ಸೋಲಿನ ದವಡೆಯಿಂದ ಗೆಲುವನ್ನು ಕಸಿದು ಬೀಗಿದ ಟೀಮ್ ಇಂಡಿಯಾ–ಭಾರತ ಮಾಡಿತು ಹಲವು ಹೊಸ ದಾಖಲೆ
ಲಂಡನ್: ಓವಲ್ನಲ್ಲಿ ನಡೆದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲಂಡ್ ವಿರುದ್ಧ ಭಾರತ 6 ರನ್ಗಳಿಂದ ರೋಚಕ ಗೆಲುವು ಸಾಧಿಸುವ ಮೂಲಕ ಬರೋಬ್ಬರಿ 77 ವರ್ಷಗಳ ನಂತರ ವಿದೇಶಿ ನೆಲದಲ್ಲಿ ಐದು ಪಂದ್ಯಗಳ ಸರಣಿಯ ಅಂತಿಮ ಪಂದ್ಯವನ್ನು ಗೆದ್ದ ದಾಖಲೆ ಮಾಡಿದೆ. ಈ ಗೆಲುವಿನೊಂದಿಗೆ ಭಾರತ 2-2ರ ಸಮಬಲದೊಂದಿಗೆ ಸರಣಿಯನ್ನು ಪೂರ್ಣಗೊಳಿಸಿದೆ. ಈ ಟೆಸ್ಟ್ ಸರಣಿ ಭಾರತದ ಪಾಲಿಗೆ ಸ್ಮರಣೀಯವಾಗಿ ಉಳಿಯಲಿದೆ. ಹಲವು ದಾಖಲೆಗಳ ಪತನಕ್ಕೂ ಈ ಸರಣಿ ಕಾರಣವಾಗಿದೆ. ಭಾರತದ ಯುವಪಡೆಯ ಸಾಮರ್ಥ್ಯದ ಜೊತೆಗೆ ಯುವ ನಾಯಕ ಶುಭಮನ್ ಗಿಲ್ ಅವರ ನಾಯಕತ್ವಕ್ಕೂ ಗಟ್ಟಿ ನೆಲೆ ಒದಗಿಸಿಕೊಟ್ಟಿದೆ. ಹೀಗೆ ನಾನಾ ಕಾರಣಗಳಿಗಾಗಿ ಈ ಟೆಸ್ಟ್ ಸರಣಿ ಭಾರತದ ಕ್ರಿಕೆಟ್ ಪಾಲಿಗೆ ವಿಶೇಷವಾಗಿದೆ.
ಅಂಕೊಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದ ಭಾರತ
ಐದನೇ ಟೆಸ್ಟ್ ಪಂದ್ಯದಲ್ಲಿ ಜಯಗಳಿಸುವ ಮೂಲಕ ಭಾರತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿದಿದೆ. 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತ 16 ಅಂಕ ಪಡೆದಿದ್ದರೆ ಇಂಗ್ಲೆಂಡ್ 26 ಅಂಕ ಪಡೆಯುವ ಮೂಲಕ ಮೂರನೇ ಸ್ಥಾನ ಪಡೆದಿತ್ತು. ಆದರೆ 5ನೇ ಟೆಸ್ಟ್ ಪಂದ್ಯದಲ್ಲಿ 6 ರನ್ಗಳಿಂದ ಜಯಗಳಿಸುವ ಮೂಲಕ ಭಾರತ 28 ಅಂಕ ಪಡೆದು ಮೂರನೇ ಸ್ಥಾನಕ್ಕೆ ಏರಿದರೆ 26 ರನ್ನಲ್ಲೇ ಮುಂದುವರಿಯುತ್ತಿರುವ ಇಂಗ್ಲೆಂಡ್ ನಾಲ್ಕನೇ ಸ್ಥಾನಕ್ಕೆ ಜಾರಿದೆ.
ಆಡಿರುವ ಮೂರು ಪಂದ್ಯಗಳನ್ನು ಗೆದ್ದು 36 ಅಂಕ ಪಡೆದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದೆ. ಎರಡು ಪಂದ್ಯಗಳ ಪೈಕಿ 1 ಜಯ, 1 ಡ್ರಾ ಮಾಡಿಕೊಂಡಿರುವ ಶ್ರೀಲಂಕಾ 16 ಅಂಕ ಪಡೆದು ಎರಡನೇ ಸ್ಥಾನದಲ್ಲಿದೆ.
