ಸಂತಾನ, ಸಂಪತ್ತು, ನೆಮ್ಮದಿ ಅನುಗ್ರಹಿಸುವ ದೇವರು ನಾಗ
ಶ್ರಾವಣ ಮಾಸ… ಸಾಲು ಸಾಲು ಹಬ್ಬಗಳ ಸಂಭ್ರಮದ ತಿಂಗಳು… ಆಷಾಢ ಕಳೆದು ಶ್ರಾವಣ ಬಂದಾಗ ನಮ್ಮನ್ನು ಮೊದಲು ಸ್ವಾಗತ ಮಾಡುವ ಹಬ್ಬವೇ ಶ್ರಾವಣ ಶುಕ್ಲದಂದು ಬರುವ ನಾಗರ ಪಂಚಮಿ.
ಪ್ರಕೃತಿ, ಪ್ರಾಣಿ ಪಕ್ಷಿಗಳಲ್ಲಿಯೂ ದೇವರನ್ನು ಕಾಣುವ ಗುಣ ನಮ್ಮದು. ಇದರಿಂದಾಗಿ ಕೊಂಚ ಮಟ್ಟಿಗಾದರೂ ನಮ್ಮಲ್ಲಿ ಪ್ರಕೃತಿ ಉಳಿಸಬೇಕು, ಪ್ರಾಣಿ-ಪಕ್ಷಿಗಳಿಗೆ ತೊಂದರೆ ನೀಡಬಾರದು ಎಂಬ ಪ್ರಜ್ಞೆ ಜಾಗೃತವಾಗಿದೆ ಎನ್ನಬಹುದು.
ಜನರು ನಾಗದೇವರನ್ನು ಭಕ್ತಿಯಿಂದ ಪೂಜಿಸಿ, ಹಾಲೆರೆದು ಆ ಮೂಲಕ ಆಶೀರ್ವಾದ ಪಡೆದುಕೊಳ್ಳುವುದು ನಾಗರ ಪಂಚಮಿಯಿಂದು ಸರ್ವೇಸಾಮಾನ್ಯ. ನಾಗನನ್ನು ಪೂಜೆ ಮಾಡುವುದರಿಂದ ಸರ್ಪ ಭಯ, ವಿಷ ಬಾಧೆ ಮೊದಲಾದ ಸಂಕಷ್ಟಗಳ ಭಯ ಕಮ್ಮಿಯಾಗುತ್ತದೆ ಎನ್ನುವ ನಂಬಿಕೆ ನಮ್ಮದು.
ಹಿನ್ನೆಲೆ
ಪುರಾಣ ಕಥೆಗಳ ಹಿನ್ನೆಲೆಯಲ್ಲಿ ನೋಡುವುದಾದರೆ ಸರ್ಪಯಜ್ಞ ಮಾಡುತ್ತಿದ್ದ ಜನಮೇಜಯ ರಾಜನನ್ನು ಆಸ್ತಿಕ ಋಷಿಗಳ ಪ್ರಸನ್ನ ರನ್ನಾಗಿ ಮಾಡಿ, ಅವನ ಬೇಡಿಕೆಯಂತೆ ಎಲ್ಲ ಸರ್ಪಗಳಿಗೂ ಅಭಯ ನೀಡಿದ್ದಾಗಿ ಒಂದು ಕಥೆ ಹೇಳುತ್ತದೆ. ಇನ್ನೊಂದು ಕಥೆಯ ಪ್ರಕಾರ ಶ್ರೀಕೃಷ್ಣನ ಗೋಕುಲದ ಸಮೀಪವಿದ್ದ ಯಮುನಾ ನದಿಯಲ್ಲಿದ್ದ ಕಾಳಿಂಗ ಎಂಬ ಸರ್ಪವನ್ನು ಮರ್ದಿಸಿ ಲೋಕ ರಕ್ಷಣೆ ಮಾಡಿದ ದಿನ ಎಂದೂ ಹೇಳಲಾಗುತ್ತದೆ.
