ಇಂದಿನಿಂದ ವಿಧಾನ ಮಂಡಲದ ಮುಂಗಾರು ಅಧಿವೇಶನ

ವಿಪಕ್ಷ ಬತ್ತಳಿಕೆಯಲ್ಲಿ ಧರ್ಮಸ್ಥಳ ಪ್ರಕರಣ, ಆರ್‌ಸಿಬಿ ಕಾಲ್ತುಳಿತ ಸಹಿತ ಹಲವು ಪ್ರಬಲ ಅಸ್ತ್ರಗಳು

ಬೆಂಗಳೂರು : ವಿಧಾನ ಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಶುರುವಾಗುತ್ತಿದೆ. ಆಗಸ್ಟ್ 22ವರೆಗೆ ಅಧಿವೇಶನ ನಡೆಯಲಿದ್ದು, ಈ ಬಾರಿಯೂ ಹತ್ತು ಹಲವು ವಿಚಾರ ಮುಂದಿಟ್ಟು ಸರ್ಕಾರದ ವಿರುದ್ಧ ಹೋರಾಟಕ್ಕೆ ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಜ್ಜಾಗಿವೆ.

ಆರ್‌ಸಿಬಿ ಸಂಭ್ರಮಾಚರಣೆ ಸಂದರ್ಭ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಅಮಾಯಕರ ಸಾವಿನ ವಿಚಾರ ಮುಂದಿಟ್ಟು ವಿಪಕ್ಷಗಳು ಮುಗಿಬೀಳುವ ಸಾಧ್ಯತೆಯಿದೆ. ಪೊಲೀಸ್ ಅಧಿಕಾರಿಗಳ ಅಮಾನತು ಹಾಗೂ ಸರ್ಕಾರದ ದ್ವಂದ್ವ ನಿರ್ಧಾರಗಳ ಬಗ್ಗೆ ಬಿಜೆಪಿ ಸಮರಕ್ಕೆ ಪ್ಲ್ಯಾನ್ ಮಾಡಿದೆ. ರಾಜ್ಯದಲ್ಲಿ ರೈತರಿಗೆ ಯೂರಿಯಾ ಕೊರತೆ ವಿಚಾರದಲ್ಲೂ ಜಟಾಪಟಿ ನಡೆಯುವ ಸಾಧ್ಯತೆಯಿದೆ. ಗುತ್ತಿಗೆದಾರರಿಂದ 60 ಪರ್ಸೆಂಟ್ ವಸೂಲಿ ಆರೋಪ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟ ಆರೋಪ, ಧರ್ಮಸ್ಥಳದಲ್ಲಿ ನೂರಾರು ಶವ ಹೂತಿಟ್ಟ ಆರೋಪ ಕೇಸ್ ಸದ್ದು ಮಾಡುವ ಸಾಧ್ಯತೆಯಿದೆ.





















































 
 

ರಾಹುಲ್ ಗಾಂಧಿ ಮಾಡಿರುವ ಮತಗಳ್ಳತನ ಆರೋಪ ಸಂಬಂಧ ಜಟಾಪಟಿ ನಡೆಯುವ ಸಾಧ್ಯತೆಯಿದ್ದು, ದ್ವೇಷ ಭಾಷಣ ನಿಯಂತ್ರಣ ಸಂಬಂಧ ವಿಧೇಯಕ ಮಂಡನೆಯಾಗುವ ಸಾಧ್ಯತೆಯಿದ್ದು ಈ ಬಗ್ಗೆಯೂ ವಾಕ್ಸಮರ ನಡೆಯುವ ಸಾಧ್ಯತೆ ಇದೆ.

