ಗುರುತಿಸಿದ ಎಲ್ಲ ಜಾಗಗಳನ್ನು ಅಗೆಯಲು ತೀರ್ಮಾನಿಸಿರುವ ಎಸ್‌ಐಟಿ
ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳ ಹೂತಿದ್ದೇನೆ ಎಂದು ಅನಾಮಿಕ ವ್ಯಕ್ತಿ ದೂರು ನೀಡಿದಂತೆ 8 ಅಡಿ ಅಗೆದರೂ ಶವವಾಗಲಿ, ಶವದ ಕುರುಹು ಆಗಲಿ ಸಿಕ್ಕಿಲ್ಲ. ಅನಾಮಿಕ ವ್ಯಕ್ತಿ ತೋರಿಸಿದ 13 ಜಾಗಗಳ ಪೈಕಿ ಮೊದಲ ಜಾಗವನ್ನು ದಿನಪೂರ್ತಿ ಅಗೆದರೂ ಏನೂ ಸಿಗದೆ ಇರುವುದರಿಂದ ಇನ್ನುಳಿದ ಜಾಗದ ಕಡೆ ಎಸ್ಐಟಿ ಗಮನ ಹರಿಸಿದೆ. ಇಂದು ಮತ್ತೆ ಅಗೆತ ಮುಂದುವರಿಯಲಿದೆ.
ಇನ್ನುಳಿದ 12 ಜಾಗಗಳನ್ನೂ ಅಗೆಯಲು ಎಸ್ಐಟಿ ನಿರ್ಧರಿಸಿದೆ. ಮೊದಲ ಜಾಗದಲ್ಲಿ ಏನೂ ಸಿಗದಿದ್ದರೂ ಮುಂದಿನ ಜಾಗದಲ್ಲಾದರೂ ಆತ ಹೂತಿಟ್ಟಿದ್ದಾನೆ ಎನ್ನುವ ಶವಗಳ ಯಾವುದಾದರು ಕುರುಹುಗಳು ಸಿಗಬಹುದು ಎಂದು ಎಸ್ಐಟಿ ಇಂದು ಮತ್ತೆ ಅಗೆಯುವ ಕೆಲಸಕ್ಕೆ ಮುಂದಾಗಿದೆ.
ಮೊದಲ ಜಾಗವನ್ನು ಬಿಟ್ಟು ಇಂದು ಎರಡನೇ ಬಳಿಕ ಮೂರನೇ ಜಾಗವನ್ನು ಅಗೆಯಲು ತಯಾರಿ ನಡೆಸಿದೆ. ಇನ್ನುಳಿದ ಜಾಗಗಳು ದುರ್ಗಮ ಕಾಡಿನಲ್ಲಿ ಇರುವ ಕಾರಣ ಅಲ್ಲಿಗೆ ಜೆಸಿಬಿ ಒಯ್ಯುವುದು ಕೂಡ ಕಷ್ಟ ಎನ್ನಲಾಗುತ್ತಿದೆ. ಅಗತ್ಯ ಬಿದ್ದರೆ ಇನ್ನಷ್ಟು ಕಾರ್ಮಿಕರನ್ನು ಕರೆಸಿಕೊಳ್ಳಲು ಎಸ್ಐಟಿ ಪ್ಲಾನ್ ಮಾಡಿಕೊಂಡಿದೆ. ಮೊದಲ ಜಾಗದಲ್ಲಿ ಯಾವುದೇ ಕಳೇಬರ ಸಿಗದಿರುವುದರಿಂದ ಕುತೂಹಲದಿಂದ ಇದ್ದ ಎಲ್ಲರಿಗೂ ಅನಾಮಿಕ ವ್ಯಕ್ತಿಯ ಮೇಲೆಯೇ ಇದೀಗ ಅನುಮಾನ ಹುಟ್ಟಿದೆ. ಈತ ಯಾವ ಉದ್ದೇಶ, ಕಾರಣ ಇಟ್ಟುಕೊಂಡು ಈ ರೀತಿ ಮಾಡಿದ್ದಾನೆ ಎನ್ನುವ ಮಾತುಗಳು ಹರಿದಾಡುತ್ತಿವೆ.
ಆತ ಗುರುತಿಸಿರುವ ಎಲ್ಲ 13 ಜಾಗಗಳನ್ನು ಅಗೆಯಲು ಎಸ್ಐಟಿ ನಿರ್ಧರಿಸಿದ್ದು, ಬುಧವಾರ ಆ ಕೆಲಸ ಮುಂದುವರಿಯಲಿದೆ. ಈ ನಡುವೆ ಅನಾಮಿಕ ವ್ಯಕ್ತಿಯ ನಡೆಯಿಂದ ಎಸ್ಐಟಿ ಅಧಿಕಾರಿಗಳೂ ಗೊಂದಲದಲ್ಲಿದ್ದಾರೆ.
ನೂರಾರು ಶವಗಳನ್ನು ಹೂತಿಟ್ಟಿದ್ದೆ ಎಂದಿದ್ದ ಅನಾಮಿಕ ವ್ಯಕ್ತಿ ದೂರು ನೀಡಿದ್ದ. ಬಳಿಕ ಆತನೇ ಬಂದು ನೇತ್ರಾವತಿ ಸ್ನಾನಘಟ್ಟದ ಪರಿಸರದಲ್ಲಿ ಒಟ್ಟು 13 ಜಾಗಗಳನ್ನು ಗುರುತಿಸಿ ಎಲ್ಲ ಕಡೆ ಶವಗಳನ್ನು ಹೂತು ಹಾಕಿದ್ದೇನೆ ಎಂದು ಅಧಿಕಾರಿಗಳ ಜೊತೆ ಹೋಗಿ ಜಾಗ ಗುರುತು ಮಾಡಿದ್ದಾನೆ. ನಿನ್ನೆ ದಿನ ಪೂರ್ತಿ ಆತ ತೋರಿಸಿದ 13 ಜಾಗಗಳ ಪೈಕಿ ಮೊದಲ ಜಾಗದಲ್ಲಿ ಉತ್ಖನನ ಕಾರ್ಯ ನಡೆಸಲಾಗಿತ್ತು. ಬರೋಬ್ಬರಿ ಏಳು ಗಂಟೆಗಳ ಕಾಲ ನೇತ್ರಾವತಿ ಸ್ನಾನಘಟ್ಟದ ಬಳಿಯ ಜಾಗದಲ್ಲಿ 12 ಸಿಬ್ಬಂದಿ ನಾಲ್ಕೂವರೆ ಅಡಿ ಆಳ ಅಗೆದ್ರೂ ಏನು ಸಿಗಲಿಲ್ಲ. ಬಳಿಕ ಹಿಟಾಚಿ ಯಂತ್ರದ ಮೂಲಕ 15 ಅಡಿ ಅಗಲ ಹಾಗೂ 8 ಅಡಿ ಆಳಕ್ಕೆ ಅಗೆಯಲಾಗಿದೆ. ಸಂಜೆ 6 ಗಂಟೆಯವರೆಗೂ ಅಗೆದಾಗ ಏನೂ ಸಿಗದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಯಿತು. ಹೀಗೆ ಸಮಾಧಿಯೊಳಗಿನ ಸತ್ಯ ಮತ್ತೆ ನಿಗೂಢವಾಗಿಯೇ ಉಳಿದಿದೆ.
























