ಚೀನಕ್ಕೆ ಕಳುಹಿಸಿದ ಪಾರ್ಸೆಲ್‌ನಲ್ಲಿ ಡ್ರಗ್ಸ್ ಇದೆ ಎಂದು ಹೆದರಿಸಿ ಮೋಸ
ಮಂಗಳೂರು: ನಗರದ ವೃದ್ಧ ಮಹಿಳೆಯೊಬ್ಬರನ್ನು ಡಿಜಿಟಲ್ ಅರೆಸ್ಟ್ ಮಾಡಿ ಬರೋಬ್ಬರಿ 3.9 ಕೋ. ರೂ. ಸುಲಿಗೆ ಮಾಡಿರುವ ಕೃತ್ಯವೊಂದು ಬೆಳಕಿಗೆ ಬಂದಿದೆ. ಸೇವಾ ನಿವೃತ್ತಿ ಹೊಂದಿದ್ದ ಲೆನಿ ಪ್ರಭು ಎಂಬ ಮಹಿಳೆ ವಂಚನೆಗೊಳಗಾಗಿದ್ದು, ಈ ಕುರಿತು ಅವರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಲೆನಿ ಪ್ರಭು ಅವರಿಗೆ ಕಳೆದ ಜನವರಿ 15ರಂದು ಅಪರಿಚಿತ ಸಂಖ್ಯೆಯೊಂದರಿಂದ ಮಿಸ್ ಕಾಲ್ ಬಂದಿದ್ದು, ಸ್ವಲ್ಪ ಹೊತ್ತಾದ ಬಳಿಕ ಈ ನಂಬರ್‌ಗೆ ಲೆನಿ ಪ್ರಭು ಕರೆ ಮಾಡಿದ್ದಾರೆ. ಆ ಕಡೆ ಇದ್ದ ಮಹಿಳೆ ತಾನು ಜನರಲ್ ಪೋಸ್ಟ್ ಆಫೀಸಿನಿಂದ ಮಾತನಾಡುತ್ತಿದ್ದೇನೆ, ನೀವು ಚೀನಕ್ಕೆ ಕಳುಹಿಸಿದ ಪಾರ್ಸೆಲ್ ವಾಪಸು ಬಂದಿದೆ. ಅದರಲ್ಲಿ 150 ಗ್ರಾಂ ಡ್ರಗ್ಸ್ ಇದೆ. ಈ ಅಪರಾಧಕ್ಕೆ 75 ವರ್ಷ ಜೈಲು ಶಿಕ್ಷೆ ಆಗಬಹುದು ಎಂದು ಹೆದರಿಸಿದ್ದಾಳೆ.
ನಾನು ಯಾವುದೇ ಪಾರ್ಸೆಲ್ ಕಳುಹಿಸಿಲ್ಲ ಎಂದು ಲೆನಿ ಪ್ರಭು ಹೇಲಿದಾಗ ನೀವು ಕಳುಹಿಸಿರುವ ದಾಖಲೆಯಾಗಿ ನಿಮ್ಮ ಐಡಿ ಕಾರ್ಡ್ ಮತ್ತು ಹೆಸರು ಇದೆ ಎಂದು ಹೇಳಿ ಇನ್ನಷ್ಟು ಹೆದರಿಸಿದ್ದಾಳೆ. ಬಳಿಕ ನಾನು ನಿಮಗೆ ಸಹಾಯ ಮಾಡುತ್ತೇನೆ ಎಂದು ಹೇಳಿ ಮಹಿಳೆ ಲೆನಿ ಪ್ರಭು ಅವರ ವೈಯಕ್ತಿಕ ವಿವರಗಳನ್ನು ಕೇಳಿ ಪಡೆದುಕೊಂಡಿದ್ದಾಳೆ.
ನಂತರ ನಿಮಗೆ ಈ ಪ್ರಕರಣದಲ್ಲಿ ನೋ ಒಬ್ಜೆಕ್ಷನ್ ಸರ್ಟಿಫಿಕೆಟ್ ಸಿಗಬೇಕಾದರೆ ನಿಮ್ಮ ಸಂಬಳದ ಶೇ.93ರಷ್ಟು ಹಣ ಪಾವತಿಸಬೇಕಾಗುತ್ತದೆ. ಈ ವಿಚಾರವನ್ನು ಯಾರಿಗೂ ತಿಳಿಸಬಾರದು ಎಂದು ಹೇಳಿದ್ದಾಳೆ. ಆಕೆ ಹೇಳಿದಂತೆ ಲೆನಿ ಪ್ರಭು ಆಕೆ ಹೇಳಿದ ಖಾತೆಗೆ ಜನವರಿ 17ರಂದು 55 ಲ.ರೂ. ಆರ್‌ಟಿಜಿಎಸ್ ಮೂಲಕ ರವಾನಿಸಿದ್ದಾರೆ.
ನಂತರ ಆಕೆ ನೀಡಿದ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಜುಲೈ 4ರ ವರೆಗೆ ಹಂತ ಹಂತವಾಗಿ ಒಟ್ಟು 3,09,75,000 ರೂ. ವರ್ಗಾವಣೆ ಮಾಡಿದ್ದಾರೆ. ಆ ಬಳಿಕ ಆಕೆಯಿಂದ ಯಾವುದೇ ಕರೆ ಅಥವಾ ಪ್ರತಿಕ್ರಿಯೆ ಬಾರದಿದ್ದಾಗ ಲೆನಿ ಪ್ರಭುಗೆ ತಾನು ಮೋಸ ಹೋಗಿರುವುದು ಅರಿವಾಗಿದೆ. ತನ್ನನ್ನು ಡಿಜಿಟಲ್ ಅರೆಸ್ಟ್ ಮಾಡಿ ಹಣ ಲಪಟಾಯಿಸಿದ್ದಾರೆ ಎಂದು ಅವರು ಸೆನ್ ಪೊಲೀಸ್ ಠಾನೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
























