ಗಡಿ ನುಸುಳಲು ಯತ್ನಿಸಿದ ಪಾಕ್ ಉಗ್ರರು ಗುಂಡಿಗೆ ಬಲಿ
ಶ್ರೀನಗರ: ಪಹಲ್ಗಾಮ್ ದಾಳಿಯ ಪಾತಕಿ ಹಾಶಿಮ್ ಮೂಸಾ ಸಹಿತ ಮೂವರು ಉಗ್ರರನ್ನು ಸಾಯಿಸಿದ ಬೆನ್ನಲ್ಲೇ ಮತ್ತಿಬ್ಬರು ಉಗ್ರರನ್ನು ಭದ್ರತಾ ಪಡೆ ಬೇಟೆಯಾಡಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಛ್‌ನಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ.
ಹತ್ಯೆಯಾದ ಇಬ್ಬರು ಉಗ್ರರು ಕಾಶ್ಮೀರದ ಪೂಂಛ್ ಜಿಲ್ಲೆಯ ದೇಗ್ವಾರ್ ಸೆಕ್ಟರ್‌ನ ನಿಯಂತ್ರಣ ರೇಖೆಯ ಬಳಿ ಒಳನುಸುಳಲು ಯತ್ನಿಸಿದ್ದರು. ಭಾರಿ ಮಳೆ ನಡುವೆಯೂ ಮೂವರು ಪಿಒಕೆ ಕಡೆಯಿಂದ ಗಡಿ ದಾಟಲು ಯತ್ನಿಸಿದ್ದರು. ಪೂಂಛ್ ಪ್ರದೇಶದಲ್ಲಿ ಬೇಲಿಯ ಉದ್ದಕ್ಕೂ ಇಬ್ಬರು ಶಂಕಿತರ ಚಲನವಲನ ಪತ್ತೆಯಾಗಿತ್ತು. ಭದ್ರತಾ ಪಡೆಗಳ ಎಚ್ಚರಿಕೆ ಬಳಿಕವೂ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿದಾಳಿ ನಡೆಸಿದ ಭದ್ರತಾಪಡೆ ಉಗ್ರರನ್ನು ಹೊಡೆದುರುಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹಾಗೂ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರ ಬೇಟೆ ಯಶಸ್ವಿಯಾಗಿದೆ. ಮೂವರು ಉಗ್ರರು ಒಳನುಸುಳಿದ್ದು, ಇಬ್ಬರನ್ನು ಹತ್ಯೆ ಮಾಡಲಾಗಿದೆ. ಉಳಿದ ಒಬ್ಬನಿಗಾಗಿ ಶೋಧ ಮುಂದುವರಿದಿದೆ.
ಎರಡು ದಿನಗಳ ಹಿಂದೆಯಷ್ಟೇ ʻಆಪರೇಷನ್ ಮಹಾದೇವ್ʼ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆ ಮೂವರು ಉಗ್ರರನ್ನು ಹತ್ಯೆಗೈದಿತ್ತು. ಈ ಪೈಕಿ ಓರ್ವ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಹಾಶಿಮ್ ಮೂಸಾ ಎಂಬುದು ಖಚಿತವಾಗಿದೆ.
