ಮತ್ತೊಂದು ಕಥೆಯ ಪ್ರಕಾರ ಪುರಾಣದಲ್ಲಿ ಸತ್ಯೇಶ್ವರಿ ಎಂಬ ಕ್ಷುದ್ರ ದೇವಿಯ ಸಹೋದರ ನಾಗರ ಪಂಚಮಿಯ ಹಿಂದಿನ ದಿನ ಮೃತನಾಗುತ್ತಾನೆ. ಆಕೆಗೆ ಕನಸಿನಲ್ಲಿ ನಾಗ ರೂಪದಲ್ಲಿ ಮೃತನಾದ ಸಹೋದರ ಕಾಣಿಸಿಕೊಳ್ಳುತ್ತಾನೆ. ಅಂದಿನಿಂದ ಆಕೆ ನಾಗದೇವರನ್ನು ಸಹೋದರ ಎಂದು ತಿಳಿದು ಪೂಜೆ ಮಾಡುತ್ತಾಳೆ. ನಾಗದೇವರು ಅವಳನ್ನು ರಕ್ಷಣೆ ಮಾಡುತ್ತಾರೆ. ಈ ಕಥೆಯ ಹಿನ್ನೆಲೆಯಲ್ಲಿ ನಾಗರ ಪಂಚಮಿಯನ್ನು ಸಹೋದರನಿಗಾಗಿಯೂ ಸ್ತ್ರೀಯರು ಪೂಜೆ ಮಾಡುವ ಪದ್ಧತಿ ಬೆಳೆದುಕೊಂಡು ಬಂದಿದೆ.

ಹಾಗೆಯೇ ಶಿವನ ಕತ್ತಿನಲ್ಲಿ ಹಾರವಾಗಿಯೂ ಹಾವನ್ನು ನಾವು ಕಾಣಬಹುದು. ಹಿಂದೂ ಸಂಪ್ರದಾಯ, ಆಚರಣೆಗಳಲ್ಲಿ ಹಾವಿಗೂ ದೇವರ ಸ್ಥಾನ ಇದ್ದು, ಹಲವಾರು ಪೌರಾಣಿಕ ಸಂದರ್ಭಗಳಲ್ಲಿ ಹಾವುಗಳ ಉಲ್ಲೇಖವನ್ನು ನಾವು ಕಾಣಬಹುದು. ಈ ಎಲ್ಲ ಕಾರಣಗಳಿಂದ ನೆಲದ ಹಬ್ಬವಾಗಿ ನಾಗರ ಪಂಚಮಿ ಮಹತ್ವ ಪಡೆದಿದೆ.
ಜಾನಪದ ಕಥೆಯೊಂದರ ಪ್ರಕಾರ ಬಡ ಕುಟುಂಬದ ಹುಡುಗಿಯೊಬ್ಬಳನ್ನು ಶ್ರೀಮಂತ ಮನೆತನದ ಯುವಕನೊಬ್ಬ ಮದುವೆಯಾಗಿದ್ದ. ಆಕೆಯನ್ನು ಗಂಡನ ಮನೆಯಿಂದ ತವರು ಮನೆಗೆ ಕರೆದುಕೊಂಡು ಹೋಗಲು ಪ್ರತಿವರ್ಷದಂತೆ ಆಕೆಯ ಅಣ್ಣ ಬಂದಿದ್ದ. ಆಕೆಯನ್ನು ಮನೆಗೆ ಕರೆದುಕೊಂಡು ಹೋಗುವಾಗ ದುರಾಸೆ ತುಂಬಿದ ಆವಳ ಅಣ್ಣ ಆಕೆ ಧರಿಸಿದ ಆಭರಣಗಳನ್ನು ತನಗೆ ನೀಡುವಂತೆ ಹೇಳುತ್ತಾನೆ. ಆದರೆ ಆಕೆ ನಿರಾಕರಿಸಿದಾಗ ಕಲ್ಲು ಎತ್ತಿ ಹಾಕಿ ಆಕೆಯನ್ನು ಕೊಂದು ಆಭರಣ ಪಡೆಯಬೇಕು ಎಂದು ಕಲ್ಲು ಎತ್ತಿದಾಗ ಅದರ ಕೆಳಗಿದ್ದ ಹಾವು ಆತನನ್ನು ಕಚ್ಚಿ ಸಾಯಿಸುತ್ತದೆ. ತನ್ನ ಅಣ್ಣನ ಸಾವಿನಿಂದ ನೊಂದ ತಂಗಿ ಹೇಗಾದರೂ ಮಾಡಿ ತನ್ನ ಅಣ್ಣನನ್ನು ಉಳಿಸಿ ಕೊಡುವಂತೆ ನಾಗಪ್ಪನನ್ನು ಪ್ರಾರ್ಥಿಸುತ್ತಾಳೆ. ಆಕೆಯ ಕಣ್ಣೀರಿಗೆ ಕರಗಿದ ನಾಗದೇವರು ಅಣ್ಣನನ್ನು ರಕ್ಷಿಸುತ್ತಾರೆ. ಶ್ರಾವಣ ಮಾಸದ ಪಂಚಮಿಯಂದು ಈ ಘಟನೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಇದನ್ನು ಸಹೋದರ ಸಹೋದರಿಯರ ಹಬ್ಬ ಎಂದು ಕೆಲವೆಡೆ ಆಚರಣೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತದೆ.
