊಡಲು 20 ರೂ. ಸಾವಿರ ರೂ. ಲಂಚ ಸ್ವೀಕರಿಸುತ್ತಿರುವಾಗಲೇ ಬಂಟ್ವಾಳ ಉಪತಹಶೀಲ್ದಾರ್ ಸೇರಿ ಮೂವರನ್ನು ಲೋಕಾಯುಕ್ತ ಪೊಲೀಸರು ರೆಡ್ಹ್ಯಾಂಡ್ ಅಗಿ ಹಿಡಿದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಬುಧವಾರ ಮಧ್ಯಾಹ್ನ ತಾಲೂಕು ಕಚೇರಿಯ ಮೇಲೆ ದಾಳಿ ನಡೆಸಿದ್ದು, ಲಂಚ ಪಡೆಯುತ್ತಿರುವಾಗಲೇ ಉಪತಹಶೀಲ್ದಾರ್ ಸೇರಿದಂತೆ ಮೂವರು ವ್ಯಕ್ತಿಗಳನ್ನು ಹಿಡಿದು ಪ್ರಕರಣ ದಾಖಲಸಿಕೊಂಡಿದ್ದಾರೆ.
ಆರೋಪಿಗಳನ್ನು ಉಪತಹಶೀಲ್ದಾರ್ ರಾಜೇಶ್ ನಾಯಕ್, ಪ್ರಥಮ ದರ್ಜೆ ಸಹಾಯಕ (ಎಫ್ಡಿಎ) ಸಂತೋಷ್ ಮತ್ತು ಮಧ್ಯವರ್ತಿ ವಾಮದಪದವು ನಿವಾಸಿ ಗಣೇಶ್ ಎಂದು ಗುರುತಿಸಲಾಗಿದೆ. ಕಾರ್ಯಾಚರಣೆಯ ನಂತರ ಮೂವರನ್ನೂ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ.
ಸಜಿಪಮುನ್ನೂರಿನ ನಿವಾಸಿ ಪುಷ್ಪರಾಜ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಈ ದಾಳಿ ನಡೆಸಲಾಗಿದ್ದು, ಮಧ್ಯವರ್ತಿಯ ಮೂಲಕ ಲಂಚದ ವಹಿವಾಟು ನಡೆಯುತ್ತಿದೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಪುಷ್ಪರಾಜ್ ಅವರ ತಾಯಿಯ ಹೆಸರಿನಲ್ಲಿರುವ ಜಮೀನಿನ ಪೌತಿ ಖಾತೆ ಮಾಡಿಕೊಡಲು ಉಪತಹಶೀಲ್ದಾರ್ ಲಂಚ ಕೇಳಿದ್ದರು. ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಲೋಕಾಯುಕ್ತ ತಂಡವು ಬಿ.ಸಿ. ರೋಡ್ ರಸ್ತೆಯ ದೇವಸ್ಥಾನದ ಬಳಿ ಲಂಚದ ಹಣವನ್ನು ವಿನಿಮಯ ಮಾಡಿಕೊಳ್ಳಲಾಗುತ್ತಿದ್ದ ವೇಳೆ ಕಾರ್ಯಚರಣೆ ನಡೆಸಿ ರೆಡ್ಹ್ಯಾಂಡ್ ಆಗಿ ಹಿಡಿದಿದೆ
ಉಪ ತಹಶೀಲ್ದಾರ್ ರಾಜೇಶ್ ನಾಯ್ಕ್ ಅವರು ಬ್ರೋಕರ್ ಗಣೇಶ್ ವಾಮಪದವು ಅವರ ಮೂಲಕ 20 ಸಾವಿರ ರೂ. ಲಂಚ ಸ್ವೀಕರಿಸುವಾಗ ಕಾರ್ಯಾಚರಣೆ ನಡೆಸಲಾಗಿದೆ ಎಂದು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಲೋಕಾಯುಕ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲೋಕಾಯುಕ್ತ ಎಸ್ಪಿ ಕುಮಾರ್ಚಂದ್ರ ನೇತೃತ್ವದಲ್ಲಿ ಡಿವೈಎಸ್ಪಿಗಳಾದ ಗಾನಾ ಪಿ ಕುಮಾರ್ ಮತ್ತು ಸುರೇಶ್ ಕುಮಾರ್, ಇನ್ಸ್ಪೆಕ್ಟರ್ಗಳಾದ ಚಂದ್ರಶೇಖರ್, ಭಾರತಿ ಮತ್ತು ಸಹಾಯಕ ಸಿಬ್ಬಂದಿಯ ತಂಡ ದಾಳಿ ನಡೆಸಿದೆ.
























