ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರನ್ನು ರಕ್ಷಿಸುವ ಪ್ರಶ್ನೆ ಇಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸದ್ಯ SIT ತಂಡದ ಮುಖ್ಯಸ್ಥರಾಗಿರುವ ಡಾ. ಪ್ರಣವ್ ಮೊಹಂತಿ ಅವರನ್ನು ಕೇಂದ್ರ ಸೇವೆಗೆ ಕರೆಸಿಕೊಳ್ಳುವುದು ಮತ್ತು ಧರ್ಮಸ್ಥಳ ಪ್ರಕರಣ ಇವೆರಡರ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ಸತ್ಯ ಏನಿದೆಯೋ ಅದು ಹೊರಕ್ಕೆ ಬರಬೇಕು. ಹಾಗೆಯೇ ಇದರಲ್ಲಿ ಯಾರೇ ತಪ್ಪು ಮಾಡಿರಲಿ, ಅವರನ್ನು ರಕ್ಷಣೆ ಮಾಡುವ ಪ್ರಶ್ನೆ ಇಲ್ಲ ಎಂದಿದ್ದಾರೆ. ಈ ಪ್ರಕರಣದಲ್ಲಿ ಡಿಜಿ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ಡಾ. ಮೊಹಂತಿ ಅವರನ್ನು ನೇಮಿಸಲಾಗಿದೆ. ಕೇಂದ್ರ ಸೇವೆಗೆ ಕರೆಸಿಕೊಳ್ಳುವ ಪಟ್ಟಿಯಲ್ಲಿ ಈಗ ಅವರ ಹೆಸರೂ ಇದೆ. ಈ ಬಗ್ಗೆ ನಾವು ಇನ್ನೂ ಸಹ ಯಾವುದೇ ನಿರ್ಣಯಗಳನ್ನು ತೆಗೆದುಕೊಂಡಿಲ್ಲ ಎಂದು ಅವರು ಹೇಳಿದ್ದಾರೆ.
























