ಮುಖ್ಯ ಶಿಕ್ಷಕನನ್ನು ವರ್ಗಾಯಿಸಲು ಶಾಲೆಯ ನೀರಿನ ಟಾಂಕಿಗೆ ವಿಷ ಬೆರೆಸಿದ್ದ ಪಾತಕಿಗಳು ಸೆರೆ

13 ವರ್ಷಗಳಿಂದ ಇದ್ದ ಮುಖ್ಯ ಶಿಕ್ಷಕರ ವಿರುದ್ಧ ಖತರ್‌ನಾಕ್‌ ಐಡಿಯಾ ಮಾಡಿದ್ದ ಆರೋಪಿಗಳು

ಬೆಂಗಳೂರು: ಹಳ್ಳಿಯ ಶಾಲೆಯ ಮುಖ್ಯ ಶಿಕ್ಷಕನನ್ನು ಅಲ್ಲಿಂದ ವರ್ಗಾಯಿಸಲು ಶಾಲೆಯ ನೀರಿನ ಟಾಂಕಿಗೆ ವಿಷ ಬೆರೆಸಿದ್ದ ಮೂವರು ಪಾತಕಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಪ್ರಾಥಮಿಕ ಶಾಲೆಯ ಪುಟಾಣಿ ಮಕ್ಕಳಿರುವ ಶಾಲೆಯ ಕುಡಿಯುವ ನೀರಿನ ಟಾಂಕಿಗೆ ವಿಷ ಬೆರೆಸಿದ ಘಟನೆ ರಾಜ್ಯಾದ್ಯಾಂತ ಸುದ್ದಿಯಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಅಪರಾಧವನ್ನು ಭಯೋತ್ಪಾದನೆಗೆ ಸಮವಾದ ಕೃತ್ಯ ಎಂದು ಕಳವಳ ವ್ಯಕ್ತಪಡಿಸಿ ಆರೋಪಿಗಳನ್ನು ಕೂಡಲೇ ಬಂಧಿಸಲು ಸೂಚಿಸಿದ್ದರು.

ಮುಖ್ಯಶಿಕ್ಷಕ ಮುಸ್ಲಿಂ ಮತ್ತು ಈ ಶಾಲೆಯಲ್ಲಿ 13 ವರ್ಷಗಳಿಂದ ಠಿಕಾಣಿ ಹೂಡಿದ್ದಾರೆ. ಶಾಲೆಯ ಮಕ್ಕಳು ಅಸ್ವಸ್ಥರಾದರೆ ಅದರ ಹೊಣೆಯನ್ನು ಮುಖ್ಯ ಶಿಕ್ಷಕನ ಮೇಲೆ ಹಾಕಿ ಅವರನ್ನು ಅಲ್ಲಿಂದ ವರ್ಗಾಯಿಸುತ್ತರಾಎ ಎಂದು ಭಾವಿಸಿ ಟಾಂಕಿಗೆ ವಿಷ ಬೆರೆಸಿದ್ದರು ಎಂದು ವಿಚಾರಣೆಯಿಂದ ತಿಳಿದುಬಂದಿದೆ.





















































 
 

