ಧರ್ಮಸ್ಥಳ ಪ್ರಕರಣ : ಕಳೇಬರಗಳ ಪತ್ತೆಗೆ ಜಿಪಿಆರ್‌ ಬಳಸಲು ಒತ್ತಾಯ

ಭೂಮಿಯಡಿಯಲ್ಲಿರುವ ವಸ್ತುಗಳನ್ನು ನಿಖರವಾಗಿ ಗುರುತಿಸುವ ಅತ್ಯಾಧುನಿಕ ರೇಡಾರ್‌

ಮಂಗಳೂರು: ಧರ್ಮಸ್ಥಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಹಿಂದೆ ಅಪರಾಧ ಕೃತ್ಯಗಳಿಗೆ ಸಂಬಂಧಿಸಿ ಹೂತು ಹಾಕಲಾಗಿದೆ ಎನ್ನಲಾದ ಮೃತದೇಹಗಳ ಪತ್ತೆ ಕಾರ್ಯಾಚರಣೆ ಮುಂದುವರಿಯುತ್ತಿದೆ. ಆದರೆ ಇಷ್ಟರತನಕ ನಿರ್ಣಾಯಕ ಎನ್ನಬಹುದಾದ ಯಾವುದೇ ಸಾಕ್ಷಿಗಳು ಸಿಗದಿರುವ ಹಿನ್ನೆಲೆಯಲ್ಲಿ ಗ್ರೌಂಡ್‌ ಪೆನೆಟ್ರೇಟಿಂಗ್‌ ರೇಡಾರ್‌ (ಜಿಪಿಆರ್) ಬಳಸಿ ಹೂತ ಹೆಣಗಳ ಶೋಧ ಕಾರ್ಯ ನಡೆಸಬೇಕೆಂಬ ಒತ್ತಾಯ ಬಲವಾಗುತ್ತಿದೆ.

ಜಿಪಿಆರ್ ಬಳಸುವಂತೆ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಎಂಬವರ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ್ ಎನ್. ಒತ್ತಾಯಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಸಾಕ್ಷಿ-ದೂರುದಾರ ಈಗಾಗಲೇ ತೋರಿಸಿ ಅಗೆಸಿರುವ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಭಾರತದಲ್ಲಿ ಬಳಕೆಯಲ್ಲಿರುವ ಅತ್ಯಾಧುನಿಕ ಗ್ರೌಂಡ್‌ ಪೆನೆಟ್ರೇಟಿಂಗ್‌ ರೇಡಾರ್‌ ಬಳಸಿ ಕಳೇಬರಗಳ ಪತ್ತೆ ಕಾರ್ಯಾಚರಣೆ ನಡೆಸುವಂತೆ ವಿಶೇಷ ತನಿಖಾ ತಂಡಕ್ಕೆ ಮನವಿ ಮಾಡಿದ್ದಾರೆ.





















































 
 

ಸಾಕ್ಷಿಯೇ ಹೇಳಿರುವಂತೆ ಆತ ಧರ್ಮಸ್ಥಳವನ್ನು 2014ರಲ್ಲಿಯೇ ತೊರೆದಿದ್ದಾನೆ. ಅಪಾರ ಮಳೆಯನ್ನು ಕಾಣುವ ಧರ್ಮಸ್ಥಳ ಪ್ರದೇಶದಲ್ಲಿ ಮಣ್ಣು ಒಂದೆಡೆಯಿಂದ ಮತ್ತೊಂದೆಡೆಗೆ ಹರಿದು ಶೇಖರಣೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಸುಮಾರು 11 ವರ್ಷಗಳಲ್ಲಿ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈ ಕಾರಣಕ್ಕೆ ಸಾಕ್ಷಿದಾರ ತನ್ನ ನೆನಪಿನಲ್ಲಿ ಇಟ್ಟುಕೊಂಡ ಗುರುತುಗಳಲ್ಲಿ ಬದಲಾವಣೆಯಾಗಿರುವ ಸಾಧ್ಯತೆಯೂ ಅಧಿಕವಾಗಿದೆ. ಆದ್ದರಿಂದ ನಾವು ಈಗಾಗಲೇ ಮನವಿ ಮಾಡಿಕೊಂಡಂತೆ ಸದ್ಯ ಅಗೆಯಲಾಗಿರುವ ಸ್ಥಳಗಳಲ್ಲಿ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಕಳೇಬರಗಳ ಪತ್ತೆಗೆ ಅತ್ಯಾಧುನಿಕ ಜಿಪಿಆರ್ ಬಳಸುವಂತೆ ಕೇಳಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