ಮೈತ್ರಿ ಮಾಡಿಕೊಂಡಿದ್ದರೂ ಆಡಳಿತ ಪಕ್ಷದ ವಿರುದ್ಧ ಹೋರಾಟದಲ್ಲಿ ನಾನೊಂದು ತೀರ ನೀನೊಂದು ತೀರ ಎಂಬಂತಿದ್ದ ಬಿಜೆಪಿ ಮತ್ತು ಜೆಡಿಎಸ್ ಭಾನುವಾರ ಸಮನ್ವಯ ಸಮಿತಿ ಸಭೆ ನಡೆಸಿವೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ. ಇಂದು ಬೆಳಗ್ಗೆ 10.30ಕ್ಕೆ ವಿಧಾನಸೌಧ ಗಾಂಧಿ ಪ್ರತಿಮೆ ಮುಂದೆ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಮತ್ತು ಪರಿಷತ್ ಸದಸ್ಯರು ಪ್ರತಿಭಟನೆ ನಡೆಸಲಿದ್ದಾರೆ. ಪ್ರತಿದಿನ ಒಂದೊಂದು ವಿಚಾರದಲ್ಲಿ ವಿರುದ್ಧ ಧ್ವನಿ ಎತ್ತಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ಲ್ಯಾನ್ ಮಾಡಲಾಗಿದೆ. ರೈತರ ಸಮಸ್ಯೆ, ಉತ್ತರ ಕರ್ನಾಟಕಕ್ಕೆ ಅನ್ಯಾಯ, ಸರ್ಕಾರದ ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತುವುದಾಗಿ ನಾಯಕರು ಹೇಳಿದ್ದಾರೆ.

ವಿಪಕ್ಷಗಳಿಗೆ ಟಕ್ಕರ್ ಕೊಡಲು ಕಾಂಗ್ರೆಸ್ ಕೂಡ ತಂತ್ರ ಹೆಣೆದಿದೆ. ಮತಗಳ್ಳತನ ಆರೋಪ, ಕೇಂದ್ರದಿಂದ ಅನುದಾನ ತಾರತಮ್ಯ ಮುಂತಾದ ವಿಚಾರ ಮುಂದಿಟ್ಟು ಕೌಂಟರ್ ಕೊಡಲಿದೆ. ಒಟ್ಟಾರೆ ಬಿಜೆಪಿ, ದಳ ನಾಯಕರು ಒಟ್ಟಾಗಿ ಸರ್ಕಾರದ ವಿರುದ್ಧ ಮುಗಿಬೀಳಲು ಸಜ್ಜಾಗಿದ್ದು ಹೋರಾಟ ಕಾವೇರುವ ಸಾಧ್ಯತೆ ದಟ್ಟವಾಗಿದೆ.

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ಪ್ರತಿಬಂಧಕ ವಿಧೇಯಕ, ಬಾಲ್ಯ ವಿವಾಹ ತಿದ್ದುಪಡಿ ವಿಧೇಯಕ, ಫೇಕ್ ನ್ಯೂಸ್ ಮತ್ತು ತಪ್ಪು ಮಾಹಿತಿ ನಿರ್ಬಂಧಕ ವಿಧೇಯಕ, ಗ್ರೇಟರ್ ಬೆಂಗಳೂರು ತಿದ್ದುಪಡಿ ವಿಧೇಯಕ ಸೇರಿ ಒಟ್ಟು 27 ವಿಧೇಯಕಗಳನ್ನು ಈ ಬಾರಿಯ ಅಧಿವೇಶನದಲ್ಲಿ ಮಂಡಿಸಲು ಸರ್ಕಾರ ನಿರ್ಧಾರ ಮಾಡಿದೆ. ಮಂಗಳವಾರ ನಡೆಯುವ ಸದನ ಸಲಹಾ ಸಮಿತಿಯಲ್ಲಿ ಸರ್ಕಾರ ತರಲಿಚ್ಚಿಸುವ ವಿಧೇಯಕ ಪಟ್ಟಿಯನ್ನು ಸರ್ಕಾರ ಮಂಡಿಸಲಿದೆ.

error: Content is protected !!
Scroll to Top