ಸದನದಲ್ಲಿ ಧರ್ಮಸ್ಥಳ ವಿಷಯವನ್ನು ಪ್ರಸ್ತಾಪ ಮಾಡಲು ಸಿದ್ಧತೆ
ಬೆಂಗಳೂರು : ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು ಇದ್ದಾರೆ ಎಂದು ಬಿಜೆಪಿ ನಾಯಕ ಸಿ .ಟಿ. ರವಿ ಆರೋಪಿಸಿದ್ದಾರೆ. ಕೋಟ್ಯಂತರ ಜನರ ಶ್ರದ್ಧೆ, ಭಕ್ತಿ, ನಂಬಿಕೆಯ ಸ್ಥಳ ಧರ್ಮಸ್ಥಳ. ಅದಕ್ಕೆ ಘಾಸಿ ಮಾಡುವ ಅಧಿಕಾರವನ್ನು ಯಾರಿಗೂ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು ಸದನದಲ್ಲಿ ಧರ್ಮಸ್ಥಳ ವಿಷಯವನ್ನು ಪ್ರಸ್ತಾಪ ಮಾಡುತ್ತೇವೆ ಎಂದಿದ್ದಾರೆ.
ಆ ಯೂಟ್ಯೂಬರ್ ವಿರುದ್ಧ ಏನು ಕ್ರಮ ಕೈಗೊಂಡಿದ್ದೀರಿ? ಆತ ನ್ಯಾಯಾಲಯಕ್ಕೆ ದಾಖಲೆ ಕೊಡುವುದಿಲ್ಲ. ಆದರೆ ಯೂಟ್ಯೂಬ್ನಲ್ಲಿ ಬೇಕಾದ ಹಾಗೆ ಮಾತಾಡಬಹುದಾ? ಇಷ್ಟಕ್ಕೂ ಆ ಭೀಮ ಯಾರು, ಮಂಪರು ಪರೀಕ್ಷೆ ಮಾಡಿದ್ದೀರಾ? ಆತ ತೋರಿಸಿದ 17 ಸ್ಥಳದಲ್ಲಿ 16 ಸ್ಥಳದಲ್ಲಿ ಏನೂ ಸಿಕ್ಕಿಲ್ಲ. ಸತ್ಯಾಸತ್ಯತೆ ಮನವರಿಕೆಯಾಗದೆ ತನಿಖೆ ಮಾಡುತ್ತಿದ್ದಾರೆ. ಇದರ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರಿದ್ದಾರೆ. ಶ್ರದ್ಧೆಗೆ ಧಕ್ಕೆಯಾದರೆ ಮತಾಂತರದ ಬೆಳೆ ತೆಗೆಯಬಹುದು. ಅದಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಈ ನಡುವೆ ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಸೋಮವಾರ 17ನೇ ಪಾಯಿಂಟ್‌ನಲ್ಲಿ ಉತ್ಖನನ ಮಾಡಲು ಸಿದ್ಧತೆ ನಡೆದಿದೆ.
ಈಗಾಗಲೇ ಗುಂಡಿ ನಂಬರ್ 16ರಲ್ಲಿ ಉತ್ಖನನ ಮುಗಿದಿದೆ. ಆದರೆ 13 ಪಾಯಿಂಟ್ ಇನ್ನೂ ಕಗ್ಗಂಟಾಗಿ ಉಳಿದಿದೆ. ಭಾನುವಾರದ ರಜೆಯ ನಂತರ ಇಂದು ಮತ್ತೆ ಶೋಧ ಕಾರ್ಯ ನಡೆಯುತ್ತಿದೆ. ಒಟ್ಟು 30 ಸ್ಪಾಟ್‌ಗಳಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ಅನಾಮಿಕ ತಿಳಿಸಿದ್ದಾನೆ. ಗ್ರಾಮದಲ್ಲಿ ದಿನಕ್ಕೊಂದು ಗುಡ್ಡವನ್ನು ಸುತ್ತಿಸುತ್ತಿದ್ದಾನೆ.