ನಾಗರ ಪಂಚಮಿಯಂದು ನಾಗನನ್ನು ಪೂಜಿಸುವುದು ಹೇಗೆ?
ನಾಗರಪಂಚಮಿಯ ದಿನದಂದು ಅಕ್ಕಿ ಹಿಟ್ಟಿನ ತೊಟ್ಟಿಲು ಮಾಡಿ, ಅದರಲ್ಲಿ ನಾಗ ದೇವರ ವಿಗ್ರಹ ಇಡುತ್ತಾರೆ. ನಾಗ ದೇವರ ಪೂಜೆ ಮಾಡುವಾಗ ಉಪವಾಸವಿರಬೇಕು. ಅರಶಿಣ, ಚಂದನದಿಂದ ಪೂಜೆ ಮಾಡಿ ಹಾಲೆರೆದು, ತಾಳೆ ಹೂವಿವಿಂದ ಅಲಂಕಾರ ಮಾಡುತ್ತಾರೆ.
ಇನ್ನೂ ಕೆಲವೆಡೆ ಹುತ್ತವನ್ನು ಹೂವುಗಳಿಂದ ಸಿಂಗರಿಸಿ, ನಾಗಪ್ಪನಿಗೆ ಹಾಲೆರೆವ ಕ್ರಮವನ್ನೂ ನಾವು ಕಾಣಬಹುದು. ನಾಗಪ್ಪನ ದೇವಾಲಯಗಳು, ಬನಗಳಲ್ಲಿಯೂ ಕ್ಷೀರಾಭಿಷೇಕ, ಎಳನೀರು ಅಭಿಷೇಕವನ್ನು ಮಾಡುವ ಮೂಲಕ ಪೂಜೆ ಸಮರ್ಪಣೆ ಮಾಡುತ್ತಾರೆ. ವಾಹನ ಆಶೀರ್ವಾದ ಪಡೆಯುತ್ತಾರೆ.
ನಾಗರ ಪಂಚಮಿ ದಿನ ಪೂಜೆ ಸಲ್ಲಿಸಿದರೆ ನಾಗ ದೇವರ ಅನುಗ್ರಹ ಸಿಗುತ್ತದೆ, ದೋಷ ನಿವಾರಣೆ ಆಗುತ್ತದೆ ಎನ್ನುವ ನಂಬಿಕೆ ಸಹ ಜನಮಾನಸದಲ್ಲಿದೆ.
