ನವದೆಹಲಿ: ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಭಯೋತ್ಪಾದಕ ದಾಳಿಗಳ ಮೇಲೆ ನಿರಂತರ ನಿಷ್ಕ್ರಿಯತೆ ಹೊಂದಿತ್ತು ಎಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ ಆರೋಪಿಸಿದ್ದಾರೆ.
ರಾಜ್ಯಸಭೆಯಲ್ಲಿ ಆಪರೇಷನ್ ಸಿಂಧೂರ್ ಕುರಿತಂತೆ ಮಾತನಾಡಿದ ಅವರು, ಪಾಕ್ ಪದೇ ಪದೇ ಭಯೋತ್ಪಾದಕ ದಾಳಿಗಳನ್ನು ನಡೆಸಿತು. ಆದರೆ ಕಾಂಗ್ರೆಸ್ ಅವರಿಗೆ ವಿಶ್ವಾಸ ವೃದ್ಧಿಸುವ ಕೆಲಸಗಳನ್ನು ಮಾಡಿತು. ಪಾಕ್ ನಮ್ಮ ಮೇಲೆ ಬಾಂಬ್‌ಗಳನ್ನು ಹಾಕುತ್ತಿದ್ದರೆ, ಕಾಂಗ್ರೆಸ್ ಪಾಕಿಸ್ತಾನಕ್ಕೆ ಬಿರಿಯಾನಿ ತಿನ್ನಿಸುವ ಕೆಲಸದಲ್ಲಿ ತೊಡಗಿತ್ತು ಎಂದು ವ್ಯಂಗ್ಯವಾಡಿದ್ದಾರೆ.
ಇಂಡಿಯನ್ ಮುಜಾಹಿದ್ದೀನ್ 2008 ರಲ್ಲಿ ನಡೆಸಿದ ಜೈಪುರ ಬಾಂಬ್ ಸ್ಪೋಟದ ಬಳಿಕ ಅಂದಿನ ಕಾಂಗ್ರೆಸ್ ಸರ್ಕಾರ ಮತ್ತು ಪಾಕ್ ನಿರ್ದಿಷ್ಟ ವಿಶ್ವಾಸ ವೃದ್ಧಿ ಕ್ರಮಗಳಿಗೆ ಸಮ್ಮತಿಸಿವೆ. ಇದರಿಂದ ನಾವು ಕಾಂಗ್ರೆಸ್ ಪಾಕಿಸ್ತಾನದ ಮೇಲೆ ಹೊಂದಿದ್ದ ಸಮಾಧಾನದ ಮಿತಿಗಳನ್ನು ಅರಿಯಬಹುದು. ಪಾಕ್ ಭಾರತದ ಮೇಲೆ ನಡೆಸಿದ ಯಾವುದೇ ಗಂಭೀರ ದಾಳಿಗಳ ವಿರುದ್ಧ ಕಾಂಗ್ರೆಸ್ ಸರ್ಕಾರ ಯಾವುದೇ ಬಲವಾದ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಎಂದು ನಡ್ಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
