ಹುಲ್ಲುಕಡ್ಡಿಯನ್ನು ತೆರವುಗೊಳಿಸಲು ಉಪಯೋಗಿಸುವ ಯಂತ್ರದಷ್ಟು ಗಾತ್ರವಿರುವ ಈ ಜಿಪಿಆರ್ಕೆಲವೇ ವ್ಯಕ್ತಿಗಳನ್ನು ನಿಯೋಜಿಸಿ ಬಳಸಬಹುದು. ಆದ್ದರಿಂದ ದೂರುದಾರ ಗುರುತಿಸಿರುವ ಜಾಗಗಳ ಪೈಕಿ ಈಗಾಗಲೇ ಅಗೆದಿರುವ ಸ್ಥಳಗಳಲ್ಲಿ ಮತ್ತು ಅದರ ಸುತ್ತಮುತ್ತಲಿನ ಸ್ಥಳಗಳಲ್ಲಿ ಕಳೇಬರಗಳ ಪತ್ತೆಗೆ ಜಿಪಿಆರ್ ಬಳಸಬೇಕು ಎಂದು ವಕೀಲ ಮಂಜುನಾಥ್ ಎನ್. ಒತ್ತಾಯಿಸಿದ್ದಾರೆ.

ಏನಿದು ಜಿಪಿಆರ್‌?

ಗ್ರೌಂಡ್ ಪೆನಟ್ರೇಟಿಂಗ್ ರೇಡಾರ್ (ಜಿಪಿಆರ್) ತಂತ್ರಜ್ಞಾನ ಬಹುದೊಡ್ಡ ವ್ಯತ್ಯಾಸ ಈ ಕಾರ್ಯಾಚರಣೆಯಲ್ಲಿ ಭಾರಿ ಪರಿಣಾಮ ಉಂಟುಮಾಡಬಹುದು ಎಂಬ ವಾದವಿದೆ. ಜಿಪಿಆರ್ ಭೂಮಿಗೆ ಯಾವುದೇ ಹಾನಿ ಉಂಟುಮಾಡದ ವಿಧಾನವಾಗಿದ್ದು, ರೇಡಾರ್ ಸಂಕೇತಗಳನ್ನು ಬಳಸಿ ನೆಲದಾಳದಲ್ಲಿ ಏನಿದೆ ಎಂದು ಗುರುತಿಸುತ್ತದೆ. ಜಿಪಿಆರ್ ವ್ಯವಸ್ಥೆ ಒಂದು ನಿಯಂತ್ರಣ ಘಟಕ, ಸಂಕೇತಗಳನ್ನು ರವಾನಿಸಲು ಮತ್ತು ಸ್ವೀಕರಿಸಲು ಆ್ಯಂಟೆನಾಗಳು, ವಿದ್ಯುತ್ ಪೂರೈಕೆ ಮತ್ತು ಫಲಿತಾಂಶಗಳನ್ನು ತೋರಿಸಲು ಒಂದು ಸ್ಕ್ರೀನ್ ಅನ್ನು ಹೊಂದಿದೆ. ಇದು ಹೈ ಫ್ರೀಕ್ವೆನ್ಸಿ ಇಲೆಕ್ಟ್ರೋಮ್ಯಾಗ್ನೆಟಿಕ್ (ಇಎಂ) ತರಂಗಗಳನ್ನು ಮಣ್ಣಿನೊಳಗೆ ಕಳುಹಿಸುವ ಮೂಲಕ ಕಾರ್ಯಾಚರಿಸುತ್ತದೆ. ಈ ತರಂಗಗಳು ನೆಲದಾಳದಲ್ಲಿ ಏನಕ್ಕಾದರೂ ಅಂದರೆ, ಮೂಳೆಗಳು, ಮಣ್ಣಿನಲ್ಲಿನ ವ್ಯತ್ಯಾಸ ಇರುವ ಸ್ಥಳ ಅಥವಾ ಖಾಲಿ ಸ್ಥಳಗಳಿಗೆ ಹೊಡೆದರೆ ಮರಳಿ ಹಿಂದಕ್ಕೆ ಬರುತ್ತವೆ. ಜಿಪಿಆರ್ ವ್ಯವಸ್ಥೆ ಈ ಸಂಕೇತಗಳು ಮರಳಿ ಬರಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ, ಸಂಕೇತ ಎಷ್ಟು ಬಲವಾಗಿದೆ ಎನ್ನುವುದನ್ನು ಗಮನಿಸಿ, ನೆಲದಾಳದಲ್ಲಿ ಏನಿದೆ ಎಂಬುದರ ಚಿತ್ರಣವನ್ನು ರಚಿಸುತ್ತದೆ.

error: Content is protected !!
Scroll to Top