ತುಳುನಾಡಿನ ವಿಶಿಷ್ಟ ನಂಬಿಕೆ
ತುಳುನಾಡಿನ ಧಾರ್ಮಿಕ ನಂಬಿಕೆಯಲ್ಲಿ ನಾಗನಿಗೆ ಬಹಳ ಮಹತ್ವವಿದೆ. ʼತನು ಮೈಪಾವೊಡು, ತಂಬಿಲ ಕಟ್ಟಾವೊಡು’ ಎಂಬ ಪೂರ್ವ ವಾಡಿಕೆಯಂತೆ ಮೂಲಸ್ಥಾನಗಳಲ್ಲಿ ನಾಗದೇವರಿಗೆ ನಾಗರಪಂಚಮಿ ಪರ್ವಕಾಲದಲ್ಲಿ ತನು ಎರೆದು, ತನಿ ಹರಕೆ ಸಲ್ಲಿಸಿ ಮೂಲನಾಗನ ದರ್ಶನದಿಂದ ಧನ್ಯರಾಗುಗುತ್ತಾರೆ. ತುಳುನಾಡಿನ ಪ್ರತಿ ಮನೆಯೊಬ್ಬರಿಗೂ ಮೂಲನಾಗನೆಂಬ ಆರಾಧ್ಯ ದೈವ ಇದ್ದಾನೆ. ತುಳುವರು ಎಲ್ಲೇ ಇದ್ದರೂ ನಾಗರಪಂಚಮಿಯಂದು ಮೂಲ ನಾಗನ ಸನ್ನಿಧಿಗೆ ಹೋಗಿ ನಾಗನಿಗೆ ಕ್ಷೀರಾಭಿಷೇಕ, ಸೀಯಾಳಭಿಷೇಕ ಮಾಡಬೇಕು ಎನ್ನುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ.
ತುಳುನಾಡಿನಲ್ಲಿ ನಾಗನನ್ನು ಸಂತಾನ, ಸಂಪತ್ತುಗಳನ್ನು ಅನುಗ್ರಹಿಸುವ ದೇವರು ಎಂದು ಆರಾಧಿಸುವ ಪರಂಪರೆಯಿದೆ. ಚರ್ಮವ್ಯಾಧಿ, ದೃಷ್ಟಿ ದೋಷಗಳನ್ನು ಪರಿಹರಿಸುವ, ಕೃಷಿ ಭಾಗ್ಯವನ್ನು, ಸರ್ವಸಮೃದ್ಧಿಯನ್ನು ನೀಡುವ ದೇವರೆಂದು ನಾಗನನ್ನು ಆರಾಧಿಸುತ್ತಾರೆ. ಸಾಮಾನ್ಯವಾಗಿ ಎಲ್ಲ ದೇವಸ್ಥಾನ, ದೈವಸ್ಥಾನಗಳಲ್ಲಿ ಮಾತ್ರವಲ್ಲದೆ ಮನೆಗಳ ಹಿತ್ತಲುಗಳಲ್ಲೂ ನಾಗಸನ್ನಿಧಿ ಇರುತ್ತದೆ. ಇಲ್ಲಿರುವ ನಾಗಬನಗಳು ಪರಮ ಪವಿತ್ರವಾಗಿರುತ್ತವೆ.
ನಾಗರ ಹಾವುಗಳನ್ನು ಕೊಂದರೆ ಸರ್ಪ ದೋಷ?
ನಾಗರ ಹಾವುಗಳನ್ನು ಕೊಲ್ಲುವುದರಿಂದ ನಾಗ ಶಾಪ ಬರುತ್ತದೆ ಎನ್ನುವ ನಂಬಿಕೆಯೂ ಇದೆ. ನಾಗರ ಬನಗಳನ್ನು ನಾಶ ಮಾಡಿದರೂ ಆ ಕರ್ಮಕ್ಕೆ ತಕ್ಕ ಶಿಕ್ಷೆ ತಲೆಮಾರುಗಳವರೆಗೆ ಅನುಭವಿಸುವ ಸಂಗತಿಯೂ ನಮ್ಮ ಹಿರಿಯರು ನಂಬಿಕೊಂಡು ಬಂದ ಸಂಗತಿ. ನಾಗನ ದೋಷದ ಭಯಕ್ಕೆ ಜನರು ಹಾವುಗಳನ್ನು ಕೊಲ್ಲಲು ಹಿಂದೆ ಮುಂದೆ ನೋಡುತ್ತಾರೆ. ಆದ್ದರಿಂದ ಅವುಗಳ ಸಂತತಿ ಉಳಿಯುತ್ತದೆ. ನಾಗ ಬನಗಳನ್ನು ನಾಶ ಮಾಡಿದರೆ ಅಪಾಯ ಎದುರಾಗುತ್ತದೆ ಎನ್ನುವ ನಂಬಿಕೆಯಲ್ಲಿ ನಾಗನ ಹೆಸರಲ್ಲಾದರೂ ಅಲ್ಪಸ್ವಲ್ಪ ಕಾಡುಗಳು ಉಳಿದಿವೆ ಎನ್ನುವುದು ಸಂತಸದ ವಿಷಯ.
