ಎಸ್‌ಐಟಿ, ಸರ್ಕಾರ ನಿಗೂಢ ಮೌನ; ಬಿಜೆಪಿಯಿಂದ ತೀವ್ರ ಆಕ್ಷೇಪ
ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿರುವ ಆರೋಪದ ಬಗ್ಗೆ ಎಸ್‌ಐಟಿ ತನಿಖೆ ತೀವ್ರಗೊಳ್ಳುತ್ತಿರುವಂತೆಯೇ ಇತ್ತ ಸೋಷಿಯಲ್ ಮೀಡಿಯಾದಲ್ಲಿ ಪರ ಮತ್ತು ವಿರೋಧ ಚರ್ಚೆಯೂ ತೀವ್ರಗೊಂಡಿದೆ. ತನಿಖೆ ನಡೆಸುತ್ತಿರುವ ಎಸ್‌ಐಟಿ ಆಗಲಿ ಅಥವಾ ಸರ್ಕಾರವಾಗಲಿ ಪ್ರಕರಣದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಇಷ್ಟರ ತನಕ ನೀಡಿಲ್ಲ. ಆದರೆ ಸೋಷಿಯಲ್ ಮೀಡಿಯಾ ಮತ್ತು ಕೆಲವು ಸುದ್ದಿ ವಾಹಿನಿಗಳಲ್ಲಿ ಈ ಬಗ್ಗೆ ನಾನಾ ರೀತಿಯ ಸುದ್ದಿಗಳನ್ನು, ಚರ್ಚೆಗಳನ್ನು ಮತ್ತು ವೀಡಿಯೊಗಳನ್ನು ಹರಿಯಬಿಡಲಾಗುತ್ತಿದೆ.
ಫೇಸ್‌ಬುಕ್, ವಾಟ್ಸಪ್, ಇನ್‌ಸ್ಟಾಗ್ರಾಂ ಮತ್ತು ಯೂಟ್ಯೂಬ್‌ನಲ್ಲಿ ಕ್ಷಣಕ್ಕೊಂದರಂತೆ ಸುದ್ದಿಗಳನ್ನು ಹರಿಯಬಿಡುತ್ತಿದ್ದಾರೆ. ನಂತರ ವಿಚಾರದ ಪರ ಮತ್ತು ವಿರುದ್ಧವಿರುವವರು ಘನಘೋರ ಚರ್ಚೆಯಲ್ಲಿ ತೊಡಗಿಕೊಳ್ಳುತ್ತಿರುವುದನ್ನು ನಿತ್ಯ ಕಾಣಬಹುದು.
ತನಿಖೆ ಶುರುವಾಗಿ ನಾಲ್ಕು ದಿನಗಳು ಕಳೆದಿದ್ದರೂ ಎಸ್‌ಐಟಿ ತನಿಖೆಯ ಪ್ರಗತಿಯ ಬಗ್ಗೆ ಒಂದೇ ಒಂದು ಅಧಿಕೃತ ಹೇಳಿಕೆ ಅಥವಾ ಮಾಹಿತಿ ನೀಡಿಲ್ಲ. ಮಾಧ್ಯಮಗಳ ಗೋಜಿಗೆ ಹೋಗದೆ ಅಧಿಕಾರಿಗಳು ತಮ್ಮ ಪಾಡಿಗೆ ತಾವು ತನಿಖೆ ನಡೆಸುತ್ತಿದ್ದಾರೆ. ಆದರೆ ಜನರೇ ತಾವೇ ಏನೇನೋ ಕಲ್ಪಿಸಿಕೊಂಡು ನಾನಾ ರೀತಿಯ ಸುದ್ದಿಗಳನ್ನು ಹರಿಯ ಬಿಡುತ್ತಿದ್ದಾರೆ. ಇಷ್ಟು ದಿನ ಎಸ್‌ಐಟಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಾ ಇದೆ.
ಸರ್ಕಾರ ಎಚ್ಚರಿಕೆ ನಡೆ
ತನಿಖೆ ವಿಚಾರದಲ್ಲಿ ಸರ್ಕಾರ ಎಚ್ಚರಿಕೆಯ ಹೆಜ್ಜೆಯನ್ನು ಇಟ್ಟಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ ಸೇರಿದಂತೆ ಸರ್ಕಾರದಲ್ಲಿರುವ ಎಲ್ಲರೂ ತನಿಖಾ ವಿಚಾರದಲ್ಲಿ ಸುರಕ್ಷಿತ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.
