ಮಂತ್ರಿ ಸ್ಥಾನ ಕಿತ್ತುಕೊಂಡ ಕ್ರಮದ ಹಿಂದೆ ದೊಡ್ಡದೊಂದು ಪಿತೂರಿ ಇದೆಯೇ?
ಬೆಂಗಳೂರು: ಕಾಂಗ್ರೆಸ್ನೊಳಗೆ ಸೆಪ್ಟೆಂಬರ್ನಲ್ಲಿ ಕ್ರಾಂತಿಯಾಗಲಿದೆ ನೋಡ್ತಾ ಇರಿ ಎಂದಿದ್ದ ಕೆ.ಎನ್.ರಾಜಣ್ಣ ಅವರನ್ನು ಆಗಸ್ಟ್ನಲ್ಲೇ ಸಂಪುಟದಿಂದ ಕಿತ್ತು ಹಾಕಲಾಗಿದೆ. ಸದಾ ಪಕ್ಷದ ತಪ್ಪುಗಳ ಬಗ್ಗೆ ನೇರವಾಗಿ ಮಾತನಾಡುತ್ತಿದ್ದ ಹಿರಿಯ ನಾಯಕನ ತಲೆದಂಡವನ್ನು ಕಾಂಗ್ರೆಸ್ ಹೈಕಮಾಂಡ್ ಪಡೆದುಕೊಂಡಿದೆ. ಅಧಿವೇಶನ ನಡೆಯುತ್ತಿರುವ ಸಮಯದಲ್ಲೇ ಕಾಂಗ್ರೆಸ್ ಕೈಗೊಂಡ ಈ ನಿರ್ಧಾರ ಪ್ರತಿಪಕ್ಷಗಳಿಗೆ ಸರ್ಕಾರವನ್ನು ಟೀಕಿಸಲು ಬಲವಾದ ಅಸ್ತ್ರವಾಗಿ ಸಿಕ್ಕಿದೆ. ಕಾಂಗ್ರೆಸ್ನಲ್ಲಿ ಸತ್ಯವಂತರಿಗೆ ಉಳಿಗಾಲವಿಲ್ಲ ಎಂಬ ಸಂದೇಶವನ್ನು ರವಾನಿಸುವಲ್ಲಿ ವಿಪಕ್ಷ ಯಶಸ್ವಿಯಾಗಿದೆ. ರಾಷ್ಟ್ರಮಟ್ಟದಲ್ಲೂ ರಾಜಣ್ಣ ವಜಾಗೊಂಡಿರುವ ವಿಚಾರ ಚರ್ಚೆಯಾಗಿದೆ.
ಆರಂಭದಲ್ಲಿ ರಾಜಣ್ಣ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದ್ದರೂ ಇದು ರಾಜೀನಾಮೆ ಅಲ್ಲ ವಜಾ ಎನ್ನುವುದು ಬಳಿಕ ಸ್ಪಷ್ಟಗೊಂಡಿದೆ. ಸಿದ್ದರಾಮಯ್ಯನವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ರಾಜಣ್ಣ ವಜಾ ಹಿಂದೆ ದೊಡ್ಡದೊಂದು ಪಿತೂರಿ ನಡೆದಿದೆ ಎನ್ನುವ ಅನುಮಾನವಿದೆ. ರಾಜಣ್ಣ ಕೂಡ ಈ ಮಾತನ್ನು ಹೇಳಿದ್ದಾರೆ.
ನನ್ನನ್ನು ವಜಾ ಮಾಡಿರುವುದರ ಹಿಂದೆ ಷಡ್ಯಂತ್ರ ಇದೆ. ಇದರ ಹಿಂದೆ ಒಂದು ದೊಡ್ಡ ಷಡ್ಯಂತ್ರ, ಪಿತೂರಿ ಇದೆ. ಯಾರ್ಯಾರು ಏನೇನು ಮಾಡಿದ್ದಾರೆ ಎಂದು ಕಾಲ ಬಂದಾಗ ನಾನು ಎಲ್ಲವನ್ನೂ ಹೇಳುತ್ತೇನೆ ಎಂದು ರಾಜಣ್ಣ ಕಿಡಿಕಾರಿದ್ದಾರೆ. ದೆಹಲಿಗೆ ಹೋಗಿ ಪಕ್ಷದ ವರಿಷ್ಠರನ್ನ ಭೇಟಿ ಮಾಡುತ್ತೇನೆ. ಇದು ಪಕ್ಷದ ತೀರ್ಮಾನ ಆಗಿದ್ದರಿಂದ ಪ್ರಶ್ನಿಸುವಂತಿಲ್ಲ. ಪಕ್ಷದ ವರಿಷ್ಠರಿಗೆ ತಪ್ಪು ಗ್ರಹಿಕೆ ಆಗಿದೆ ಎಂಬ ಮಾಹಿತಿ ಇದೆ. ಹಿರಿಯ ಸಚಿವರು, ಶಾಸಕರ ಜೊತೆ ದೆಹಲಿಗೆ ಹೋಗುತ್ತೇನೆ. ಪಕ್ಷದ ವರಿಷ್ಠರಿಗೆ ಆಗಿರುವ ತಪ್ಪು ಗ್ರಹಿಕೆ ಸರಿಪಡಿಸುತ್ತೇನೆ. ವರಿಷ್ಠರ ಮಾರ್ಗದರ್ಶನದಂತೆ ಮುಂದುವರಿಯುತ್ತೇನೆ ಎಂದಿದ್ದಾರೆ.