ಹಾಗೆಯೇ ಒಮ್ಮೆ ಸರ್ಪ ದೋಷ, ನಾಗ ದೋಷ ಬಂದಲ್ಲಿ ಅದನ್ನು ನಿವಾರಣೆ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕೆಂದೇ ಹಲವಾರು ಕ್ರಮಗಳಿವೆ. ಕೊಂಚ ತಪ್ಪಿದರೂ ಯಾರೋ ಒಬ್ಬರು ಮಾಡಿದ ತಪ್ಪು ಇಡೀ ಕುಟುಂಬಕ್ಕೆಯೇ ಶಾಪವಾಗಿ ಪರಿಣಮಿಸುತ್ತದೆ ಎಂಬುದಾಗಿಯೂ ಹಿರಿಯರು ನಂಬಿದ್ದಾರೆ.
ಎಚ್ಚರಿಕೆ
ನಾಗ ದೇವರ ಶಾಪ ನಿವಾರಣೆ ಮಾಡುತ್ತೇವೆ ಎನ್ನುವ ಹೆಸರಿನಲ್ಲಿ ಕೆಲವು ಕಳ್ಳ ಸ್ವಾಮಿಗಳು ಜನರನ್ನು ಮೋಸಗೊಳಿಸುವ ಸುದ್ದಿಗಳನ್ನು ನಾವು ಮಾಧ್ಯಮಗಳಲ್ಲಿ ಕಾಣುತ್ತಲೇ ಇರುತ್ತೇವೆ. ಸರ್ಪ ದೋಷದ ಬಗ್ಗೆ ಇಲ್ಲಸಲ್ಲದ ಭಯಗಳನ್ನು ಮನುಷ್ಯರಲ್ಲಿ ತುಂಬಿ ಅದರಿಂದ ದುಡ್ಡು ಮಾಡುವ ದಂಧೆಯವರೂ ನಮ್ಮ ನಡುವೆ ಇದ್ದಾರೆ.
ಇಂತಹ ಕಳ್ಳ ಸ್ವಾಮಿಗಳಿಂದಾಗಿ ಒಳ್ಳೆಯ ಸ್ವಾಮೀಜಿಗಳು, ಧಾರ್ಮಿಕ ವಲಯದಲ್ಲಿ ಕೆಲಸ ಮಾಡುವ ವರ್ಗದ ಮೇಲೆಯೂ ಜನರು ನಂಬಿಕೆ ಕಳೆದುಕೊಳ್ಳುವ ಹಾಗಾಗುತ್ತಿದೆ ಎನ್ನುವುದು ದುರಂತ.
ಹಾಗಾಗಿ ನಮ್ಮ ಸಮಸ್ಯೆಗಳು ಕಳ್ಳರ ಪಾಲಿಗೆ ದುಡ್ಡು ಮಾಡುವ ಪರಿಹಾರಗಳಾಗದಿರಲಿ. ಅಂತಹ ನಕಲಿಗಳ ವಿರುದ್ಧ ಎಚ್ಚರವಿರಲಿ. ಕೊನೆಯದಾಗಿ ದೇವರು ಎಂದಿಗೂ ಹೆದರಿಸಲಾರ, ತೊಂದರೆ ನೀಡಲಾರ. ಆದರೆ ದೇವರ ಹೆಸರು ಹೇಳಿಕೊಂಡು ಜನರನ್ನು ತೊಂದರೆಗೆ ಸಿಲುಕಿಸುವ ನಕಲಿಗಳ ಬಗ್ಗೆ ಜಾಗೃತರಾಗೋಣ.
ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು
ಭುವನ ಬಾಬು ಪುತ್ತೂರು

























