ಭಾರತ-ಅಮೆರಿಕ ಸಹಭಾಗಿತ್ವದಲ್ಲಿ 13 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಸೆಟಲೈಟ್
ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಮತ್ತು ಅಮೆರಿಕದ ನಾಸಾ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ನಾಸಾ – ಇಸ್ರೊ ಸಿಂಥೆಟಿಕ್ ಅಪರ್ಚರ್ ರೇಡಾರ್ ನಿಸಾರ್ ಉಪಗ್ರಹ ಇಂದು ಶ್ರೀಹರಿಕೋಟಾದಿಂದ ಉಡಾವಣೆಯಾಗಲಿದೆ.
ʻನಿಸಾರ್ʼ ಭಾರತೀಯ ಕಾಲಮಾನದ ಪ್ರಕಾರ ಇಂದು ಸಂಜೆ 5.40ಕ್ಕೆ ಇಸ್ರೋದ GSLV-F16 ರಾಕೆಟ್ ಬೆನ್ನೇರಿ ಬಾಹ್ಯಾಕಾಶಕ್ಕೆ ತೆರಳಲಿದೆ. ಈ ಉಪಗ್ರಹವು ಶ್ರೀಹರಿಕೋಟದಿಂದ ಉಡಾವಣೆ ಆಗುತ್ತಿರುವ 102ನೇ ಉಪಗ್ರಹವಾಗಿದೆ. ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪ ನಿರ್ವಹಣೆ ಮತ್ತು ಕೃಷಿ ಕ್ಷೇತ್ರಗಳಿಗೆ ಅಮೂಲ್ಯವಾದ ಮಾಹಿತಿ ಒದಗಿಸಲಿದೆ. ನಿರ್ಗಲ್ಲು, ಹಿಮಫಲಕಗಳ ಬದಲಾವಣೆ, ಮಣ್ಣಿನಲ್ಲಿರುವ ತೇವಾಂಶ, ಪ್ರವಾಹ, ಅರಣ್ಯ ನಾಶ, ಬೆಳೆಯ ಆರೋಗ್ಯ, ನಗರೀಕರಣ ಮತ್ತು ಸೌಕರ್ಯಗಳ ಬದಲಾವಣೆ ಮುಂತಾದ ಮಾಹಿತಿಗಳನ್ನು ಒದಗಿಸಲಿದೆ. ಇದು ಭಾರತ-ಅಮೆರಿಕ ಸಹಭಾಗಿತ್ವದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಕಕ್ಷೆಯತ್ತ ರಾಕೆಟ್‌ನ ಪ್ರಯಾಣ ಬಹುತೇಕ 19 ನಿಮಿಷ ತೆಗೆದುಕೊಳ್ಳಲಿದೆ. ಆ ಬಳಿಕ ನಿಸಾರ್ ಉಪಗ್ರಹವನ್ನು ಅದರ ಉದ್ದೇಶಿತ-747 ಸನ್ ಸಿಂಕ್ರೊನಸ್ ಕಕ್ಷೆಯಲ್ಲಿ ಅಳವಡಿಸಲಾಗುತ್ತದೆ.
ನಿಸಾರ್ ಭೂಸರ್ವೇಕ್ಷಣಾ ಉಪಗ್ರಹಕ್ಕೆ 13,000 ಕೋಟಿ ರೂ. ವೆಚ್ಚ ಮಾಡಲಾಗಿದ್ದು, ವಿಶ್ವದ ಅತ್ಯಂತ ದುಬಾರಿ ಕಣ್ಗಾವಲು ಉಪಗ್ರಹವಾಗಿ ಗುರುತಿಸಿಕೊಂಡಿದೆ. ನಿಸಾರ್ ಉಪಗ್ರಹ ಒಂದು ಬಾರಿಗೆ 242 ಕಿಮೀ ಭೂವಿಸ್ತೀರ್ಣವನ್ನು ನೋಡುವ ಸಾಮರ್ಥ್ಯ ಹೊಂದಿದೆ. 97 ನಿಮಿಷಕ್ಕೆ ಭೂಮಿಗೆ ಒಂದು ಸುತ್ತು ಬರಲಿದ್ದು, 12 ದಿನಗಳಿಗೆ ಒಮ್ಮೆ ಇಡೀ ಭೂಮಿ ಸುತ್ತಲಿದೆ. ನಿಸಾರ್ ಉಪಗ್ರಹ ಕಳುಹಿಸುವ ಎಲ್ಲ ಮಾಹಿತಿಗಳು ಹಾಗೂ ದತ್ತಾಂಶಗಳನ್ನು ಉಚಿತವಾಗಿ ಎಲ್ಲ ದೇಶಗಳು ಅಧ್ಯಯನಕ್ಕೆ ಬಳಕೆ ಮಾಡಿಕೊಳ್ಳಬಹುದಾಗಿದೆ.
ನಿಸಾರ್ ಉಪಗ್ರಹ ಭೂಮಿಯಿಂದ 747 ಕಿಲೋಮೀಟರ್ ಎತ್ತರದಲ್ಲಿರುವ ತನ್ನ ಉದ್ದೇಶಿತ ಕಕ್ಷೆಯನ್ನು ತಲುಪಿದ ಬಳಿಕ ಅದರ ನೈಜ ಕಾರ್ಯ ಆರಂಭಗೊಳ್ಳುತ್ತದೆ. ಕಕ್ಷೆಗೆ ಸೇರಿದ ಬಳಿಕ, ಉಪಗ್ರಹದ 90 ದಿನಗಳ ಅವಧಿಯ, ಮುಖ್ಯವಾದ ‘ಕಮಿಷನಿಂಗ್ ಹಂತ’ ಆರಂಭಗೊಳ್ಳುತ್ತದೆ. ಇದನ್ನು ‘ಇನ್ ಆರ್ಬಿಟ್ ಚೆಕೌಟ್’ ಎಂದೂ ಕರೆಯಲಾಗಿದ್ದು, ಈ ಅವಧಿಯಲ್ಲಿ ಉಪಗ್ರಹವನ್ನು ಅದರ ವೈಜ್ಞಾನಿಕ ಗುರಿಗಳಿಗೆ ಸೂಕ್ತವಾಗಿ ಸಿದ್ಧಪಡಿಸಲಾಗುತ್ತದೆ. ಅಂದರೆ, ಉಪಗ್ರಹ ಇಂದು ಸಂಜೆ ಉಡಾವಣೆಗೊಂಡರೂ, ನಿಸಾರ್ ಅದರ ಸಂಪೂರ್ಣ ವೈಜ್ಞಾನಿಕ ಕಾರ್ಯಾಚರಣೆಗಳಲ್ಲಿ ತೊಡಗಲು ಭಾರತ ಅಕ್ಟೋಬರ್ ತಿಂಗಳ ಕೊನೆಯ ಭಾಗದ ತನಕ ಕಾಯಬೇಕಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
























