ಕೋಲಾರದ ಮಹಿಳೆಯಲ್ಲಿ ಜಗತ್ತಿನಲ್ಲಿ ಯಾರಲ್ಲೂ ಇಲ್ಲದ ವಿಶೇಷ ರಕ್ತದ ಗುಂಪು ಪತ್ತೆ

ಕ್ರಿಬ್‌ ರಕ್ತದ ಗುಂಪು ಹೊಂದಿರುವ ಜಗತ್ತಿನ ಮೊದಲ ವ್ಯಕ್ತಿ

ಬೆಂಗಳೂರು : ಕೋಲಾರ ಜಿಲ್ಲೆಯ ಮಹಿಳೆಯೊಬ್ಬರು ಜಗತ್ತಿನಲ್ಲಿ ಈವರೆಗೆ ಯಾರಲ್ಲೂ ಪತ್ತೆಯಾಗದ ರಕ್ತದ ಗುಂಪು ಹೊಂದಿರುವುದು ಬೆಳಕಿಗೆ ಬಂದಿದೆ. ಹೃದಯ ಶಸ್ತ್ರಚಿಕಿತ್ಸೆಗಾಗಿ ಕೋಲಾರದ ಆಸ್ಪತ್ರೆಗೆ 38 ವರ್ಷದ ಮಹಿಳೆಯೊಬ್ಬರು ಕೆಲವು ದಿನಗಳ ಹಿಂದೆ ದಾಖಲಾಗಿದ್ದರು. ಅವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ ನಂತರ ವೈದ್ಯರು ಅಚ್ಚರಿಗೆ ಒಳಗಾಗಿದ್ದಾರೆ. ಮಹಿಳೆಯ ರಕ್ತದ ಗುಂಪು ಸಾಮಾನ್ಯವಾಗಿ ಎಲ್ಲರಲ್ಲೂ ಕಂಡುಬರುವ O Rh+ ಆಗಿತ್ತು. ಆದರೆ ವಿಶೇಷವೆಂದರೆ, ಲಭ್ಯವಿರುವ ಯಾವುದೇ O+ ರಕ್ತ ಅವರ ರಕ್ತಕ್ಕೆ ಹೊಂದಾಣಿಕೆಯಾಗುತ್ತಿರಲಿಲ್ಲ. ಹೀಗಾಗಿ ಹೆಚ್ಚಿನ ಪರೀಕ್ಷೆಗಾಗಿ ಅವರ ರಕ್ತದ ಮಾದರಿಯನ್ನು ರೋಟರಿ ಬೆಂಗಳೂರು ಟಿಟಿಕೆ ಬ್ಲಡ್ ಸೆಂಟರ್​​ನಲ್ಲಿರುವ ಅಡ್ವಾನ್ಸ್ಡ್ ಇಮ್ಯುನೊಹೆಮಟಾಲಜಿ ರೆಫರೆನ್ಸ್ ಲ್ಯಾಬೋರೇಟರಿಗೆ ಕಳುಹಿಸಿಕೊಡಲಾಗಿತ್ತು.

ಅತ್ಯಾಧುನಿಕ ಸೆರೋಲಾಜಿಕಲ್ ತಂತ್ರಗಳನ್ನು ಬಳಸಿಕೊಂಡು, ಅವರ ರಕ್ತವನ್ನು ಪರೀಕ್ಷೆಗೆ ಒಳಪಡಿಸಿದಾಗ ರಕ್ತವು ಪ್ಯಾನ್ರಿಯಾಕ್ಟಿವ್ (ಅಂದರೆ, ಸೀರಮ್ ಅಥವಾ ಪ್ಲಾಸ್ಮಾ, ಪ್ರಯೋಗಾಲಯದಲ್ಲಿ ಪರೀಕ್ಷಿಸಲಾದ ಎಲ್ಲ ಕೆಂಪು ರಕ್ತ ಕಣಗಳೊಂದಿಗೆ ಪ್ರತಿಕ್ರಿಯಿಸುವ ಪರಿಸ್ಥಿತಿ) ಆಗಿರುವುದು ಕಂಡುಬಂದಿದೆ. ಆ ರಕ್ತವು ಎಲ್ಲ ಪರೀಕ್ಷಾ ಮಾದರಿಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂಬುದು ಪತ್ತೆಯಾಯಿತು. ಇದು ಅಪರೂಪದ ಅಥವಾ ತಿಳಿದಿಲ್ಲದ ರಕ್ತದ ಪ್ರಕಾರದ ಸಂಭವನೀಯ ಪ್ರಕರಣವೆಂದು ಗುರುತಿಸಲಾಗಿದೆ ಎಂದು ರೋಟರಿ ಬೆಂಗಳೂರು ಟಿಟಿಕೆ ರಕ್ತ ಕೇಂದ್ರದ ವೈದ್ಯ ಡಾ. ಅಂಕಿತ್ ಮಾಥುರ್ ತಿಳಿಸಿದ್ದಾರೆ.





















































 
 

