ಮನೆಯ ಸುತ್ತ ಅನುಮಾನಾಸ್ಪದ ವ್ಯಕ್ತಿಗಳ ಓಡಾಟ : ರಕ್ಷಣೆ ಕೋರಿ ಸಂತ್ರಸ್ತ ಯುವತಿಯಿಂದ ಐಜಿಪಿಗೆ ಮನವಿ

ಯಾರೋ ಗೇಟ್‌ ಬಡಿದಂತೆ, ಟೆರೇಸ್‌ ಮೇಲೆ ಹತ್ತಿ ಹೋದಂತಾಗುತ್ತದೆ ಎಂದು ದೂರು

ಪುತ್ತೂರು : ಪುತ್ತೂರಿನ ಬಿಜೆಪಿ ನಾಯಕ ಪಿ.ಜಿ.ಜಗನ್ನಿವಾಸ ರಾವ್ ಅವರ ಪುತ್ರ ಶ್ರೀಕೃಷ್ಣ ಜೆ. ರಾವ್ ಅವರಿಂದ ಅತ್ಯಾಚಾರ ಮತ್ತು ವಂಚನೆಗೊಳಗಾಗಿ ತಾಯಿಯಾಗಿರುವ ವಿದ್ಯಾರ್ಥಿನಿ ತನಗೆ ಮತ್ತು ನವಜಾತ ಶಿಶುವಿಗೆ ಬೆದರಿಕೆ ಇದೆ ಎಂದು ಪೊಲೀಸ್ ರಕ್ಷಣೆ ಕೋರಿ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಅವರನ್ನು ಭೇಟಿ ಮಾಡಿ ಮಾನವಿ ನೀಡಿದ್ದಾರೆ.

ಸೋಮವಾರ ಸಂತ್ರಸ್ತೆ ಮಂಗಳೂರಿನಲ್ಲಿರುವ ಪಶ್ಚಿಮ ವಲಯ ಐಜಿಪಿ ಕಚೇರಿಗೆ ಭೇಟಿ ನೀಡಿ ಮನವಿ ಪತ್ರ ಸಲ್ಲಿಸಿದರು. ಇತ್ತೀಚೆಗೆ ಕೆಲವು ಅಪರಿಚಿತ ವ್ಯಕ್ತಿಗಳು ನನ್ನ ಮನೆಯ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾರೆ. ನನ್ನ ತಾಯಿ ಮತ್ತು ನಾನು ಅಪರಿಚಿತರು ವಿಶೇಷವಾಗಿ ರಾತ್ರಿಯ ಸಮಯದಲ್ಲಿ ಓಡಾಡುವುದನ್ನು ಗಮನಿಸಿದ್ದೇವೆ. ನಾನು ದಾಖಲಿಸಿದ ವಂಚನೆ ಪ್ರಕರಣದಲ್ಲಿ, ನ್ಯಾಯಾಲಯದಲ್ಲಿ ನನಗೆ ನ್ಯಾಯ ಸಿಗುವುದು ನನ್ನ ಮಗುವಿನ ಮೂಲಕ ಮಾತ್ರ. ಆದ್ದರಿಂದ, ನನ್ನ ಮಗುವಿನ ಜೀವಕ್ಕೆ ಯಾರಿಂದಲಾದರೂ ಅಪಾಯವಿರಬಹುದು ಎಂದು ನನಗೆ ಭಯವಿದೆ. ನನಗೆ ಮತ್ತು ನನ್ನ ಮಗುವಿಗೆ ಪೊಲೀಸ್ ರಕ್ಷಣೆ ಒದಗಿಸಬೇಕೆಂದು ನಾನು ವಿನಂತಿಸುತ್ತೇನೆ ಎಂದು ಅವರು ಕೋರಿದ್ದಾರೆ.





















































 
 

ಮನೆಯ ಸುತ್ತಮುತ್ತ ಯಾರೋ ಓಡಾಡಿದಂತಾಗುತ್ತಿದೆ, ಟೆರೆಸ್‌ ಮೇಲೆ ಯಾರೋ ಹೋಗುತ್ತಾರೆ, ರಾತ್ರಿ ಹೊತ್ತು ಗೇಟ್‌ ಬಡಿದಂತಾಗುತ್ತದೆ. ಇದರಿಂದ ನಾವು ಹೆದರಿಕೆಯಲ್ಲೇ ದಿನ ಕಳೆಯುವಂತಾಗಿದೆ ಎಂದು ಸಂತ್ರಸ್ತ ಯುವತಿಯ ತಾಯಿ ಮಾಧ್ಯಮದವರ ಬಳಿ ಹೇಳಿಕೊಂಡಿದ್ದಾರೆ.

ಮನವಿ ಸಲ್ಲಿಸಲು ಯುವತಿ ಮಗುವಿನ ಸಹಿತ ಹೋಗಿದ್ದರು. ಯುವತಿಯ ತಾಯಿ, ವಿಶ್ವಕರ್ಮ ಸಂಘಟನೆಗಳ ಮುಖಂಡ ಕೆ.ಪಿ.ನಂಜುಂಡಿ ಸಹಿತ ಹಲವು ಮುಖಂಡರಿದ್ದರು. ಯುವಕನಿಗೆ ಜೈಲು ಶಿಕ್ಷೆಯಾಗಬೇಕೆಂಬುದು ನಮ್ಮ ಉದ್ದೇಶವಲ್ಲ. ಯುವಕ ಸಂತ್ರಸ್ತ ಯುವತಿಯನ್ನು ಮದುವೆಯಾಗಿ ಬಾಳು ಕೊಡಬೇಕೆಂದು ಹೋರಾಟ ಮಾಡುತ್ತಿದ್ದೇವೆ. ಕಾನೂನು ಅನುಮತಿಸಿದರೆ ಜೈಲಿಗೆ ಹೋಗಿ ಯುವಕನ ಮನವೊಲಿಸುವ ಪ್ರಯತ್ನ ಮಾಡುತ್ತೇವೆ ಎಂದು ನಂಜುಂಡಿ ಹೇಳಿದ್ದಾರೆ.

error: Content is protected !!
Scroll to Top