ಕಾಂಗ್ರೆಸ್ ಬಗ್ಗೆ ಫೈಸಲ್ ಪಟೇಲ್ ಹೇಳಿದ್ದೇನು ಗೊತ್ತಾ?
ನವದೆಹಲಿ: ಕಾಂಗ್ರೆಸ್ ನಾಯಕಿ, ಸೋನಿಯಾ ಗಾಂಧಿ ಆಪ್ತ ದಿವಂಗತ ಅಹ್ಮದ್ ಪಟೇಲ್ ಅವರ ಪುತ್ರ ಫೈಸಲ್ ಪಟೇಲ್ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತಕ್ಕೆ ಜೈ ಎಂದಿದ್ದು, ಅವರ ಕೈಯಲ್ಲಿ ದೇಶ ಸುರಕ್ಷಿತವಾಗಿದೆ ಎಂದು ಕೊಂಡಾಡಿದ್ದಾರೆ.
ಹಾಗೆಯೇ ತನಗೆ ಕಾಂಗ್ರೆಸ್ ಪಕ್ಷದ ಮೇಲೆ ಯಾವ ಅಸಮಾಧಾನ ಸಹ ಇಲ್ಲ. ಆದರೆ ಸಾರ್ವಜನಿಕ ಜೀವನದಿಂದ ಕೆಲಕಾಲ ದೂರವಿರುವುದಾಗಿ ಹೇಳಿದ್ದಾರೆ. ಜೊತೆಗೆ ತಾನು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯುವುದನ್ನು ನಿಲ್ಲಿಸಿದ್ದು, ತಮ್ಮ ತಂದೆಯ ಹಾಗೆ ಪಕ್ಷಕ್ಕಾಗಿ ಕೆಲಸ ಮಾಡುವುದಿಲ್ಲ ಎಂದಿದ್ದು, ಇದು ಕಾಂಗ್ರೆಸ್ ಪಾಳಯದಲ್ಲಿ ಅಚ್ಚರಿಗೆ ಕಾರಣವಾಗಿದೆ.
ನಾನು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ತನ್ನ ತಂದೆಯ ಹಾದಿಯಲ್ಲೇ ದುಡಿಯಲು ಪ್ರಯತ್ನ ನಡೆಸಿದೆ. ಆದರೆ ಅದಕ್ಕೆ ನನಗೆ ಸರಿಯಾದ ಸ್ಪಂದನೆ ಸಿಗಲಿಲ್ಲ. ಹಾಗಾಗಿ ಪಕ್ಷದ ಹಿಂದೆ ಹೋಗುವುದನ್ನು ಬಿಟ್ಟು ಮಾನವೀಯವಾಗಿ ಕೆಲಸ ಮಾಡಲು ಬಯಸುತ್ತೇನೆ. ಕಾಂಗ್ರೆಸ್ ಯಾವಾಗಲೂ ನನ್ನ ಕುಟುಂಬದಂತೆ ಎಂದು ಅವರು ತಮ್ಮ ಎಕ್ಸ್ ಖಾತೆಯ ಮೂಲಕ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪ್ರಧಾನಿ ಮೋದಿ ಸರ್ಕಾರವನ್ನು ಕೊಂಡಾಡಿರುವ ಅವರು, ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಅನ್ನು ಉಲ್ಲೇಖಿಸಿ, ಸಶಸ್ತ್ರ ಪಡೆಗಳು ಉತ್ತಮವಾಗಿ ಕೆಲಸ ಮಾಡಿವೆ. ಪ್ರಧಾನಿ ನರೇಂದ್ರ ಮೋದಿಯವರು ಉತ್ತಮ ನಾಯಕತ್ವವನ್ನು ಪ್ರದರ್ಶಿಸಿ ನಮ್ಮನ್ನು ದೊಡ್ಡ ಬಿಕ್ಕಟ್ಟಿನಿಂದ ಹೊರತಂದಿದ್ದಾರೆ. ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ಹೆಮ್ಮೆ ಇದೆ. ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಬಗ್ಗೆ ಗೌರವವಿದೆ. ಮೋದಿಯವರು, ಅಧಿಕಾರಿಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳುತ್ತಾರೆ, ಅವರನ್ನು ಹೇಗೆ ನಾಯಕರನ್ನಾಗಿ ಮಾಡುತ್ತಾರೆ ಮತ್ತು ಅವರನ್ನು ಸಚಿವ ಸ್ಥಾನಗಳಲ್ಲಿ ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದು ಇತರರು ಅನುಸರಿಸಬೇಕಾದ ವಿಷಯ ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ಅವರು, ರಾಹುಲ್ ಒಬ್ಬ ಕಠಿಣ ಪರಿಶ್ರಮಿ ನಾಯಕ. ಕಾಂಗ್ರೆಸ್‌ನಲ್ಲಿ ಶಶಿ ತರೂರ್, ಡಿಕೆ ಶಿವಕುಮಾರ್, ರೇವಂತ್ ರೆಡ್ಡಿ, ದೀಪೇಂದ್ರ ಹೂಡಾ ಮತ್ತು ಸಚಿನ್ ಪೈಲಟ್‌ರಂತಹ ಅತ್ಯಂತ ಪ್ರತಿಭಾನ್ವಿತ ಮತ್ತು ಬುದ್ಧಿವಂತ ನಾಯಕರಿದ್ದಾರೆ. ಅವರು ಬಹಳ ಸಮರ್ಥರು. ಪಕ್ಷದಲ್ಲಿ ಆಂತರಿಕವಾಗಿ ಕೆಲವೊಂದು ಸಮಸ್ಯೆಗಳಿವೆ ಮತ್ತು ಪಕ್ಷವನ್ನು ನಡೆಸುತ್ತಿರುವ ಹಿರಿಯರಿಗೆ ಸರಿಯಾದ ಸಲಹೆ ಸಿಗುತ್ತಿಲ್ಲ ಎಂಬುದು ನನ್ನ ಅನಿಸಿಕೆ. ಸಲಹೆಗಾರರು ಸಮರ್ಥವಾಗಿ ಕೆಲಸ ಮಾಡುತ್ತಿಲ್ಲ ಎಂದು ಕಾಂಗ್ರೆಸ್‌ನ ಉನ್ನತ ನಾಯಕರ ಒಂದು ವರ್ಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
























