ನಿಮಿಷಾ ಪ್ರಿಯಾ ಮರಣ ದಂಡನೆ ಶಾಶ್ವತವಾಗಿ ರದ್ದು

ಕೊನೆಗೂ ಸಾವಿನ ದವಡೆಯಿಂದ ಪಾರಾದ ಕೇರಳದ ನರ್ಸ್‌

ತಿರುವನಂತಪುರ: ಕೇರಳದ ನರ್ಸ್‌ ನಿಮಿಷಾ ಪ್ರಿಯಾಗೆ ಕೊಲೆ ಪ್ರಕರಣವೊಂದರಲ್ಲಿ ವಿಧಿಸಿದ್ದ ಮರಣ ದಂಡನೆಯನ್ನು ಯೆಮೆನ್‌ ಸರ್ಕಾರ ಸಂಪೂರ್ಣವಾಗಿ ರದ್ದುಪಡಿಸಿದೆ. ಯೆಮೆನ್‌ ಅಧಿಕಾರಿಗಳು ಮರಣ ದಂಡನೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ ಎಂದು ಗ್ರ್ಯಾಂಡ್‌ ಮುಫ್ತಿ ಕಾಂತಪುರಂ ಎ.ಪಿ.ಅಬೂಬಕ್ಕರ್‌ ಮುಸ್ಲಿಯಾರ್‌ ಅವರ ಕಚೇರಿ ಪ್ರಕಟಣೆ ತಿಳಿಸಿದೆ.

ಯೆಮೆನ್‌ನ ವ್ಯವಹಾರ ಪಾಲುದಾರನನ್ನು ನಿದ್ದೆಯ ಓವರ್‌ಡೋಸ್‌ ಇಂಜೆಕ್ಷನ್‌ ಚುಚ್ಚಿ ಕೊಲೆ ಮಾಡಿದ ಅಪರಾಧಕ್ಕೆ ನಿಮಿಷಾ ಪ್ರಿಯಾಗೆ ಯೆಮೆನ್‌ನಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಪಾಲುದಾರನನ್ನು ಕೊಂದು ಶವವನ್ನು ಕತ್ತರಿಸಿ ನೀರಿನ ಟಾಂಕಿಗೆ ಹಾಕಿದ ಗಂಭೀರ ಆರೋಪ ನಿಮಿಷಾ ಪ್ರಿಯಾಳ ಮೇಲಿತ್ತು. ಇಂಥ ಗಂಭೀರ ಅಪರಾಧದಲ್ಲಿ ಯೆಮೆನ್‌ನಂಥ ದೇಶದಲ್ಲಿ ಕ್ಷಮಾದಾನ ಸಿಗುವುದು ಬಹಳ ದುರ್ಲಭ.





















































 
 

ಕಳೆದ ಜು.16ರಂದು ನಿಮಿಷಾ ಪ್ರಿಯಾರನ್ನು ಗಲ್ಲಿಗೇರಿಸಲು ದಿನ ನಿಗದಿಯಾಗಿತ್ತು. ಭಾರತ ಸರ್ಕಾರ ಮತ್ತು ಅಬೂಬಕ್ಕರ್‌ ಮುಸ್ಲಿಯಾರ್‌ ಅವರ ಸತತ ಪ್ರಯತ್ನದ ಪರಿಣಾಮವಾಗಿ ಮರಣ ದಂಡನೆಯನ್ನು ಮುಂದೂಡಲಾಗಿತ್ತು. ಬಳಿಕ ಮರಣ ದಂಡನೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲು ಯೆಮೆನ್‌ ಸರ್ಕಾರ ಒಪ್ಪಿಕೊಂಡಿತ್ತು. ಬಳಿಕ ಸನಾದಲ್ಲಿ ನಡೆದ ಸತತ ಮಾತುಕತೆಗಳ ಪರಿಣಾಮವಾಗಿ ಕೊನೆಗೂ ಮರಣ ದಂಡನೆ ಕಾಯಂ ಆಗಿ ರದ್ದಾಗಿದೆ.

37 ವರ್ಷದ ಪ್ರಿಯಾ ಅವರು 2018ರ ಜೂನ್‌ನಲ್ಲಿ ಯೆಮೆನ್ ಪ್ರಜೆಯೊಬ್ಬರನ್ನು ಕೊಂದ ಆರೋಪ ಸಾಬೀತಾದ ನಂತರ ಜುಲೈ 16ರಂದು ಗಲ್ಲಿಗೇರಿಸಲು ನಿರ್ಧರಿಸಲಾಗಿತ್ತು. ಈ ನಿರ್ಧಾರವನ್ನು ದೇಶದ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ನವೆಂಬರ್ 2023ರಲ್ಲಿ ಎತ್ತಿಹಿಡಿದಿತ್ತು. ಆದರೆ, ಭಾರತೀಯ ಗ್ರ್ಯಾಂಡ್ ಮುಫ್ತಿ ಮತ್ತು ಭಾರತ ಸರ್ಕಾರಗಳ ಜಂಟಿ ಪ್ರಯತ್ನದಿಂದ ಅವರ ಮರಣದಂಡನೆಯನ್ನು ಮುಂದೂಡಲಾಗಿತ್ತು.

