ಪುತ್ತೂರು: ಗ್ರಾಮ ಪಂಚಾಯತ್ಗಳಿಂದ ನಿರಂತರವಾಗಿ ಒಣ ಕಸ ಸಂಗ್ರಹಣೆ ಆಗದಿರುವುದರಿಂದ ಉಂಟಾಗುತ್ತಿರುವ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಶೀಲಿಸುವ ಹಾಗೂ ಘಟಕದ ಕಾರ್ಯವೈಖರಿಯನ್ನು ಅಧ್ಯಯನ ಮಾಡುವ ಉದ್ದೇಶದಿಂದ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಅವರು ಇಂದು MRF ಘಟಕಕ್ಕೆ ಭೇಟಿ ನೀಡಿದರು.
ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕುಗಳ ವ್ಯಾಪ್ತಿಯ 68 ಗ್ರಾಮ ಪಂಚಾಯತ್ಗಳಿಂದ ಒಣ ಕಸವನ್ನು ಸಂಗ್ರಹಿಸುತ್ತಿರುವ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರ (MRF – Material Recovery Facility) ಪುತ್ತೂರು ತಾಲೂಕಿನ ಕೆದಂಬಾಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಘಟಕಕ್ಕೆ ಅಗತ್ಯವಿರುವ ತ್ಯಾಜ್ಯ ಸಂಗ್ರಹಣಾ ವಾಹನ ಹಾಗೂ ನಿರಂತರ ವಿದ್ಯುತ್ ಪೂರೈಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ “ಸ್ವಚ್ಛ ಭಾರತ್” ಅಭಿಯಾನದ ದೃಷ್ಟಿಕೋನ ಕೇವಲ ಶೌಚಾಲಯ ನಿರ್ಮಾಣಕ್ಕೆ ಮಾತ್ರ ಸೀಮಿತವಲ್ಲ. ಅದು ಸ್ವಚ್ಛತೆ, ಆರೋಗ್ಯ, ಪರಿಸರ ಸಂರಕ್ಷಣೆ ಮತ್ತು ಸ್ಥಳೀಯ ಸಮುದಾಯದ ಹಿತಚಿಂತನೆಯ ದೊಡ್ಡ ದೃಷ್ಟಿಕೋನವಾಗಿದೆ. ಈ ಹಿನ್ನೆಲೆಯಲ್ಲಿ, ಈ ದಿನದ ಭೇಟಿಯು ಗ್ರಾಮೀಣ ಸಮುದಾಯದ ಒಳಗೆ ಜವಾಬ್ದಾರಿ, ಜಾಗೃತಿ ಹಾಗೂ ಸ್ಥಳೀಯ ಆಡಳಿತದೊಂದಿಗೆ ನಿಕಟ ಸಹಕಾರವನ್ನು ಉತ್ತೇಜಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.
ಘಟಕದ ಪ್ರಸ್ತುತ ಕಾರ್ಯಚರಣೆ, ತಾಂತ್ರಿಕ ಸವಾಲುಗಳು ಹಾಗೂ ನಿರ್ವಹಣಾ ತೊಂದರೆಗಳ ಕುರಿತು ವಿವರಣೆ ನೀಡಲಾಯಿತು.

ಈ ಸಂದರ್ಭದಲ್ಲಿ ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ, ಉಪಾಧ್ಯಕ್ಷೆ ಜಯಲಕ್ಷ್ಮಿ, ಸದಸ್ಯರಾದ ರತನ್ ಕುಮಾರ್ ಹಾಗೂ ಕೃಷ್ಣ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಜಿತ್ ಕುಮಾರ್, ಪಂಚಾಯತ್ ಸಿಬ್ಬಂದಿಗಳು, ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಶರತ್ ಕುಮಾರ್ ಹಾಗೂ ಘಟಕದ ವ್ಯವಸ್ಥಾಪಕ ಪ್ರಶಾಂತ್ ಉಪಸ್ಥಿತರಿದ್ದರು.
























