ನಿಲ್ಲಿಸಿದ್ದ ಬಸ್ಸಿನ ಒಳಗೆ ಬೆಂಕಿ ಅವಘಡ : ಅಪರಿಚಿತ ವ್ಯಕ್ತಿ ಸಜೀವ ದಹನ

ಮೂರು ತಿಂಗಳಿಂದ ರಸ್ತೆ ಬದಿ ಅನಾಥ ಸ್ಥಿತಿಯಲ್ಲಿದ್ದ ಬಸ್‌

ಬೆಂಗಳೂರು: ಬಾಣಸವಾಡಿ ಅಗ್ನಿಶಾಮಕದಳ ಕಚೇರಿ ಬಳಿಯೇ ಶಾಲಾ ವಾಹನವೊಂದರ ಒಳಗೆ ಬೆಂಕಿ ಅವಘಡ ಸಂಭವಿಸಿ ಅದರೊಳಗಿದ್ದ ವ್ಯಕ್ತಿ ಸಜೀವ ದಹನ ಆದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.

ಒಎಂಬಿಆರ್‌ ಲೇಔಟ್‌ನಲ್ಲಿ ರಾತ್ರಿ 10 ಗಂಟೆ ವೇಳೆಗೆ ಬಸ್ಸಿನ ಒಳಗೆ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಅಗ್ನಿಶಾಮಕದಳ ವಾಹನ ದೌಡಾಯಿಸಿ ಬೆಂಕಿ‌ ನಂದಿಸಿದೆ. ಆದರೆ ಬಸ್ಸಿನ ಒಳಗೆ ಇದ್ದ ವ್ಯಕ್ತಿಯನ್ನು ಉಳಿಸಲು ಸಾಧ್ಯವಾಗಿಲ್ಲ. ಬಸ್‌ನ ಒಳಗೆ ಸಂಪೂರ್ಣ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ‌ಯಾಗಿದೆ. ಸುಮಾರು 30 ವರ್ಷದ ಆಸುಪಾಸಿನ ವ್ಯಕ್ತಿ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ರಾಮಮೂರ್ತಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಯುಡಿಆರ್‌ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.





















































 
 

ಅರುಣ್‌ ಎಂಬವರಿಗೆ ಸೇರಿದ ಖಾಸಗಿ ಶಾಲಾ ಬಸ್‌ ಇದಾಗಿದ್ದು, ಬಸ್‌ನಲ್ಲಿ ಚಾಪೆ, ದಿಂಬು ತಂದು ಅಪರಿಚಿತ ವ್ಯಕ್ತಿ ಮಲಗಿದ್ದ ಎಂಬುದು ಪರಿಶೀಲನೆಯಿಂದ ಗೊತ್ತಾಗಿದೆ. ಸುಮಾರು ಮೂರು ತಿಂಗಳಿನಿಂದ ಶಾಲಾ ಬಸ್‌ ಕೆಟ್ಟು ನಿಂತಿತ್ತು. 14 ವರ್ಷದ ಹಳೆ ಬಸ್‌ಗೆ ಎಫ್‌ಸಿ, ಇನ್ಯೂರೆನ್ಸ್ ಮುಗಿದಿತ್ತು. ಹೀಗಾಗಿ, ರಸ್ತೆ ಬದಿಯಲ್ಲಿ ಅರುಣ್ ಬಸ್ ನಿಲ್ಲಿಸಿದ್ದರು. ನಿನ್ನೆ ಸಂಜೆ ಕೂಡ ಬಸ್ ಬಳಿ ಬಂದು ನೋಡಿಕೊಂಡು ಹೋಗಿದ್ದರು.

ಬಸ್‌ಗೆ ಸರಿಯಾಗಿ ಡೋರ್ ಲಾಕ್ ಆಗುತ್ತಿರಲಿಲ್ಲ. ಹೀಗಾಗಿ ಬಸ್‌ನ ಒಳಗೆ ಹೋಗಿ ವ್ಯಕ್ತಿ ಧೂಮಪಾನ ಮಾಡಿ ಮಲಗಿದ್ದ. ಬಸ್‌ನಲ್ಲಿ ಕೆಲ ಬೀಡಿ ತುಂಡುಗಳು ಪತ್ತೆಯಾಗಿವೆ ಎನ್ನಲಾಗಿದೆ. ಬೀಡಿ ಸೇದಿದ ತುಂಡಿನಿಂದ ಬಸ್‌ನಲ್ಲಿ ಬೆಂಕಿ ಹೊತ್ತಿಕೊಂಡಿಡೆಯಾ ಅಥವಾ ಬೇರೆ ಯಾರಾದರೂ ಬಸ್‌ಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

error: Content is protected !!
Scroll to Top