ಮಹಿಳೆಯ ಕುಟುಂಬದವರಲ್ಲಿ ಯಾರಲ್ಲಾದರೂ ಅಂಥದ್ದೇ ಮಾದರಿಯ ರಕ್ತ ಇದೆಯೇ ಎಂದು ತಿಳಿಯಲು ಪ್ರಯತ್ನಿಸಲಾಯಿತು. ಅವರ ಕುಟುಂಬದ 20 ಸದಸ್ಯರಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಯಿತು. ಆದರೆ ಅವುಗಳಲ್ಲಿ ಯಾವುದೂ ಮಹಿಳೆಯ ರಕ್ತದೊಂದಿಗೆ ಹೊಂದಿಕೆಯಾಗಲಿಲ್ಲ ಎಂದೂ ಅಂಕಿತ್ ಮಾಥುರ್ ತಿಳಿಸಿದ್ದಾರೆ.

ಪ್ರಕರಣವನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಲಾಯಿತು. ಅವರ ವೈದ್ಯರು ಮತ್ತು ಕುಟುಂಬದವರ ಪ್ರಯತ್ನದಿಂದ, ರಕ್ತ ವರ್ಗಾವಣೆಯ ಅಗತ್ಯವಿಲ್ಲದಂತೆಯೇ ಅವರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು ಎಂಬುದನ್ನು ವರದಿ ತಿಳಿಸಿದೆ.

ಮಹಿಳೆ ಮತ್ತು ಅವರ ಕುಟುಂಬದ ಎಲ್ಲರ ರಕ್ತದ ಮಾದರಿಗಳನ್ನು ಯುಕೆಯ ಬ್ರಿಸ್ಟಲ್‌ನಲ್ಲಿರುವ ಅಂತಾರಾಷ್ಟ್ರೀಯ ರಕ್ತ ಗುಂಪು ಉಲ್ಲೇಖ ಪ್ರಯೋಗಾಲಯಕ್ಕೆ (ಐಬಿಜಿಆರ್‌ಎಲ್) ಕಳುಹಿಸಲಾಗಿತ್ತು. ಅಲ್ಲಿ ಹತ್ತು ತಿಂಗಳ ಕಾಲ ವ್ಯಾಪಕ ಸಂಶೋಧನೆ ಮತ್ತು ಪರೀಕ್ಷೆಗಳನ್ನು ನಡೆಸಲಾಗಿತ್ತು. ಆ ಪರೀಕ್ಷೆಗಳಲ್ಲಿಯೂ, ಈವರೆಗೆ ಕಂಡುಬರದ ಹೊಸ ರಕ್ತ ಗುಂಪು ಇದು ಎಂಬುದು ಕಂಡುಬಂದಿದೆ ಎಂದು ಡಾ. ಮಾಥುರ್ ಹೇಳಿದ್ದಾರೆ.

ಏನಿದು ಸಿಆರ್​ಐಬಿ ರಕ್ತ ಗುಂಪು?
ಇದು ಕ್ರೋಮರ್ (CR) ರಕ್ತ ಗುಂಪಿನ ಭಾಗವಾಗಿದ್ದು, ಇದರ ಮೂಲವನ್ನು ಗುರುತಿಸಿ ಇದೀಗ ಅಧಿಕೃತವಾಗಿ CRIB ಎಂದು ಹೆಸರಿಸಲಾಗಿದೆ. CR ಎಂಬುದು ‘ಕ್ರೋಮರ್’ ಎಂಬುದನ್ನು ಪ್ರತಿನಿಧಿಸಿರೆ, ‘IB’ ಇಂಡಿಯಾ ಮತ್ತು ಬೆಂಗಳೂರು ಅನ್ನು ಸೂಚಿಸುತ್ತದೆ. 2025ರ ಜೂನ್​​ನಲ್ಲಿ ಇಟಲಿಯ ಮಿಲನ್‌ನಲ್ಲಿ ನಡೆದ ಅಂರಾರಾಷ್ಟ್ರೀಯ ರಕ್ತ ವರ್ಗಾವಣೆ ಸೊಸೈಟಿಯ (ISBT) 35 ನೇ ಪ್ರಾದೇಶಿಕ ಕಾಂಗ್ರೆಸ್‌ನಲ್ಲಿ CRIB ಎಂಬ ಈ ಐತಿಹಾಸಿಕ ಘೋಷಣೆ ಮಾಡಲಾಗಿದೆ. ಇದರೊಂದಿಗೆ, CRIB ರಕ್ತ ಪ್ರತಿಜನಕದೊಂದಿಗೆ ಗುರುತಿಸಲ್ಪಟ್ಟ ವಿಶ್ವದ ಮೊದಲ ವ್ಯಕ್ತಿ ಎಂದು ಕೋಲಾರದ ಮಹಿಳೆಯನ್ನು ಗುರುತಿಸಲಾಗುತ್ತದೆ ಎಂದು ಡಾ. ಮಾಥುರ್ ಹೇಳಿದ್ದಾರೆ.

error: Content is protected !!
Scroll to Top