ಸರಣಿಯ ಕೊನೆಯ ಟೆಸ್ಟ್ ಪಂದ್ಯ ಗೆದ್ದಿರುವುದು ಇದೇ ಮೊದಲು
ಸೋಲಿನೊಂದಿಗೆ ಇಂಗ್ಲೆಂಡ್ ಪ್ರವಾಸವನ್ನು ಆರಂಭಿಸಿದ್ದ ಟೀಂ ಇಂಡಿಯಾ ಓವಲ್ ಟೆಸ್ಟ್ ಪಂದ್ಯವನ್ನು 6 ರನ್ಗಳಿಂದ ಗೆದ್ದುಕೊಳ್ಳುವ ಮೂಲಕ ಅಂತ್ಯಗೊಳಿಸಿದೆ. ಒಂದು ಹಂತದಲ್ಲಿ ಸರಣಿ ಕಳೆದುಕೊಳ್ಳುವ ಆತಂಕದಲ್ಲಿದ್ದ ಟೀಂ ಇಂಡಿಯಾ ಇಬ್ಬರು ವೇಗಿಗಳ ಅಮೋಘ ಪ್ರದರ್ಶನದಿಂದ ಕೊನೆಯ ಪಂದ್ಯವನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಟೀಂ ಇಂಡಿಯಾ 77 ವರ್ಷಗಳ ದೀರ್ಘ ಕಾಯುವಿಕೆಯನ್ನು ಸಹ ಕೊನೆಗೊಳಿಸಿದೆ.
ವಾಸ್ತವವಾಗಿ ಭಾರತ ತಂಡ ವಿದೇಶಿ ನೆಲದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯ ಕೊನೆಯ ಪಂದ್ಯವನ್ನು ಗೆದ್ದಿರುವುದು ಇದೇ ಮೊದಲು. ಭಾರತ ಈ ಹಿಂದೆ ವಿದೇಶದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 16 ಬಾರಿ ಆಡಿದೆ. ಆದರೆ ಪ್ರತಿ ಬಾರಿ ಕೊನೆಯ ಟೆಸ್ಟ್ನಲ್ಲಿ ಸೋಲನುಭವಿಸಿತ್ತು. ಆದಾಗ್ಯೂ, ಈ ಬಾರಿ ಭಾರತೀಯ ಆಟಗಾರರು ಅದ್ಭುತ ಪ್ರದರ್ಶನದೊಂದಿಗೆ ಇತಿಹಾಸವನ್ನು ಸೃಷ್ಟಿಸಿದರು. ಓವಲ್ ಮೈದಾನದಲ್ಲಿ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ಭಾರತೀಯ ಬೌಲರ್ಗಳು ಮತ್ತು ಬ್ಯಾಟ್ಸ್ಮನ್ಗಳು ಸಾಂಘಿಕ ಪ್ರದರ್ಶನ ನೀಡಿ ಪಂದ್ಯವನ್ನು ಗೆದ್ದುಕೊಂಡರು.
ಟಿ20ಯಷ್ಟೇ ರೋಚಕವಾಗಿದ್ದ ಕೊನೆಯ ದಿನ
ಪಂದ್ಯದ ಐದನೇ ದಿನದಾಟ ಎಷ್ಟು ರೋಮಾಂಚನಕಾರಿಯಾಗಿತ್ತೆಂದರೆ ಇಂಗ್ಲೆಂಡ್ ಗೆಲುವಿಗೆ ಕೇವಲ 35 ರನ್ ಬೇಕಿದ್ದರೆ, ತಂಡದ ಬಳಿ ಇನ್ನು 4 ವಿಕೆಟ್ಗಳು ಉಳಿದಿದ್ದವು. ಆದರೆ ಕೊನೆಯ ದಿನದ ಮೊದಲ ಸೆಷನ್ನಲ್ಲಿ ಭಾರತದ ಇಬ್ಬರು ಬೌಲರ್ಗಳು ಇಡೀ ಪಂದ್ಯದ ದಿಕ್ಕನೇ ಬದಲಾಯಿಸಿದರು. ಕೊನೆಯ 4 ವಿಕೆಟ್ಗಳಲ್ಲಿ 3 ವಿಕೆಟ್ಗಳನ್ನು ಮೊಹಮ್ಮದ್ ಸಿರಾಜ್ ಮತ್ತು 1 ವಿಕೆಟ್ ಅನ್ನು ಪ್ರಸಿದ್ಧ್ ಕೃಷ್ಣ ಪಡೆದರು. ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಒಟ್ಟು 9 ವಿಕೆಟ್ಗಳನ್ನು ಪಡೆದರೆ, ಪ್ರಸಿದ್ಧ್ ಕೃಷ್ಣ 8 ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.
ಅತ್ಯಂತ ಕಡಿಮೆ ಅಂತರದ ಟೆಸ್ಟ್ ಜಯ
ಈ ಪಂದ್ಯದ ಗೆಲುವಿನೊಂದಿಗೆ ಮತ್ತೊಂದು ದಾಖಲೆಯನ್ನು ಸಹ ಯಂಗ್ ಯಂಗ್ ಇಂಡಿಯಾ ಸೃಷ್ಟಿಸಿತು. ವಿದೇಶದಲ್ಲಿ ಆಡಿದ 5 ಪಂದ್ಯಗಳ ಸರಣಿಯಲ್ಲಿ 1-2 ಅಂತರದಿಂದ ಹಿನ್ನಡೆ ಅನುಭವಿಸಿದ ನಂತರ ಟೀಂ ಇಂಡಿಯಾ ಸರಣಿಯನ್ನು 2-2 ಸಮಬಲಗೊಳಿಸಿರುವುದು ಇದೇ ಮೊದಲು. ಇದು ಮಾತ್ರವಲ್ಲದೆ, ಟೆಸ್ಟ್ ಕ್ರಿಕೆಟ್ನಲ್ಲಿ ಟೀಂ ಇಂಡಿಯಾದ ಅತ್ಯಂತ ಕಡಿಮೆ ಅಂತರದ ಗೆಲುವು ಕೂಡ ಇದಾಗಿದೆ.
