ಧರ್ಮಸ್ಥಳ ಪ್ರಕರಣ ಪಾರದರ್ಶಕ ತನಿಖೆ : ಪರಮೇಶ್ವರ

ಎಸ್‌ಐಟಿ ವಿವೇಚನೆಯಂತೆ ತನಿಖೆ; ಸರ್ಕಾರದ ಹಸ್ತಕ್ಷೇಪವಿಲ್ಲ ಎಂದು ಸ್ಪಷ್ಟನೆ

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಸಂಪೂರ್ಣ ತನಿಖೆಯನ್ನು ಎಸ್‍ಐಟಿ ಅಧಿಕಾರಿಗಳ ವಿವೇಚನೆಗೆ ಬಿಟ್ಟಿದ್ದೇವೆ. ಇದು ಗಂಭೀರವಾದ ಪ್ರಕರಣವಾದ್ದರಿಂದ ಎಚ್ಚರಿಕೆಯಿಂದ ಪಾರದರ್ಶಕವಾಗಿ ತನಿಖೆ ನಡೆಯುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರ ಗುರುತಿಸುವ ಸ್ಥಳಗಳನ್ನು ಎಸ್‍ಐಟಿ ಅಧಿಕಾರಿಗಳು ಅಗೆಯುವ ಬಗ್ಗೆ ತೀರ್ಮಾನ ಮಾಡುತ್ತಾರೆ, ಇದರಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪವಿಲ್ಲ. ಎಸ್‍ಐಟಿ ತಂಡ ಪಾರದರ್ಶಕವಾಗಿ ತನಿಖೆ ತನಿಖೆ ನಡೆಸುವ ವಿಶ್ವಾಸವಿದೆ. ಸಂಪೂರ್ಣ ತನಿಖೆ ಬಳಿಕ ವರದಿಯನ್ನು ಸಲ್ಲಿಸಿದಾಗ ಸರ್ಕಾರ ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಜಿ.ಪರಮೇಶ್ವರ್ ಹೇಳಿದರು.





















































 
 

ನಿನ್ನೆಯೂ ಸಿಕ್ಕಿಲ್ಲ ಕಳೇಬರ

ಈ ನಡುವೆ ನಿನ್ನೆ ಉತ್ಖನನ ನಡೆದ 11 ಮತ್ತು 12ನೇ ಸ್ಥಳದಲ್ಲಿ ಯಾವುದೇ ಅಸ್ಥಿಪಂಜರ ಅಥವಾ ಎಲುಬುಗಳು ಪತ್ತೆಯಾಗಿಲ್ಲ. ವಿಶೇಷ ತನಿಖಾ ತಂಡ ಸೋಮವಾರ ಪಾಯಿಂಟ್‌ ಸಂಖ್ಯೆ 11ರಲ್ಲಿ ಉತ್ಖನನ ನಡೆಸಬೇಕಿತ್ತು. ಆದರೆ ಈ ಜಾಗದ ಮೇಲಿನ ಭಾಗಕ್ಕೆ ತೆರಳಿತ್ತು. ಈ ಜಾಗದಲ್ಲಿ ತೆರಳಿದಾಗ ಮನುಷ್ಯನ ಮೂಳೆ ಸಿಕ್ಕಿತ್ತು. ಹೀಗಾಗಿ ಇಂದು ಪಾಯಿಂಟ್‌ ಸಂಖ್ಯೆ 11 ಮತ್ತು 12ರಲ್ಲಿ ಮಂಗಳವಾರ ಉತ್ಖನನ ನಡೆಯಿತು.

ಸುಮಾರು ಎರಡೂವರೆ ಗಂಟೆಗಳ ಕಾಲ ಕಾರ್ಯಾಚರಣೆ ನಡೆಯಿತು. 6 ಅಡಿ ಗುಂಡಿ ತೋಡಿದರೂ ಯಾವುದೇ ಕಳೇಬರ ಪತ್ತೆಯಾಗಲಿಲ್ಲ. ಕೊನೆಗೆ ಹಿಟಾಚಿ ಮೂಲಕ ಅಗೆದ ಜಾಗವನ್ನು ಮುಚ್ಚಲಾಯಿತು. ಇಲ್ಲಿಯವರೆಗೆ ದೂರುದಾರ ಗುರುತಿಸಿದ್ದ 6ನೇ ಪಾಯಿಂಟ್‌ನಲ್ಲಿ ಅಸ್ಥಿಪಂಜರ ಸಿಕ್ಕಿತ್ತು. ತನ್ನ ದೂರಿನಲ್ಲಿ ದೂರುದಾರ 13 ಜಾಗಗಳಲ್ಲಿ ಹೆಣವನ್ನು ಹೂತಿದ್ದೇನೆ ಎಂದು ತಿಳಿಸಿದ್ದ.

