ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ V/S ದರ್ಶನ್ ಅಭಿಮಾನಿಗಳ ಜಟಾಪಟಿ
ಬೆಂಗಳೂರು: ಸಾಮಾಜಿಕ ಮಾಧ್ಯಮಗಳಲ್ಲಿ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಹಾಗೂ ನಟ ದರ್ಶನ್ ಅಭಿಮಾನಿಗಳ ನಡುವಿನ ಜಟಾಪಟಿ ತೀವ್ರಗೊಂಡಿದ್ದು, ನಟಿಗೆ ಕುರಿತು ಅವಹೇಳನಕಾರಿ ಹಾಗೂ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇಲೆ ದರ್ಶನ್ ಅವರ 43 ಅಭಿಮಾನಿಗಳ ವಿರುದ್ಧ ಬೆಂಗಳೂರು ಪೊಲೀಸರು ಸೋಮವಾರ ರಾತ್ರಿ ಎಫ್ಐಆರ್ ದಾಖಲಿಸಿದ್ದಾರೆ.
ತಮ್ಮ ವಿರುದ್ಧ ಅಶ್ಲೀಲ ಕಾಮೆಂಟ್ ಮಾಡಿದ ದರ್ಶನ್ ಫ್ಯಾನ್ಸ್ ವಿರುದ್ಧ ಕಿಡಿಕಾರಿರುವ ನಟಿ ರಮ್ಯಾ, ಮಹಿಳಾ ಆಯೋಗ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದರು.
ರಮ್ಯಾ ನೀಡಿದ ದೂರಿನ ಆಧಾರದ ಮೇಲೆ ಪ್ರಮೋದ ಗೌಡ ಎಂಬ ವ್ಯಕ್ತಿ ಸೇರಿ 43 ಅಕೌಂಟ್ ಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆ 67, 66 ಹಾಗೂ ಬಿಎನ್ಎಸ್ 351(2), 351(3), 352, 75(1)(4), 79 ಅಡಿ ಪ್ರಕರಣ ದಾಖಲು ಆಗಿದೆ.
ನಾನೊಂದು ಸುಪ್ರೀಂ ಕೋರ್ಟ್ ಆದೇಶವನ್ನು ಶೇರ್ ಮಾಡಿದ್ದೆ. ಅದಕ್ಕೆ ಪ್ರತಿಯಾಗಿ ತುಂಬಾ ಕೆಟ್ಟದಾಗಿ ಮೆಸೇಜ್ ಹಾಕಿ, ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ರೇಣುಕಾಸ್ವಾಮಿ ಬದಲು ನಿಮ್ಮನ್ನು ಕೊಲೆ ಮಾಡ್ಬೇಕಿತ್ತು. ನಿಮ್ಮನ್ನು ಅತ್ಯಾಚಾರ ಮಾಡ್ತೀವಿ ಎಂದೆಲ್ಲಾ ಸಂದೇಶ ಕಳುಹಿಸಿದ್ದಾರೆ ಎಂದು ರಮ್ಯಾ ಆರೋಪಿಸಿದ್ದಾರೆ.
























