ನವದೆಹಲಿ: ಆಪರೇಷನ್ ಸಿಂಧೂರ್ ಸಮಯದಲ್ಲಿ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಉಗ್ರರು ಶೆಲ್ ದಾಳಿ ನಡೆಸಿದ್ದು, ಇದರಿಂದ ಪೋಷಕರನ್ನು ಕಳೆದುಕೊಂಡು ಅನಾಥರಾದ 22 ಮಕ್ಕಳನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದತ್ತು ತೆಗೆದುಕೊಳ್ಳಲು ನಿರ್ಧಾರ ಮಾಡಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ತಾರಿಖ್ ಹಮೀದ್ ಕರ್ರಾ ಮಾಹಿತಿ ನೀಡಿದ್ದು, ಪಾಕ್ ನಡೆಸಿದ ಶೆಲ್ ದಾಳಿಯಲ್ಲಿ ಹೆತ್ತವರು ಅಥವಾ ಕುಟುಂಬದ ಏಕೈಕ ಆಧಾರವನ್ನೇ ಕಳೆದುಕೊಂಡ ಪೂಂಚ್ ಪ್ರದೇಶದ 22 ಮಕ್ಕಳ ಶಿಕ್ಷಣದ ಮೊತ್ತವನ್ನು ರಾಹುಲ್ ಗಾಂಧಿ ಭರಿಸಲಿದ್ದಾರೆ. ಆ ಮಕ್ಕಳ ಪದವಿ ಶಿಕ್ಷಣದ ವರೆಗಿನ ಜವಾಬ್ದಾರಿಯನ್ನು ರಾಹುಲ್ ಹೊರಲಿರುವುದಾಗಿ ಹೇಳಿದ್ದಾರೆ.
ಶೆಲ್ ದಾಳಿಯ ಬಳಿಕ ರಾಹುಲ್ ಪೂಂಚ್ ಪ್ರದೇಶಕ್ಕೆ ಭೇಟಿ ನೀಡಿ ಅಲ್ಲಿನ ಜನರ ಪರಿಸ್ಥಿತಿ ಅವೋಕಿಸಿದ್ದರು. ಈ ಸಂದರ್ಭದಲ್ಲಿ ಈ ದಾಳಿಯ ಕಾರಣಕ್ಕೆ ಹೆತ್ತವರು, ಪೋಷಕರನ್ನು ಕಳೆದುಕೊಂಡು ಅನಾಥರಾದ ಮಕ್ಕಳ ಪಟ್ಟಿ ನೀಡುವಂತೆ ಸೂಚಿಸಿದ್ದರು. ಅದಕ್ಕನುಗುಣವಾಗಿ ಪಟ್ಟಿ ಸಿದ್ದಪಡಿಸಿ ಅವರಿಗೆ ನೀಡಲಾಗಿದೆ ಎಂದು ತಾರಿಖ್ ಮಾಹಿತಿ ನೀಡಿದ್ದಾರೆ.
