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ರಾಜಣ್ಣ ನೀಡಿದ ವ್ಯಂಗ್ಯಭರಿತ ವ್ಯತಿರಿಕ್ತ ಹೇಳಿಕೆ ತಲೆದಂಡಕ್ಕೆ ಕಾರಣ ಎನ್ನಲಾಗುತ್ತಿದ್ದರೂ ಇದಲ್ಲದೆ ಬೇರೆಯೇ ಕೆಲವು ಕಾರಣಗಳು ಇವೆ ಎನ್ನುವುದು ಈಗ ರಾಜಕೀಯ ಪಡಸಾಲೆಯಲ್ಲಿ ಚರ್ಚೆಯಾಗುತ್ತಿರುವ ವಿಚಾರ. ನಮ್ಮ ಕಾಲದಲ್ಲೇ ಅಲ್ವಾ ವೋಟರ್ ಲಿಸ್ಟ್ ಆಗಿದ್ದು, ಈಗ ದೂರಿದ್ರೆ ಏನರ್ಥ ಎಂದು ರಾಜಣ್ಣ ಹೇಳಿಕೆ ಕೊಟ್ಟಿದ್ದರು. ರಾಹುಲ್ ಗಾಂಧಿಯ ಮತಗಳ್ಳತನ ಆರೋಪ ಠುಸ್ ಆಗಲು ರಾಜಣ್ಣ ಹೇಳಿಕೆಯೂ ಕಾರಣವಾಗಿ ಹೈಕಮಾಂಡ್ ಸಿಟ್ಟಿಗೆ ಕಾರಣವಾಗಿತ್ತು.
ಈ ಹಿಂದೆಯೂ ಹಲವು ಬಾರಿ ಸರ್ಕಾರ ಮತ್ತು ಸಚಿವರ, ಹೈಕಮಾಂಡ್ ನಾಯಕರ ವರ್ತನೆಯನ್ನು ರಾಜಣ್ಣ ಟೀಕಿಸಿದ್ದರು. ಈ ಸಂಬಂಧ ಹೈಕಮಾಂಡ್ ಹಂತಕ್ಕೆ ದೂರು ಹೋಗಿತ್ತು. ಆದರೆ ಈ ಬಾರಿ ಯಾವುದೇ ಕಾರಣಕ್ಕೂ ಕ್ಷಮಿಸದ ಹೈಕಮಾಂಡ್ ರಾಜಣ್ಣ ಅವರನ್ನು ಸಂಪುಟದಿಂದ ಕಿಕ್ಔಟ್ ಮಾಡಿದೆ.
ವಜಾಗೆ ಕಾರಣ ಏನು?
ಕೆಲಸಮಯದ ಹಿಂದೆ ಶಾಸಕರು, ಸಚಿವರ ಜೊತೆ ರಣದೀಪ್ ಸುರ್ಜೇವಾಲಾ ನಡೆಸಿದ್ದ ಸಭೆಗೆ ರಾಜಣ್ಣ ಆಕ್ಷೇಪ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೇ ಸುರ್ಜೇವಾಲಾ ಮಂತ್ರಿಗಳ ಜೊತೆ ಸಭೆ ನಡೆಸುತ್ತಿದ್ದಾಗ ರಾಜಣ್ಣ ಯುರೋಪ್ ಪ್ರವಾಸ ಕೈಗೊಂಡಿದ್ದರು. ಪ್ರವಾಸದ ದಿನಾಂಕ ಮೊದಲೇ ನಿಗದಿಯಾಗಿದೆ. ಸುರ್ಜೇವಾಲಾ ಜೊತೆಗಿನ ಸಭೆ ಇತ್ತೀಚಿಗೆ ಫಿಕ್ಸ್ ಆಗಿದೆ. ಹೀಗಾಗಿ ನಾನು ವಿದೇಶ ಪ್ರವಾಸದಿಂದ ವಾಪಸ್ ಬಂದ ಮೇಲೆ ಸುರ್ಜೇವಾಲಾರನ್ನು ಪ್ರತ್ಯೇಕವಾಗಿ ಭೇಟಿ ಮಾಡುತ್ತೇನೆ ಎಂದಿದ್ದರು.
