ನವದೆಹಲಿ: ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರು ಆಪರೇಷನ್ ಸಿಂಧೂರ್ ಬಗ್ಗೆ ಮಾತುಗಳನ್ನಾಡಿದ್ದಾರೆ.
ನಮಗೆ ಜನತೆ ಆಶೀರ್ವದಿಸಿದ್ದಾರೆ. ನಾನು ದೇಶದ ಪರವಾಗಿ ಮಾತನಾಡಲು ನಿಂತಿರುವುದು. ನಮ್ಮ ಮೇಲೆ ವಿಶ್ವಾಸ ಇರಿಸಿದ ಜನರಿಗೆ ಧನ್ಯವಾದ ಸಮರ್ಪಿಸುವುದಾಗಿ ಹೇಳಿದ್ದಾರೆ.
ಪೆಹಲ್ಗಾಮ್ ದಾಳಿ ನಡೆಸಿದ ಉಗ್ರರನ್ನು ಹತ್ಯೆ ಮಾಡುವ ಮೂಲಕ ನಾವು ಮಟ್ಟ ಹಾಕಿದ್ದೇವೆ. ಈ ದೇಶದ, ಜನರ ಮನದ ಮಾತು ನನಗೆ ತಿಳಿದಿದೆ. ಧರ್ಮ ಕೇಳಿ ಕೊಂದ ಉಗ್ರರನ್ನು ಮಣ್ಣಲ್ಲಿ ಮಣ್ಣಾಗಿಸಿದ್ದೇವೆ. ಸೇನೆಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ನಮ್ಮ ಕ್ಷಿಪಣಿ ತಾಕತ್ತಿನ ಶಕ್ತಿ ಜಗತ್ತಿಗೆ ಅರಿವಾಗಿದೆ. ಪಾಕ್ ಅಣ್ವಸ್ತ್ರದ ಬೆದರಿಕೆ ಹಾಕಿತ್ತು. ಆದರೆ ನಿರ್ಧರಿತ ಗುರಿಯನ್ನು ನಮ್ಮ ಸೇನೆ ಸಾಧಿಸಿದೆ. ಪಾಕ್ ಉಗ್ರ ನೆಲೆ ನೆಲಸಮವಾಗಿದೆ. ಅವರ ಅಣ್ವಸ್ತ್ರದ ಬೆದರಿಕೆಗೆ ನಾವು ಜಗ್ಗುವುದಿಲ್ಲ ಎಂದಿದ್ದಾರೆ.
ಪಾಕ್ಗೆ ಮೂರು ರಾಷ್ಟ್ರಗಳಷ್ಟೇ ಬೆಂಬಲ ನೀಡಿದ್ದವು. ಆದರೆ ನಮಗೆ ಹಲವು ರಾಷ್ಟ್ರಗಳ ಬೆಂಬಲ ಇತ್ತು. ನಮ್ಮ ದೇಶದ ದಾಳಿಯನ್ನು ಯಾವ ರಾಷ್ಟ್ರ ಸಹ ನಿಲ್ಲಿಸಲಿಲ್ಲ. ಪಾಕ್ ಕದನ ವಿರಾಮಕ್ಕಾಗಿ ನಮ್ಮ ಬಳಿ ಬೇಡಿಕೊಂಡಿತ್ತು. ಭಯೋತ್ಪಾದಕ ನೆಲೆಗಳನ್ನು ಧ್ವಂಸ ಮಾಡುವುದೇ ನಮ್ಮ ಗುರಿಯಾಗಿತ್ತು ಎಂದರು.
ಪಹಲ್ಗಾಮ್ ದಾಳಿ ನಡೆದಾಗ ಕಾಂಗ್ರೆಸ್ ನಮ್ಮನ್ನು ವ್ಯಂಗ್ಯ ಮಾಡಿದ್ದರು. ಸಾರ್ವಜನಿಕರ ಸಾವಿನಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತದೆ ಎಂದಿದ್ದಾರೆ. ಆಪರೇಷನ್ ಸಿಂಧೂರ್ ನಡೆಯುತ್ತದೆ ಎಂದು ಕನಸಿನಲ್ಲೂ ಊಹಿಸಿರದ ಪಾಕ್ ಈಗ ತತ್ತರಿಸಿ ಹೋಗಿದೆ. ಆಪರೇಷನ್ ಸಿಂಧೂರ್ ಇನ್ನೂ ಚಾಲ್ತಿಯಲ್ಲಿದ್ದು, ಗುಂಡನ್ನು ಗುಂಡಿನಿಂದಲೇ ಉತ್ತರಿಸುತ್ತೇವೆ ಎಂದಿದ್ದಾರೆ.
