ಪ್ರತಿದಿನ 2 ಲ.ರೂ. ಖರ್ಚು?

ಧರ್ಮಸ್ಥಳದಲ್ಲಿ ಕಳೇಬರ ಶೋಧ ಕಾರ್ಯಾಚರಣೆ ಕಳೆದ 7 ದಿನಗಳಿಂದ ನಡೆಯುತ್ತಿದ್ದು, ಪ್ರತಿದಿನ ಈ ಒಂದ ಕಾರ್ಯಾಚರಣೆಗೆ ಸುಮಾರು ಅಂದಾಜು ಪ್ರತಿದಿನ 2 ಲಕ್ಷ ರೂ. ಖರ್ಚಾಗುತ್ತಿದೆ ಎನ್ನಲಾಗಿದೆ.

ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆಗೆ 260 ಅಧಿಕಾರಿ, ಸಿಬ್ಬಂದಿ ಬಳಕೆ ಆಗುತ್ತಿದೆ. ಎಸ್‌ಐಟಿ ತಂಡದಲ್ಲಿ 26 ಅಧಿಕಾರಿಗಳು ಇದ್ದರೆ, 5 ಮಂದಿ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು, 15 ಪೌರ ಕಾರ್ಮಿಕರು, 200 ಪೊಲೀಸ್‌ ಸಿಬ್ಬಂದಿ ಇದ್ದಾರೆ. ಒಬ್ಬರು ಸಹಾಯಕ ಆಯುಕ್ತ (ಎಸಿ), ಒಬ್ಬರು ತಹಶೀಲ್ದಾರ್‌, 5 ಮಂದಿ ಸ್ಥಳೀಯಾಡಳಿತ ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ. ಇವರೆಲ್ಲರ ಸಂಬಳ ಸೇರಿ ನಿತ್ಯ ಅಂದಾಜು 2 ಲಕ್ಷ ರೂ. ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ಅಧಿಕಾರಿಗಳು, ಪೊಲೀಸರು, ಕಾರ್ಮಿಕರ ಊಟ, ತಿಂಡಿಗೆ ದಿನಕ್ಕೆ 35 ಸಾವಿರ ರೂ., ಅಧಿಕಾರಿಗಳ ವಿಶ್ರಾಂತಿಗಾಗಿ ಲಾಡ್ಜ್‌ಗೆ ದಿನಕ್ಕೆ 25 ಸಾವಿರ ರೂ., ಗುಂಡಿ ಅಗೆಯುವ ಕಾರ್ಮಿಕರಿಗೆ ದಿನಕ್ಕೆ 2 ಸಾವಿರ ರೂ.ಯಂತೆ 15 ಜನ ಕಾರ್ಮಿಕರಿಗೆ ದಿನಕ್ಕೆ 30 ಸಾವಿರ ರೂ. ಖರ್ಚಾಗುತ್ತಿದೆ.

ಪೊಲೀಸ್, ವೈದ್ಯರ ಓಡಾಟಕ್ಕೆ ವಾಹನ, ಪೆಟ್ರೋಲ್ ಬಳಕೆಗೆ ದಿನಕ್ಕೆ 20 ಸಾವಿರ ರೂ., ವಿಧಿ ವಿಜ್ಞಾನ ತಂಡದ ವಿಶೇಷ ಉಪಕರಣಗಳ ಬಳಕೆ ದಿನಕ್ಕೆ 3 ರಿಂದ 4 ಸಾವಿರ ರೂ. ಗುಂಡಿ ಸಿಕ್ಕ ಕಡೆ ತಾತ್ಕಾಲಿಕ ಟೆಂಟ್ ನಿರ್ಮಾಣಕ್ಕೆ ದಿನಕ್ಕೆ 3-4 ಸಾವಿರ ರೂ. ಖರ್ಚಾಗುತ್ತಿದೆ ಎನ್ನಲಾಗಿದೆ.

error: Content is protected !!
Scroll to Top