ಓವಲ್ ಮೈದಾನದಲ್ಲಿ ನಡೆದ 5ನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 224 ರನ್ಗಳಿಸಿದರೆ, ಇಂಗ್ಲೆಂಡ್ 247 ರನ್ಗಳಿಸಿ ಆಲೌಟ್ ಆಗಿತ್ತು. ದ್ವಿತೀಯ ಇನಿಂಗ್ಸ್ನಲ್ಲಿ ಭಾರತ ತಂಡ 396 ರನ್ ಕಲೆಹಾಕಿತ್ತು. ಇತ್ತ ಮೊದಲ ಇನ್ನಿಂಗ್ಸ್ನ 23 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 374 ರನ್ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು 367 ರನ್ಗಳಿಗೆ ಆಲೌಟ್ ಆಗಿದೆ. ಈ ಮೂಲಕ ಟೀಮ್ ಇಂಡಿಯಾ 6 ರನ್ಗಳ ರೋಚಕ ಜಯ ಸಾಧಿಸಿದೆ.
ಭಾರತ ಟೆಸ್ಟ್ ಕ್ರಿಕೆಟ್ ಆಡಲು ಶುರುವಾಗಿ 93 ವರ್ಷಗಳಾಗಿವೆ. ಈ ತೊಂಬತ್ತಮೂರು ವರ್ಷಗಳಲ್ಲಿ ಟೀಮ್ ಇಂಡಿಯಾ 593 ಪಂದ್ಯಗಳನ್ನಾಡಿದೆ. ಆದರೆ ಹಿಂದೆಂದೂ ಕಂಡರಿಯದ, ಕೇಳರಿಯದ ರೀತಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ತಂಡ ಗೆಲುವು ದಾಖಲಿಸಿದೆ. ಅದು ಸಹ ಕೇವಲ ಒಂದಂಕಿ ರನ್ಗಳ ಅಂತರದಿಂದ.
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಟೀಮ್ ಇಂಡಿಯಾ ಇದೇ ಮೊದಲ ಬಾರಿಗೆ ಒಂದಂಕಿ ರನ್ ಅಂತರದಿಂದ ಗೆಲುವು ದಾಖಲಿಸಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲಿ ಕೇವಲ 6 ರನ್ಗಳ ಅಂತರದಿಂದ ಜಯ ಸಾಧಿಸಿ ಟೀಮ್ ಇಂಡಿಯಾ ಹೊಸ ಇತಿಹಾಸ ನಿರ್ಮಿಸಿದೆ.
ಇದಕ್ಕೂ ಮುನ್ನ 2004ರಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ 13 ರನ್ಗಳ ಅಂತರದಿಂದ ಜಯ ಸಾಧಿಸಿದ್ದು ಈವರೆಗಿನ ಶ್ರೇಷ್ಠ ಗೆಲುವಾಗಿತ್ತು. ಆದರೆ ಈ ಬಾರಿ ಯಂಗ್ ಇಂಡಿಯಾ ಹುಡುಗರು ಹೊಸ ಇತಿಹಾಸ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅದು ಸಹ ಆತಿಥೇಯ ಆಂಗ್ಲರ ವಿರುದ್ಧ 6 ರನ್ಗಳ ರೋಚಕ ಜಯ ಸಾಧಿಸುವ ಮೂಲಕ ಎಂಬುದು ವಿಶೇಷ.
9ನೇ ಅತಿ ಕಡಿಮೆ ಅಂತರದ ಗೆಲುವು
148 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಇದು 9ನೇ ಅತೀ ಕಡಿಮೆ ಅಂತರದ ಗೆಲುವು. ಈ ಪಟ್ಟಿಯಲ್ಲಿ 1 ರನ್ಗಳ ಅಂತರದಿಂದ ಟೆಸ್ಟ್ ಪಂದ್ಯ ಗೆದ್ದಿದ್ದ ವೆಸ್ಟ್ ಇಂಡೀಸ್ ಹಾಗೂ ನ್ಯೂಝಿಲೆಂಡ್ ತಂಡಗಳು ಅಗ್ರಸ್ಥಾನಗಳಲ್ಲಿವೆ. ಇದೀಗ 6 ರನ್ಗಳ ಅಂತರದಿಂದ ಗೆಲುವು ದಾಖಲಿಸಿ ಒಂದಂಕಿ ರನ್ ವಿಜಯ ಸಾಧಿಸಿದ ತಂಡಗಳ ಪಟ್ಟಿಯಲ್ಲೂ ಟೀಮ್ ಇಂಡಿಯಾ ಸ್ಥಾನ ಪಡೆದುಕೊಂಡಿದೆ.
