ಪ್ರಕರಣಕ್ಕೆ ಅನಾಮಿಕ ವ್ಯಕ್ತಿಯ ಪ್ರವೇಶ ಆಗುತ್ತಿದ್ದಂತೆ ಎಸ್‌ಐಟಿ ರಚನೆಯಾಗಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಜನರ ಮನವಿಗೆ ಸ್ಪಂದಿಸಿ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದು ಈಗ ಧರ್ಮಸ್ಥಳದ ಅರಣ್ಯದಲ್ಲಿ ಉತ್ಖನನದ ಕೆಲಸ ನಡೆಯುತ್ತಿದೆ. ಎಸ್‌ಐಟಿ ತನಿಖೆ ನಡೆಸುತ್ತಿರುವ ಈ ಸಂದರ್ಭದಲ್ಲಿ ತಕ್ಷಣಕ್ಕೆ ಯಾವುದೇ ಮಧ್ಯಂತರ ವರದಿಯನ್ನು ಪಡೆಯದಿರಲು ಸರ್ಕಾರ ನಿರ್ಧಾರ ಕೈಗೊಂಡಿದೆ. ಆದರೆ ಮೌಖಿಕವಾಗಿ ತನಿಖಾ ಪ್ರಗತಿ ಮಾಹಿತಿಯನ್ನು ಪಡೆಯಲು ಮುಂದಾಗಿದೆ ಎನ್ನಲಾಗಿದೆ.
ಹೈಕಮಾಂಡ್‌ಗೂ ಸಿಎಂ ಸಿದ್ದರಾಮಯ್ಯ ಮೌಖಿಕ ಮಾಹಿತಿ ನೀಡುವ ಸಾಧ್ಯತೆಯಿದೆ. ಆಗಸ್ಟ್ 5ರಂದು ಬೆಂಗಳೂರಿಗೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ರಾಹುಲ್ ಆಗಮನಕ್ಕೂ ಮುನ್ನ ಪ್ರಕರಣದ ಬಗ್ಗೆ ಹೈಕಮಾಂಡ್‌ಗೆ ಸಿಎಂ ಮಾಹಿತಿ ನೀಡಲಿದ್ದಾರೆ.
ಕೇರಳಕ್ಕೆ ಏಕೆ ವಿಶೇಷ ಆಸಕ್ತಿ?
ಈ ನಡುವೆ ತನಿಖೆಯಲ್ಲಿ ಪಕ್ಕದ ಕೇರಳಕ್ಕಿರುವ ವಿಶೇಷ ಆಸಕ್ತಿಯ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ. ಧರ್ಮಸ್ಥಳ ಪ್ರಕರಣಕ್ಕೂ ಕೇರಳದ ಕಮ್ಯುನಿಷ್ಟರಿಗೂ ಇರುವ ನಂಟು ಏನು ಎಂಬ ಪ್ರಶ್ನೆ ಉದ್ಭವಿಸಿದೆ. ಕೇರಳ ಸರ್ಕಾರ ನೇರವಾಗಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿರದಿದ್ದರೂ ಕೆಲವರು ಕೇರಳ ಪೊಲೀಸರನ್ನೂ ತನಿಖೆಯಲ್ಲಿ ಸೇರಿಸಿಕೊಳ್ಳಬೇಕೆಂದು ಕೆಲವು ದಿನಗಳ ಹಿಂದೆ ಆಗ್ರಹಿಸಿದ್ದು ವಿವಾದಕ್ಕೀಡಾಗಿತ್ತು. ಕೇರಳದ ಹಲವು ಮಾಧ್ಯಮದವರು ಧರ್ಮಸ್ಥಳದಲ್ಲಿ ಠಿಕಾಣಿ ಹೂಡಿ ತನಿಖೆಯ ವರದಿ ಮಾಡುತ್ತಿದ್ದಾರೆ. ಹೀಗಾಗಿ ಕೇರಳಕ್ಕೆ ಏಕೆ ಇಷ್ಟೊಂದು ಕುತೂಹಲ ಎಂಬ ಪ್ರಶ್ನೆ ಉದ್ಭವಿಸಿದೆ.
ನಗರ ನಕ್ಸಲರ ಕೈವಾಡ
ಏತನ್ಮಧ್ಯೆ ಬಿಜೆಪಿಯ ಕೆಲವು ನಾಯಕರು ಧರ್ಮಸ್ಥಳ ಪ್ರಕರಣದ ಹಿಂದೆ ನಗರ ನಕ್ಸಲರ ಕೈವಾಡವಿದೆ. ಹಿಂದುಗಳು ಧಾರ್ಮಿಕ ನಂಬಿಕೆಗೆ ಧಕ್ಕೆ ತರುವ ಉದ್ದೇಶದಿಂದಲೇ ಇಷ್ಟೆಲ್ಲ ಬೆಳವಣಿಗೆ ನಡೆದಿದೆ. ಕೇರಳದ ಮುಸ್ಲಿಮರು ಇದರಲ್ಲಿ ಶಾಮೀಲಾಗಿದ್ದಾರೆ. ಧರ್ಮಸ್ಥಳ ಪ್ರಕರಣದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಪ್ರತಿಕ್ರಿಯಿಸುವವರು ಮುಸ್ಲಿಮರೇ ಆಗಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಸೇರಿ ಹಲವರು ಹೇಳಿದ್ದಾರೆ.
