ನವದೆಹಲಿ: ರಾಜ್ಯದಲ್ಲಿ ರಸಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಸಂಸದ ಡಾ. ಕೆ. ಸುಧಾಕರ್ ಆರೋಪಿಸಿದ್ದಾರೆ.
ಲೋಕಸಭೆಯಲ್ಲಿನ ಶೂನ್ಯ ವೇಳೆಯಲ್ಲಿ ಈ ಸಂಬಂಧ ಮಾತನಾಡಿದ ಅವರು, ಮುಂಗಾರು ಅವಧಿ ಕೃಷಿಗೆ ರಸಗೊಬ್ಬರ ನಿರ್ಣಾಯಕ. ಭತ್ತ, ಜೋಳ, ದ್ವಿದಳಧಾನ್ಯ, ಸೋಯಾಬಿನ್ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬೆಳೆಯುತ್ತಾರೆ. ಜಾಗತಿಕ ಕಲಹದ ನಡುವೆಯೂ ಕೇಂದ್ರ ಸರ್ಕಾರವು ಈ ಹಂಗಾಮಿನಲ್ಲಿ 8.13 ಲಕ್ಷ ಟನ್ ಯೂರಿಯಾವನ್ನು ರಾಜ್ಯಕ್ಕೆ ಕಳುಹಿಸಿದೆ. ಭ್ರಷ್ಟಾಚಾರ ಹಾಗೂ ದುರಾಡಳಿತವನ್ನೇ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ಅಸಮರ್ಪಕ ಆಡಳಿತದಿಂದ ರೈತರಿಗೆ ಭಾರಿ ತೊಂದರೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ರಸಗೊಬ್ಬರ ದಾಸ್ತಾನು ಇದ್ದರೂ ಸರ್ಕಾರ ಯೂರಿಯಾ ಹಾಗೂ ಡಿಎಪಿ ಹಂಚಿಕೆ ಮಾಡದೆ ರೈತರಿಗೆ ಅನ್ಯಾಯ ಮಾಡುತ್ತಿದೆ. ರಾಜ್ಯದಲ್ಲಿ ₹258ಕ್ಕೆ ಸಬ್ಸಿಡಿ ಯೂರಿಯಾ ಸಿಗಬೇಕಿತ್ತು. ₹500 ಕ್ಕೆ ಮಾರಾಟ ಮಾಡಲಾಗುತ್ತಿದೆ. ಡಿಎಪಿಯನ್ನು ₹ 1200 ಬದಲು ₹2000ಕ್ಕೆ ಮಾರಲಾಗುತ್ತಿದೆ. ಕೇಂದ್ರ ಸರ್ಕಾರವು ಮಧ್ಯ ಪ್ರವೇಶ ಮಾಡಿ ಸಮರ್ಪಕ ರಸಗೊಬ್ಬರ ಪೂರೈಕೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚನೆ ಕೊಡಬೇಕು ಎಂದು ಅವರು ಮನವಿ ಸಲ್ಲಿಸಿದರು.
