ಲೋಕಸಭಾ ಚುನಾವಣೆಯ ಸಮಯದಲ್ಲಿ 5 ಡಿಸಿಎಂ ಹುದ್ದೆ ಸೃಷ್ಟಿ ಮಾಡಬೇಕು. ಆಗ ಹಲವು ಜಾತಿಗಳು ನಮ್ಮ ಪಕ್ಷಕ್ಕೆ ಮತ ಹಾಕಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕೆಪಿಸಿಸಿ ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು. ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ ಎಂಬ ನಿಯವಿದೆ. ಹೀಗಾಗಿ ಉಪಮುಖ್ಯಮಂತ್ರಿ ಮತ್ತು ಡಿಸಿಎಂ ಎರಡೂ ಹುದ್ದೆಯನ್ನು ಒಬ್ಬರೇ ನಿರ್ವಹಿಸುವುದು ಸರಿಯಲ್ಲ ಎಂದಿದ್ದರು.
ಡಿಸಿಎಂ ಡಿಕೆ ಶಿವಕುಮಾರ್ ಅವರು ವಿದೇಶ ಪ್ರವಾಸಕ್ಕೆ ಹೋಗಿದ್ದಾಗ ದಲಿತ ಸಚಿವರು ಸಭೆ ನಡೆಸಿ ಈ ಡಿನ್ನರ್ ಪಾಲಿಟಿಕ್ಸ್ ಅನ್ನು ರಾಜಣ್ಣ ಸಮರ್ಥಿಸಿಕೊಂಡಿದ್ದರು. ವಿವಾದ ಜೋರಾಗುತ್ತಿದ್ದಂತೆ ರಾಜಣ್ಣ ನಾವು ಶೋಷಿತರ ಸಭೆ ನಡೆಸಲು ಚರ್ಚೆ ನಡೆಸಿದ್ದವರು ಎಂದು ಹೇಳಿಕೆ ನೀಡಿದ್ದರು.
ರಾಜಣ್ಣ ಹೇಳಿಕೆಯ ಪೈಕಿ ಅತಿ ಹೆಚ್ಚು ಚರ್ಚೆಯಾಗಿದ್ದು ಸೆಪ್ಟೆಂಬರ್ ಕ್ರಾಂತಿ ಹೇಳಿಕೆ. ಹೇಳಿಕೆ ನೀಡಿದ್ದು ಮಾತ್ರವಲ್ಲ ಅದನ್ನು ಸಮರ್ಥನೆ ಸಹ ಮಾಡಿಕೊಂಡಿದ್ದರು. ಸೆಪ್ಟೆಂಬರ್ ತಿಂಗಳಲ್ಲಿ ಕ್ರಾಂತಿಯಾಗಲಿದೆ ಎಂದು ಹಿಂದೆಯೂ ಹೇಳಿದ್ದೆ, ಈಗಲೂ ಅದನ್ನು ಪುನರುಚ್ಚರಿಸುತ್ತಿದ್ದೇನೆ. ನನ್ನ ಹೇಳಿಕೆಗೆ ಬದ್ಧನಾಗಿದ್ದು, ಅದರಿಂದ ಹಿಂದೆ ಸರಿಯುವುದಿಲ್ಲ. ಆದರೆ, ಯಾವ ರೀತಿಯ ಕ್ರಾಂತಿ ಎಂಬುದನ್ನು ಈಗಲೇ ಹೇಳಿದರೆ ಅದರ ಬಗ್ಗೆ ಆಸಕ್ತಿ ಇರುವುದಿಲ್ಲ. ಇದನ್ನು ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ. ಆದರೆ ಕೆಲವರು ಏನೇನು ಪ್ರಕ್ರಿಯೆಗಳು ನಡೆಯುತ್ತಿವೆ ಎಂಬುದನ್ನು ತಮ್ಮೊಳಗೆ ಇಟ್ಟುಕೊಂಡಿದ್ದಾರೆ ಎಂದಿದ್ದರು.
ಹೈಕಮಾಂಡ್ ಸೂಚನೆ ನೀಡಿದ ಬೆನ್ನಲ್ಲೇ ಶಾಸಕ ಕೆಎನ್ ರಾಜಣ್ಣ ಅವರು ಸೋಮವಾರ ಮಧ್ಯಾಹ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕೆ.ಎನ್.ರಾಜಣ್ಣ ನೀಡಿದ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಗೀಕರಿಸಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಳುಹಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕೆಎನ್ ರಾಜಣ್ಣ ರಾಜೀನಾಮೆಯನ್ನು ಅಂಗೀಕರಿಸಿದರು. ಈ ಎಲ್ಲ ಪ್ರಕ್ರಿಯೆ ಕೆಲವೇ ತಾಸುಗಳಲ್ಲಿ ಮುಗಿದು ಹೋಗಿದೆ. ರಾಜೀನಾಮೆ ಸೂಚನೆ ಕುರಿತು ಚರ್ಚಿಸುವ ಅವಕಾಶವನ್ನೂ ರಾಜಣ್ಣಗೆ ನೀಡಿರಲಿಲ್ಲ.
