ಧರ್ಮಸ್ಥಳ ಪ್ರಕರಣಲ್ಲಿ ನಿಷೇಧಿತ ಪಿಎಫ್‌ಐ ಮತ್ತು ಅದರ ರಾಜಕೀಯ ಪಕ್ಷವಾದ ಎಸ್‌ಡಿಪಿಐ ಕೈವಾಡ ಇದೆ. ಹಿಂದು ಧರ್ಮವನ್ನು ದುರ್ಬಲಗೊಳಿಸುವ ಹುನ್ನಾರ ಇದರ ಹಿಂದೆ ಅಡಗಿದೆ. ಹೀಗಾಗಿ ಪಿಎಫ್‌ಐ ಮತ್ತು ಎಸ್‌ಡಿಪಿಐನ್ನು ಮೊದಲು ತನಿಖೆ ಮಾಡಬೇಕೆಂದು ಬಿಜೆಪಿ ಒತ್ತಾಯಿಸಿದೆ.
ದೂರುದಾರನ ಮಾನಸಿಕ ಸ್ಥಿತಿ ಪರೀಕ್ಷೆಯಾಗಲಿ
ದೂರುದಾರ ಮಾನಸಿಕವಾಗಿ ಅಸ್ವಸ್ಥನೋ ಅಥವಾ ಸ್ವಸ್ಥನೋ ಎನ್ನುವುದನ್ನು ಮಾನಸಿಕ ತಜ್ಞರು ಮೊದಲು ಪರೀಕ್ಷಿಸಬೇಕು ಎಂದು ಮಾಜಿ ಸಚಿವ ಬಿಜೆಪಿ ನಾಯಕ ಬಿ.ಸಿ.ಪಾಟೀಲ್ ಒತ್ತಾಯಿಸಿದ್ದಾರೆ.
ಅನಾಮಿಕ ದೂರುದಾರ ಮಾನಸಿಕವಾಗಿ ಸ್ವಸ್ತನಾಗಿದ್ದಾನೋ ಅಥವಾ ಅಸ್ವಸ್ಥನಾಗಿದ್ದಾನೋ ಎನ್ನುವುದನ್ನು ಮಾನಸಿಕ ತಜ್ಞರಿಂದ ಮೊದಲು ಪರೀಕ್ಷಿಸಬೇಕು. ನಂತರ ಕ್ರಮ ಜರುಗಿಸುವುದು ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ. ನಾನು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ದೂರುದಾರ ಮೊದಲು ಮಾನಸಿಕವಾಗಿ ಆರೋಗ್ಯವಾಗಿದ್ದಾನಾ ಎನ್ನುವುದನ್ನು ದೃಢಪಡಿಸಿಕೊಂಡ ನಂತರ ಎಸ್‌ಐಟಿ ತಂಡ ತನಿಖೆ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮತ್ತೆ 9 ಪೊಲೀಸರ ಸೇರ್ಪಡೆ
ಈ ನಡುವೆ ಎಸ್‌ಐಟಿಗೆ ಮತ್ತೆ 9 ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ. ನಾಲ್ವರು ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಎಸ್‌ಐಟಿ ರಚನೆಯಾದ ಬಳಿಕ ಆರಂಭಿಕ ಹಂತದಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಿಂದ 20 ಅಧಿಕಾರಿಗಳನ್ನು ಎಸ್‌ಐಟಿಗೆ ನೇಮಿಸಿಕೊಳ್ಳಲಾಗಿತ್ತು. ಇದೀಗ ಮತ್ತೆ ಒಂಬತ್ತು ಅಧಿಕಾರಿಗಳನ್ನು ಸೇರಿಸಿಕೊಳ್ಳಲಾಗಿದೆ.
ಉಪ್ಪಿನಂಗಡಿ ಠಾಣೆಯ ಪಿಎಸ್‌ಐ ಲಾರೆನ್ಸ್, ಸೆನ್ ಪೊಲೀಸ್ ಠಾಣೆಯ ಎಚ್‌ಸಿ ಪುನೀತ್, ಉಪ್ಪಿನಂಗಡಿಯ ಎಚ್‌ಸಿ ಮನೋಹರ, ವಿಟ್ಲ ಠಾಣೆಯ ಪಿಸಿ ಮನೋಜ್, ಪುಂಜಾಲಕಟ್ಟೆ ಠಾಣೆಯ ಪಿಸಿ ಸಂದೀಪ್, ಉಡುಪಿ ಸಿಎಸ್‌ಪಿ ಠಾಣೆಯ ಪಿಸಿ ಲೋಕೇಶ್, ಹೊನ್ನಾವರ ಠಾಣೆಯ ಪಿಸಿ ಸತೀಶ್ ನಾಯ್ಕ, ಮಂಗಳೂರು ಎಫ್‌ಎಂಎಸ್ ದಳದ ಎಚ್‌ಸಿ ಜಯರಾಮೇ ಗೌಡ ಮತ್ತು ಎಚ್‌ಸಿ ಬಾಲಕೃಷ್ಣ ಗೌಡ ಅವರನ್ನು ಸೆರಿಸಿಕೊಳ್ಳಲಾಗಿದೆ.
























