ಪುತ್ತೂರು: ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ 14ನೇ ವರ್ಷದ ಸ್ಥಾಪಕರ ದಿನಾಚರಣೆ “ಶೀಂಟೂರು ಸ್ಮೃತಿ-2025” ಆ.14 ಗುರುವಾರ ಬೆಳಗ್ಗೆ 10 ಕ್ಕೆ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ವಿದ್ಯಾಚೇತನ ಸಭಾಂಗಣದ ಶೀಂಟೂರು ನಾರಾಯಣ ರೈ ವೇದಿಕೆಯಲ್ಲಿ ನಡೆಯಲಿದೆ ಎಂದು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ತಿಳಿಸಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಳೆದ 13 ವರ್ಷಗಳಿಂದ ಈ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಂಡು ಬರುತ್ತಿದ್ದೇವೆ. ಪ್ರತೀ ವರ್ಷ ಆ.14 ರಂದು ದಿ.ಶೀಂಟೂರರ ಜನ್ಮ ದಿನಾಚರಣೆಯನ್ನು ಸ್ಥಾಪಕರ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಆಚರಣೆಗೆ ಜೀವ ತುಂಬುವ ನಿಟ್ಟಿನಲ್ಲಿ ಪ್ರತಿ ವರ್ಷ ಓರ್ವ ನಿವೃತ್ತ ಯೋಧ ಅಥವಾ ನಿವೃತ್ತ ಶಿಕ್ಷಕರನ್ನು ಶೀಂಟೂರು ಸನ್ಮಾನದೊಂದಿಗೆ ಗೌರವಿಸಲಾಗುತ್ತದೆ. ಅಲ್ಲದೆ ದಿ.ಶೀಂಟೂರು ಅವರ ಶಿಷ್ಯ ವರ್ಗದವರಲ್ಲೊಬ್ಬರನ್ನು ಗುರುತಿಸಿ ಅವರಿಂದ ಸಂಸ್ಮರಣಾ ಉಪನ್ಯಾಸ ಕೊಡಿಸಲಾಗುತ್ತದೆ. ಅಲ್ಲದೆ ಇದಕ್ಕೆಲ್ಲಾ ಮೇರು ಸದೃಶವಾಗಿ ಪ್ರತಿಭಾನ್ವಿತ, ಆರ್ಥಿಕವಾಗಿ ಹಿಂದುಳಿದ ಕುಟುಂಬದ ಆಯ್ದ 10 ಮಂದಿ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತಲಾ 5 ಸಾವಿರ ಶಿಷ್ಯವೇತನ ನೀಡಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್. ಉದ್ಘಾಟಿಸಲಿದ್ದು, ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್. ಶೆಟ್ಟಿ ಅಧ್ಯಕ್ಷತೆ ವಹಿಸುವರು. ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ನ ಮೆನೇಜಿಂಗ್ ಡೈರೆಕ್ಟರ್ ಬಲರಾಮ ಆಚಾರ್ಯ ಸನ್ಮಾನಿಸುವರು. ಶೀಂಟೂರು ಸನ್ಮಾನ ಪುರಸ್ಕೃತ, ನಿವೃತ್ತ ಕರ್ನಲ್ ರಾಜೇಶ್ ಹೊಳ್ಳ ಎಸ್.ಎಂ. ಉಪಸ್ಥಿತರಿರುವರು. ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಮೆನೇಜರ್ ಸೂಂತೋಡು ಹೂವಯ್ಯ ಸುಳ್ಯ ಶೀಂಟೂರು ಸಂಸ್ಮರಣೆ ಮಾಡುವರು. ಅತಿಥಿಗಳಾಗಿ ಸವಣೂರು ಎಸ್.ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್ ನ ಟ್ರಸ್ಟಿ ಎನ್.ಸುಂದರ ರೈ ನಡುಮನೆ ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಡ್ವಕೇಟ್ ಅಶ್ವಿನ್ ಎಲ್. ಶೆಟ್ಟಿ, ರಶ್ಮಿ ಅಶ್ವಿನ್ ಎಲ್. ಶೆಟ್ಟಿ, ಸವಣೂರು ಎಸ್.ಎನ್.ಆರ್. ರೂರಲ್ ಎಜ್ಯುಕೇಶನ್ ಟ್ರಸ್ಟ್ ನ ಟ್ರಸ್ಟಿ ಎನ್.ಸುಂದರ ರೈ, ವಿದ್ಯಾರಶ್ಮಿ ವಿದ್ಯಾಲಯದ ಪ್ರಿನ್ಸಿಪಾಲ್ ಶಶಿಕಲಾ ಎಸ್.ಆಳ್ವ ಉಪಸ್ಥಿತರಿದ್ದರು.
