ಸಮಾಧಿ ಶೋಧ ಜೊತೆಗೆ ಎಸ್‌ಐಟಿ ವಿಚಾರಣೆಯೂ ತೀವ್ರಗೊಂಡಿದೆ. ಧರ್ಮಸ್ಥಳ, ಬೆಳ್ತಂಗಡಿಯ ನಿವೃತ್ತ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಎಸ್‌ಐಟಿ ಹಲವಾರು ಮಾಹಿತಿ ಸಂಗ್ರಹಿಸಿದೆ. ಮುಸುಕುಧಾರಿ ವ್ಯಕ್ತಿಯ ಎಲ್ಲ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಧರ್ಮಸ್ಥಳದ ನಿವೃತ್ತ ಠಾಣಾಧಿಕಾರಿಗಳಿಂದಲೂ ಮಾಹಿತಿ ಸಂಗ್ರಹ ಮಾಡಲಾಗಿದೆ. 20 ವರ್ಷ ನೇತ್ರಾವತಿ ಸಮೀಪ ಬಿಡಾರದಲ್ಲಿ ಅನಾಮಿಕ ವಾಸಿಸಿದ್ದ ಎನ್ನಲಾಗುತ್ತಿದೆ.
ಎಸ್‌ಐಟಿ ಇದುವರೆಗೂ ನಡೆಸಿದ ಶೋಧದಲ್ಲಿ ಒಂದೇ ಒಂದು ಕುರುಹು ಪತ್ತೆಯಾಗಿಲ್ಲ. ಎಸ್‌ಐಟಿ ಅಧಿಕಾರಿಗಳಿಗೆ ಮಣ್ಣು ಅಗೆಸುವ ಕೆಲಸ ಇನ್ನು ಎಷ್ಟು ದಿನ ಎಂಬ ಪ್ರಶ್ನೆ ಉದ್ಭವಿಸಿದೆ. ಅನಾಮಿಕ ಹೇಳಿದ ರೀತಿ ಒಂದೇ ಒಂದು ಗುಂಡಿಯಲ್ಲೂ ಆರೋಪದ ಕುರುಹುಗಳು ಪತ್ತೆಯಾಗಿಲ್ಲ.
ವೈದ್ಯರಿಗೆ ನೋಟಿಸ್?
ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಕೇಸ್‌ನಲ್ಲಿ ಹಲವು ವೈದ್ಯರಿಗೆ ನೊಟಿಸ್ ನೀಡುವ ಸಾಧ್ಯತೆ ಇದೆ. ಯುಡಿಆರ್ ಕೇಸ್‌ಗಳ ಮರಣೋತ್ತರ ವರದಿಗಳ ಬಗ್ಗೆ ಮಾಹಿತಿ ಪಡೆಯಲು ಈ ಕ್ರಮಕ್ಕೆ ಎಸ್‌ಐಟಿ ಮುಂದಾಗಿದೆ. 1995ರಿಂದ 2014ರವರೆಗಿನ ಯುಡಿಆರ್ ಕೇಸ್‌ಗಳ ತನಿಖೆಯನ್ನು ಆರಂಭಿಸಿದೆ. ಧರ್ಮಸ್ಥಳ ಗ್ರಾಮದಲ್ಲಿ ನಡೆದ ಕೊಲೆ, ಅನಾಥ ಶವ ಪತ್ತೆ ಪ್ರಕರಣಗಳ ತನಿಖೆ ಆರಂಭಿಸಲಾಗಿದ್ದು, ಎಲ್ಲ ಕೇಸ್‌ಗಳ ಮರಣೋತ್ತರ ಪರೀಕ್ಷೆ ವರದಿಗಳ ಆಳವಾದ ತನಿಖೆಗೆ ಎಸ್‌ಐಟಿ ಮುಂದಾಗಿದೆ. 19 ವರ್ಷಗಳಲ್ಲಿ ಮರಣೋತ್ತರ ಪರೀಕ್ಷೆ ನಡೆಸಿರುವ ವೈದ್ಯರ ಲಿಸ್ಟ್ ಸಿದ್ಧವಾಗಿದೆ. ವೈದ್ಯರು ಹಾಗೂ ಡಿ ಗ್ರೂಪ್ ನೌಕರರ ದಾಖಲೆಯನ್ನು ಎಸ್‌ಐಟಿ ಪರಿಶೀಲಿಸುತ್ತಿದೆ. ಖಾಸಗಿ ಹಾಗೂ ಸರ್ಕಾರಿ ಫೋರೆನ್ಸಿಕ್ ವೈದ್ಯರ ಸಮಗ್ರ ಮಾಹಿತಿ ಸಂಗ್ರಹಿಸಲಾಗಿದೆ. ವೈದ್ಯರು ಹಾಗೂ ಡಿ ಗ್ರೂಪ್ ನೌಕರರರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಿದೆ. ಪೋಸ್ಟ್‌ಮಾರ್ಟಂ ವರದಿಗಳಲ್ಲಿ ಅನುಮಾನ ಅಥವಾ ಗೊಂದಲ ಇದ್ದರೆ ಹೆಚ್ಚಿನ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
























