ಟ್ರಂಪ್‌ ಸುಂಕ ಡಬ್ಬಲ್‌

ಭಾರತದ ಮೇಲೆ ಮತ್ತೆ ಶೇ.25 ಸುಂಖ ವಿಧಿಸಿದ ಅಮೆರಿಕ ಅಧ್ಯಕ್ಷ

ನವದೆಹಲಿ : ರಷ್ಯಾದಿಂದ ತೈಲ ಖರೀದಿಸುತ್ತಿರುವುದರ ವಿರುದ್ದ ಭಾರತದ ಮೇಲೆ ಕೆಂಡ ಕಾರುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾರತಕ್ಕೆ ಮತ್ತೆ ಶೇ.25 ವ್ಯಾಪಾರ ಸುಂಕ ವಿಧಿಸಿದ್ದಾರೆ. ಇದರೊಂದಿಗೆ ಭಾರತದ ಮೇಲೆ ಟ್ರಂಪ್‌ ಶುಲ್ಕ ಶೇ.50ಕ್ಕೇರಿದಂತಾಗಿದೆ.
ಮಂಗಳವಾರವಷ್ಟೇ 24 ಗಂಟೆಯೊಳಗೆ ಭಾರತದ ಮೇಲಿನ ಸುಂಕವನ್ನು ಗಣನೀಯವಾಗಿ ಹೆಚ್ಚಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ ಟ್ರಂಪ್‌ ಹೇಳಿದಂತೆ ಮಾಡಿ ಭಾರತದ ಮೇಲೆ ಹೆಚ್ಚುವರಿಯಾಗಿ ಶೇ.25ರಷ್ಟು ಸುಂಕ ವಿಧಿಸಿದ್ದಾರೆ. ಈ ಮೂಲಕ ಭಾರತದ ಮೇಲೆ ಅಮೆರಿಕ ಹೇರಿರುವ ವ್ಯಾಪಾರ ಸುಂಕ ಶೇ. 50ರಷ್ಟಾಗಿದೆ.

ಆಗಸ್ಟ್ 27ರಿಂದ ಜಾರಿಗೆ ಬರಲಿರುವ ಈ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ ಹಾಕಿದ್ದಾರೆ. ಜುಲೈ 30ರಂದು ಟ್ರಂಪ್ ಆಗಸ್ಟ್ 1ರಿಂದ ಭಾರತೀಯ ಆಮದುಗಳ ಮೇಲೆ ಶೇ.25ರಷ್ಟು ಸುಂಕ ವಿಧಿಸಲಾಗುವುದು ಮತ್ತು ಹೆಚ್ಚುವರಿ ಅನಿರ್ದಿಷ್ಟ ದಂಡ ವಿಧಿಸಲಾಗುವುದು ಎಂದು ಘೋಷಿಸಿದ್ದರು. ಅದಾದ ಬಳಿಕ ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಭಾರತದ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭಾರತಕ್ಕೆ ಎಚ್ಚರಿಕೆ ನೀಡಿದ್ದರು. ಅದರಂತೆ ಟ್ರಂಪ್ ಭಾರತದ ಮೇಲೆ ಹೆಚ್ಚುವರಿ ಶೇ.25 ವ್ಯಾಪಾರ ಸುಂಕವನ್ನು ಘೋಷಿಸಿದ್ದಾರೆ.





















































 
 

ಟ್ರಂಪ್ ಅವರ ಈ ಆದೇಶವು ಭಾರತೀಯ ಸರಕುಗಳ ಆಮದಿನ ಮೇಲಿನ ಒಟ್ಟು ಸುಂಕವನ್ನು ಶೇ. 50ಕ್ಕೆ ಹೆಚ್ಚಿಸಿದೆ. ಇದು ಚೀನಾದ ಮೇಲಿನ ಸುಂಕಕ್ಕಿಂತ ಶೇ. 20ರಷ್ಟು ಹೆಚ್ಚು ಮತ್ತು ಪಾಕಿಸ್ತಾನದ ಮೇಲಿನ ಸುಂಕಕ್ಕಿಂತ ಶೇ. 21ರಷ್ಟು ಹೆಚ್ಚು. ಇಂದು ಸಹಿ ಹಾಕಲಾದ ಕಾರ್ಯಕಾರಿ ಆದೇಶದಲ್ಲಿ ಟ್ರಂಪ್, ಭಾರತ ಸರ್ಕಾರ ಪ್ರಸ್ತುತ ನೇರವಾಗಿ ಅಥವಾ ಪರೋಕ್ಷವಾಗಿ ರಷ್ಯಾದ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ನಾನು ಕಂಡುಕೊಂಡಿದ್ದೇನೆ. ಹೀಗಾಗಿ ಹೆಚ್ಚುವರಿಯಾಗಿ ಭಾರತದಿಂದ ವಸ್ತುಗಳ ಆಮದಿನ ಸುಂಕವನ್ನು ವಿಧಿಸುವುದು ಅಗತ್ಯವೆಂದು ನಾನು ನಿರ್ಧರಿಸಿದ್ದೇನೆ ಎಂದು ಬರೆದಿದ್ದಾರೆ.