ಜುಲೈ 17ರಂದು ವಿದೇಶಾಂಗ ಸಚಿವಾಲಯ ನಿಮಿಷಾ ಪ್ರಿಯಾ ಅವರನ್ನು ಮರಣದಂಡನೆಯಿಂದ ಕಾಪಾಡಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಮತ್ತು ಪ್ರಕರಣದಲ್ಲಿ ಸಾಧ್ಯ ಇರುವ ಎಲ್ಲ ಸಹಾಯವನ್ನು ನೀಡುತ್ತಿದೆ ಎಂದು ಹೇಳಿದೆ. ಯೆಮೆನ್‌ನಲ್ಲಿ ಸಂಕೀರ್ಣ ಕಾನೂನು ಪ್ರಕ್ರಿಯೆ ಹಿನ್ನೆಲೆಯಲ್ಲಿ ಪ್ರಿಯಾ ಅವರ ಕುಟುಂಬಕ್ಕೆ ಸಹಾಯ ಮಾಡಲು ವಿದೇಶಾಂಗ ಇಲಾಖೆ ವಕೀಲರನ್ನೂ ಕೂಡಾ ನೇಮಕ ಮಾಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ನಿಮಿಷಾ ಪ್ರಿಯಾ ತರಬೇತಿ ಪಡೆದ ನರ್ಸ್ ಆಗಿದ್ದು, ಕೆಲವು ವರ್ಷಗಳಿಂದ ಯೆಮೆನ್‌ನ ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದರು. ಆರ್ಥಿಕ ಕಾರಣಗಳಿಂದಾಗಿ ಅವರ ಪತಿ ಮತ್ತು ಅಪ್ರಾಪ್ತ ವಯಸ್ಸಿನ ಮಗಳು 2014ರಲ್ಲಿ ಭಾರತಕ್ಕೆ ವಾಪಸ್ ಆಗಿದ್ದರು. ಅದೇ ವರ್ಷ ಯೆಮೆನ್ ಅಂತರ್ಯುದ್ಧದಲ್ಲಿ ಸಿಲುಕಿಕೊಂಡಿತ್ತು ಮತ್ತು ದೇಶವು ಹೊಸ ವೀಸಾಗಳನ್ನು ನೀಡುವುದನ್ನು ನಿಲ್ಲಿಸಿದ್ದರಿಂದ ಅವರು ಹಿಂತಿರುಗಲು ಸಾಧ್ಯವಾಗಲಿಲ್ಲ. ಆ ಬಳಿಕ 2015ರಲ್ಲಿ ನಿಮಿಷಾ ಯೆಮೆನ್ ಪ್ರಜೆ ತಲಾಲ್ ಅಬ್ದೋ ಮಹ್ದಿ ಅವರೊಂದಿಗೆ ಕೈಜೋಡಿಸಿ ಸನಾದಲ್ಲಿ ಕ್ಲಿನಿಕ್ ಸ್ಥಾಪಿಸಿದ್ದರು.

ಯೆಮೆನ್ ಕಾನೂನಿನ ಪ್ರಕಾರ ವಿದೇಶಿಯರು ಸ್ವತಂತ್ರವಾಗಿ ವ್ಯವಹಾರಗಳನ್ನು ನಡೆಸಲು ಅವಕಾಶವಿಲ್ಲ. ಆದ್ದರಿಂದ ಪ್ರಿಯಾ ಅವರ ಮಹ್ದಿಯೊಂದಿಗಿನ ಸಂಬಂಧವು ಕಾನೂನುಬದ್ಧ ಅವಶ್ಯಕತೆಯಾಯಿತು. ಮಹ್ದಿ ಭಾರತ ಪ್ರವಾಸದ ಸಮಯದಲ್ಲಿ ತೆಗೆದ ಮದುವೆಯ ಛಾಯಾಚಿತ್ರವನ್ನು ದುರುಪಯೋಗಪಡಿಸಿಕೊಂಡು ಪ್ರಿಯಾಳೊಂದಿಗೆ ಮದುವೆಯಾಗಿದೆ ಎಂದು ಸುಳ್ಳು ಹೇಳಿದ್ದರು. ನಂತರ ಅವರು ಕ್ಲಿನಿಕ್ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಅವಳ ಆದಾಯವನ್ನು ಕಸಿದುಕೊಳ್ಳಲು ಪ್ರಾರಂಭಿಸಿದರು ಎಂದು ನಿಮಿಷಾ ಕುಟುಂಬ ಹೇಳಿಕೊಂಡಿದೆ. ಪ್ರಿಯಾ ತನ್ನ ಪಾಸ್‌ಪೋರ್ಟ್ ಹಿಂಪಡೆಯಲು ಮಹ್ದಿಗೆ ನಿದ್ರೆಯ ಇಂಜೆಕ್ಷನ್​ ನೀಡಿದ್ದರು. ಆದರೆ ಅದು ಓವರ್ ಡೋಸ್ ಆಗಿದ್ದರಿಂದ ಮಹ್ದಿ ಮೃತಪಟ್ಟಿದ್ದರು ಎಂದು ಪ್ರಿಯಾ ಕುಟುಂಬಸ್ಥರು ಹೇಳಿದ್ದಾರೆ. ದೇಶ ತೊರೆಯಲು ಪ್ರಯತ್ನಿಸುತ್ತಿದ್ದಾಗ ನಿಮಿಷಾ ಅವರನ್ನು ಬಂಧಿಸಲಾಯಿತು ಮತ್ತು 2018ರಲ್ಲಿ ಕೊಲೆ ಪ್ರಕರಣದಲ್ಲಿ ಶಿಕ್ಷೆ ವಿಧಿಸಲಾಗಿತ್ತು.

error: Content is protected !!
Scroll to Top