ಇಂಜಿನಿಯರಿಂಗ್ ವಿದ್ಯಾರ್ಥಿಯಿಂದಲೂ ಡ್ರಗ್ಸ್ ದಂಧೆ
ಮಂಗಳೂರು : ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿರುವ ಮಂಗಳೂರು ಪೊಲೀಸರು ಪ್ರತ್ಯೇಕ ಪ್ರಕರಣಗಳಲ್ಲಿ ಕಳೆದ ಶುಕ್ರವಾರದಿಂದೀಚೆಗೆ 7 ಮಂದಿಯನ್ನು ಬಂಧಿಸಿ ಕೇಸ್ ದಾಖಲಿಸಿಕೊಂಡಿದ್ದಾರೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವಕರು ಮತ್ತು ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮಾದಕವಸ್ತು ಮಾರಾಟ ಮಾಡುತ್ತಿದ್ದವರ ಮೇಲೆ ಕಾರ್ಯಾಚರಣೆ ನಡೆಸಿರುವ ಪೊಲೀಸರು 5 ಕೆಜಿಯಷ್ಟು ಗಾಂಜಾ ವಶಪಡಿಸಿಕೊಂಡಿದ್ದಾರೆ.
ಶೈಕ್ಷಣಿಕ ಮತ್ತು ವಸತಿ ಪ್ರದೇಶಗಳಲ್ಲಿ ಮತ್ತು ಸುತ್ತಮುತ್ತ ಗಾಂಜಾ ಮಾರಾಟ ಮಾಡುತ್ತಿರುವ ವ್ಯಕ್ತಿಗಳ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಪೊಲೀಸ್ ತಂಡಗಳು ಐದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ದಾಳಿ ನಡೆಸಿವೆ. ಮೊದಲ ಕಾರ್ಯಾಚರಣೆಯಲ್ಲಿ ಕುದ್ರೋಳಿ-ಕಂಡತ್‌ಪಳ್ಳಿ ಪ್ರದೇಶದಲ್ಲಿ ಹಲವು ದಿನಗಳಿಂದ ರಹಸ್ಯವಾಗಿ ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪದ ಮೇಲೆ ಅಬ್ದುಲ್ ಸಮದ್ ಅಲಿಯಾಸ್ ಚಮ್ಮು ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ.
ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಜನರನ್ನು ಗುರಿಯಾಗಿಸಿಕೊಂಡು ಈತ ಡ್ರಗ್ಸ್ ಮಾರಾಟ ಮಾಡುತ್ತಿದ್ದ. 1 ಕೆಜಿ 40 ಗ್ರಾಂ ಗಾಂಜಾ ಅವನಿಂದ ವಶಪಡಿಸಿಕೊಳ್ಳಲಾಗಿದೆ. ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳ್ನಾಡು–ಲಿಂಗಪ್ಪಯ್ಯನಕಾಡು ಎಂಬಲ್ಲಿ ಕಾಲೇಜು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಯುವಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಲಿಂಗಪ್ಪಯ್ಯನಕಾಡು ನಿವಾಸಿ ಧರ್ಮಲಿಂಗ ಎಂಬಾತನನ್ನು ಪೊಲೀಸರು ಬಂಧಿಸಿ ಆತನಿಂದ 1 ಕಿಲೋ 90 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯ ಮರವೂರಿನಲ್ಲಿ ಬಿಹಾರದ ದೌಲತ್ ಕುಮಾರ್ ಶರ್ಮಾ ಮತ್ತು ಮೊಹಮ್ಮದ್ ಖುಶಾಲಂ ಎಂಬ ಇಬ್ಬರು ವ್ಯಕ್ತಿಗಳು ಸ್ಥಳೀಯ ಯುವಕರಿಗೆ ಗಾಂಜಾ ಮತ್ತು ಭಾಂಗ್ ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಅವರು ಅಂತರರಾಜ್ಯ ಪೂರೈಕೆ ಸರಪಳಿಯ ಭಾಗವಾಗಿದ್ದರು ಮತ್ತು ಸ್ಥಳೀಯ ನಿವಾಸಿಗಳಿಗೆ ಮಾದಕ ದ್ರವ್ಯಗಳನ್ನು ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ದೃಢಪಡಿಸಿದ್ದಾರೆ. ಬಂಧಿತರಿಂದ 1 ಕಿಲೋ 189 ಗ್ರಾಂ ಗಾಂಜಾ ಮತ್ತು 219 ಗ್ರಾಂ ಭಾಂಗ್ ವಶಪಡಿಸಿಕೊಳ್ಳಲಾಗಿದೆ.
ಪಡೀಲ್ ಬಳಿಯ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ಕಾರ್ತಿಕ್ ಮತ್ತು ಮೋಹಿತ್ ಎಂಬ ಇಬ್ಬರು ಯುವಕರನ್ನು ಬಂಧಿಸಿ 800 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿಯ ಡ್ರಗ್ಸ್ ದಂಧೆ
ಕೇರಳದ ಮಲಪ್ಪುರಂ ಮೂಲದ ನಗರದ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರಣವ್ ಕೆ.ವಿ. ಎಂಬಾತನನ್ನು ಮಂಗಳೂರು ಪೂರ್ವ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಮತ್ತು ಸ್ಥಳೀಯರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ. ಅವನು ಹಲವು ವಾರಗಳಿಂದ ರಹಸ್ಯವಾಗಿ ಗಾಂಜಾ ವ್ಯವಹಾರ ಮಾಡುತ್ತಿದ್ದನು. ಆತನಿಂದ 1 ಕಿಲೋ 100 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
























