ಪತ್ರಕರ್ತರ ಸೋಗಿನಲ್ಲಿದ್ದ ಹಮಾಸ್ ಉಗ್ರರು ಎಂದು ದಾಳೀಗೆ ವಿವರಣೆ ನೀಡಿದ ಇಸ್ರೇಲ್
ಟೆಲ್ ಅವೀವ್ : ಗಾಜಾ ನಗರದ ಮೇಲೆ ಇಸ್ರೇಲ್ ಭಾನುವಾರ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಅಲ್ ಜಜೀರಾ ಸುದ್ದಿ ವಾಹಿನಿಯ ಒಬ್ಬ ಪ್ರಮುಖ ವರದಿಗಾರ ಸೇರಿದಂತೆ ಇಬ್ಬರು ವರದಿಗಾರರು ಮತ್ತು ಮೂವರು ಕ್ಯಾಮೆರಾಮೆನ್ಗಳು ಸಾವನ್ನಪ್ಪಿದ್ದಾರೆ. ಗಾಜಾ ನಗರದಲ್ಲಿ ಪತ್ರಕರ್ತರಿಗೆ ವಸತಿ ಕಲ್ಪಿಸಲಾಗಿದ್ದ ಟೆಂಟ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಪರಿಣಾಮ ಅಲ್ ಜಜೀರಾದ ಪತ್ರಕರ್ತ ಅನಾಸ್ ಅಲ್-ಶರೀಫ್ ಜೊತೆಗೆ ನಾಲ್ವರು ಸಹೋದ್ಯೋಗಿಗಳು ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ.
ಮೃತರನ್ನು ಅನಾಸ್ ಅಲ್-ಶರೀಫ್, ಮೊಹಮ್ಮದ್ ಕ್ರೀಕೆಹ್ ಮತ್ತು ಕ್ಯಾಮೆರಾ ನಿರ್ವಾಹಕರಾದ ಇಬ್ರಾಹಿಂ ಜಹೀರ್, ಮೊಹಮ್ಮದ್ ನೌಫಲ್ ಮತ್ತು ಮೊವಾಮೆನ್ ಅಲಿವಾ ಎಂದು ಗುರುತಿಸಲಾಗಿದೆ.
ಆದರೆ ಅನಾಸ್ ಅಲ್-ಶರೀಫ್ ಪತ್ರಕರ್ತನಲ್ಲ, ಪತ್ರಕರ್ತನ ಸೋಗಿನಲ್ಲಿದ್ದ ಹಮಾಸ್ ಉಗ್ರ. ಇಸ್ರೇಲ್ ಮೇಲಿನ ಕ್ಷಿಪಣಿ ದಾಳಿಗಳಲ್ಲಿ ಆತ ಪ್ರಮುಖ ಪಾತ್ರ ವಹಿಸಿದ್ದ ಎಂದು ಇಸ್ರೇಲ್ ಹೇಳಿಕೊಂಡಿದೆ.
ಅಲ್-ಶರೀಫ್ ಹಮಾಸ್ ಘಟಕದ ಮುಖ್ಯಸ್ಥನಾಗಿದ್ದ. ಇಸ್ರೇಲಿ ನಾಗರಿಕರು ಮತ್ತು ಐಡಿಎಫ್ (ಇಸ್ರೇಲಿ) ಪಡೆಗಳ ವಿರುದ್ಧ ರಾಕೆಟ್ ದಾಳಿಗಳನ್ನು ನಡೆಸುವ ಯೋಜನೆ ನಡೆಸಲಾಗಿತ್ತು. ಹೀಗಾಗಿ ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ. ಸೇನೆಯು ಗಾಜಾದಲ್ಲಿ ಕಂಡುಬಂದ ಗುಪ್ತಚರ ಮತ್ತು ದಾಖಲೆಗಳನ್ನು ಪುರಾವೆಯಾಗಿ ಉಲ್ಲೇಖಿಸಿ ಹೇಳಿಕೆಯಲ್ಲಿ ತಿಳಿಸಿದೆ. ಈ ನಡುವೆ ಪತ್ರಕರ್ತರ ಹತ್ಯೆಯನ್ನು ಪತ್ರಕರ್ತರ ಗುಂಪುಗಳು ಮತ್ತು ಅಲ್ ಜಜೀರಾ ಖಂಡಿಸಿದೆ.
ಇನ್ನು ಸಾವಿಗೂ ಮುನ್ನ ಅಲ್-ಷರೀಫ್ ಪೋಸ್ಟ್ ಒಂದನ್ನು ಮಾಡಿದ್ದು, ಅದರಲ್ಲಿ ಸತ್ಯವನ್ನು ಜನರಿಗೆ ತಿಳಿಸಲು ಹೋರಾಡುತ್ತಿದ್ದೇನೆ. ಸಾವಿಗೂ ತಾನು ಹೆದರುವುದಿಲ್ಲ ಎಂದು ಬರೆದುಕೊಂಡಿದ್ದಾನೆ. ನನ್ನ ಮಾತುಗಳು ನಿಮ್ಮನ್ನು ತಲುಪಿದರೆ, ಇಸ್ರೇಲ್ ನನ್ನನ್ನು ಕೊಲ್ಲುವಲ್ಲಿ ಮತ್ತು ನನ್ನ ಧ್ವನಿಯನ್ನು ಮೌನಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ತಿಳಿಯಿರಿ. ಮೊದಲಿಗೆ, ನಿಮ್ಮೆಲ್ಲರ ಮೇಲೆ ಶಾಂತಿ, ಕರುಣೆ ಮತ್ತು ಆಶೀರ್ವಾದವಿರಲಿ ಎಂದು ಬರೆದುಕೊಂಡಿದ್ದಾನೆ.
