ಭಾರತ ಎಲ್ಲರಿಗಿಂತ ಹೆಚ್ಚಿನ ಸುಂಕವನ್ನು ಹೊಂದಿದೆ. ನಾವು ಸುಂಕವನ್ನು ಶೇ.25ಕ್ಕೆ ನಿರ್ಧರಿಸಿದ್ದೆವು. ಆದರೆ ಮುಂದಿನ 24 ಗಂಟೆಗಳಲ್ಲಿ ನಾನು ಭಾರತದ ಮೇಲಿನ ಸುಂಕವನ್ನು ಗಣನೀಯವಾಗಿ ಹೆಚ್ಚಿಸಲಿದ್ದೇನೆ. ಏಕೆಂದರೆ ಭಾರತ ರಷ್ಯಾದ ತೈಲವನ್ನು ಖರೀದಿಸುತ್ತಿದೆ. ಈ ಮೂಲಕ ಅವರು ಉಕ್ರೇನ್ ವಿರುದ್ಧದ ರಷ್ಯಾದ ಯುದ್ಧಕ್ಕೆ ಪರೋಕ್ಷವಾಗಿ ಹಣ ನೀಡುತ್ತಿದ್ದಾರೆ ಎಂದು ಟ್ರಂಪ್ ಮಂಗಳವಾರ ಹೇಳಿಕೆ ನೀಡಿದ್ದರು.

ಭಾರತ ತಿರುಗೇಟು

ರಷ್ಯಾದ ತೈಲವನ್ನು ಖರೀದಿಸಿದ್ದಕ್ಕಾಗಿ ದೇಶದ ಮೇಲೆ ಸುಂಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಕ್ಕೆ ಭಾರತ ತೀವ್ರ ತಿರುಗೇಟು ನೀಡಿದೆ. ರಷ್ಯಾದೊಂದಿಗೆ ಅಮೆರಿಕ ತನ್ನದೇ ಆದ ಬೃಹತ್ ವ್ಯಾಪಾರವನ್ನು ಹೊಂದಿದ್ದರೂ ಭಾರತವನ್ನು ಅನ್ಯಾಯವಾಗಿ ಗುರಿಯಾಗಿಸಿಕೊಂಡಿದೆ ಎಂದು ಆರೋಪಿಸಿರುವ ಭಾರತ, ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಡಬಲ್ ಸ್ಟಾಂಡರ್ಡ್ ಅನ್ನು ಭಾರತ ಸರ್ಕಾರ ಬಹಿರಂಗಪಡಿಸಿದೆ. ಭಾರತದ ಆಮದು ತನ್ನ ನಾಗರಿಕರಿಗೆ ಕೈಗೆಟುಕುವ ಇಂಧನವನ್ನು ಖಚಿತಪಡಿಸುತ್ತದೆ. ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ವಿನಾಕಾರಣ ಭಾರತವನ್ನು ಟಾರ್ಗೆಟ್ ಮಾಡುತ್ತಿರುವುದು ನ್ಯಾಯಸಮ್ಮತವಲ್ಲ. ಇದು ಅಸಮರ್ಥನೀಯ ಎಂದು ವಿದೇಶಾಂಗ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಉಕ್ರೇನ್ ಸಂಘರ್ಷ ಪ್ರಾರಂಭವಾದ ನಂತರ ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಂಡಿದ್ದಕ್ಕಾಗಿ ಭಾರತವನ್ನು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಗುರಿಯಾಗಿಸಿಕೊಂಡಿತ್ತು. ವಾಸ್ತವವಾಗಿ, ಸಂಘರ್ಷದ ನಂತರ ಸಾಂಪ್ರದಾಯಿಕ ಸರಬರಾಜುಗಳನ್ನು ಯುರೋಪಿಗೆ ತಿರುಗಿಸಿದ ಕಾರಣ ಭಾರತ ರಷ್ಯಾದಿಂದ ಆಮದು ಮಾಡಿಕೊಳ್ಳಲು ಪ್ರಾರಂಭಿಸಿದೆ ಎಂದು ವಿದೇಶಾಂಗ ಸಚಿವಾಲಯ ರಷ್ಯಾದಿಂದ ತೈಲ ಖರೀದಿಯನ್ನು ಸಮರ್ಥಿಸಿಕೊಂಡಿದೆ.

error: Content is protected !!
Scroll to Top