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 41 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಮುಖ್ಯ ಶಿಕ್ಷಕ ಸುಲೇಮಾನ್ ಗೋರಿನಾಯಕ್ ಹಾಗೂ ಮತ್ತೋರ್ವ ಮೇಷ್ಟ್ರು ಇದ್ದಾರೆ. ಸುಲೇಮಾನ್ ಗೋರಿನಾಯಕ್ ಕಳೆದ 13 ವರ್ಷಗಳಿಂದ ಒಂದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು ಹಾಗೂ ಆತ ಮುಸ್ಲಿಂ ಸಮುದಾಯಕ್ಕೆ ಸೇರಿದವ ಎಂಬ ಕಾರಣಕ್ಕೆ ಆತನನ್ನು ಶಾಲೆಯಿಂದ ಎತ್ತಂಗಡಿ ಮಾಡಿಸಬೇಕು ಎಂದು ಸಾಗರ್ ಪಾಟೀಲ್ ಪ್ಲಾನ್ ಮಾಡಿ ಕೃಷ್ಣಾ ಪಾಟೀಲ್ ಎಂಬಾತನನ್ನು ಬ್ಲಾಕ್ ಮೇಲ್ ಮಾಡಿ ಮನವಳ್ಳಿಯಿಂದ ಕೀಟನಾಶಕ ತರಿಸಿ ಮಾಜಾ ಬಾಟಲ್‌ನಲ್ಲಿ ವಿಷ ಬೆರೆಸಿ ಶಾಲೆಯ ವಿದ್ಯಾರ್ಥಿಯನ್ನೇ ಬಳಸಿಕೊಂಡು ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ್ದರು.

ಕೃಷ್ಣ ಮಾದರ್ ಅದೇ ಗ್ರಾಮದ ಅನ್ಯ ಜಾತಿಯ ಯುವತಿಯನ್ನು ಪ್ರೀತಿಸುತ್ತಿದ್ದ. ತಾನು ಹೇಳಿದ ಕೆಲಸವನ್ನು ಮಾಡದಿದ್ದರೆ ಅನ್ಯಜಾತಿಯ ಹುಡುಗಿಯನ್ನು ಪ್ರೀತಿಸುತ್ತಿರುವ ವಿಚಾರವನ್ನು ಊರಿಗೆಲ್ಲ ಪುಕಾರು ಮಾಡುತ್ತೇನೆ ಎಂದು ಮುಖ್ಯ ಆರೋಪಿ ಸಾಗರ್‌ ಪಾಟೀಲ್‌ ಬ್ಲಾಕ್‌ಮೇಲ್ ಮಾಡಿದ್ದ. ಹೀಗಾಗಿ ಕೃಷ್ಣ ಮಾದರ್ ತನ್ನ ಸ್ನೇಹಿತ ನಾಗನಗೌಡ ಪಾಟೀಲ್ ಜೊತೆ ಸೇರಿ ಕೃತ್ಯ ಮಾಡಲು ಒಪ್ಪಿದ್ದ . ಮುನವಳ್ಳಿಯಿಂದ ವಿಷ ತೆಗೆದುಕೊಂಡು ಬಂದು ಅದೇ ಶಾಲೆಯ ಮಗುವಿಗೆ 500 ರೂಪಾಯಿ, ತಿನ್ನಲು ಕುರ್ಕುರೆ ಹಾಗೂ ಚಾಕಲೇಟ್ ನೀಡಿ ನೀರಿನ ಟ್ಯಾಂಕ್‌ಗೆ ಹಾಕುವಂತೆ ಹೇಳಿದ್ದರು. ಕೃಷ್ಣ ಮಾದರ್ ಹಾಗೂ ನಾಗನ ಗೌಡ ಹೇಳಿದಂತೆ ಆ ಮಗು ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿತ್ತು.

ವಿಷ ಬೆರೆಸಿದ ನಂತರ ಮಕ್ಕಳು ಅದೇ ನೀರು ಕುಡಿದು ಜುಲೈ 14 ರಂದು ಅಸ್ವಸ್ಥರಾಗಿದ್ದರು. 11 ಮಕ್ಕಳನ್ನು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಮಕ್ಕಳು ಚೇತರಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸಾಗರ್ ಪಾಟೀಲ್, ಕೃಷ್ಣಾ ಮಾದರ್, ಹಾಗೂ ನಾಗನಗೌಡ ಪಾಟೀಲ್‌ರನ್ನು ಬಂಧಿಸಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್ ಗುಳೇದ ಮಾಹಿತಿ ನೀಡಿದ್ದಾರೆ.

error: Content is protected !!
Scroll to Top