ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿದವರು ಮೂರ್ಛೆ ತಪ್ಪಿ ಸಿಕ್ಕಿಬಿದ್ದರು

ಉಡುಪಿ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ

ಉಡುಪಿ: ಇಲ್ಲಿನ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಬಂದ ಇಬ್ಬರು ಮೂರ್ಚೆತಪ್ಪಿ ಜನರ ಕೈಗೆ ಸಿಕ್ಕಿಬಿದ್ದ ಘಟನೆ ಶನಿವಾರ ಮುಂಜಾನೆ ಸಂಭವಿಸಿದೆ. ಕಳ್ಳರು ಇಂದು ಮುಂಜಾನೆ 3 ಗಂಟೆ ಸುಮಾರಿಗೆ ದೇವಸ್ಥಾನದ ಹೆಬ್ಬಾಗಿಲಿನ ಬೀಗ ಮುರಿದು ಕಳ್ಳತನಗೈಯ್ಯಲು ಯತ್ನಿಸಿದ್ದಾರೆ.

ದೇವಸ್ಥಾನದ ಕಾವಲುಗಾರ ಬೊಬ್ಬಿಟ್ಟಾಗ ಕಳ್ಳರು ಕಾವಲುಗಾರನಿಗೆ ಚಾಕು ತೋರಿಸಿ ಜೀವ ಬೆದರಿಕೆಯೊಡ್ಡಿ ಪಲಾಯನಗೈದಿದ್ದಾರೆ. ತಕ್ಷಣ ಕಾವಲುಗಾರ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ದೇವಸ್ಥಾನದ ವಠಾರದಲ್ಲಿ ಸ್ಥಳೀಯರು ಜಮಾಯಿದ್ದಾರೆ. ಬಳಿಕ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಇಬ್ಬರು ಕಳ್ಳರು ಬಂದು ಕಳ್ಳತನಕ್ಕೆ ಯತ್ನಿಸಿ ಪಲಾಯನ ಮಾಡಿರುವುದು ಗೊತ್ತಾಗಿದೆ. ತಕ್ಷಣ ಸ್ಥಳೀಯರು ಹುಡುಕಾಡಿದಾಗ ಕಡಿಯಾಳಿ ಪೆಟ್ರೋಲ್ ಬಂಕ್ ಬಳಿ ಇಬ್ಬರು ಸೆರೆ ಸಿಕ್ಕಿದ್ದಾರೆ.





















































 
 

ಕಳ್ಳರಿಬ್ಬರು ಓಡುತ್ತಿದ್ದ ವೇಳೆ ಓರ್ವ ಫಿಟ್ಸ್‌ನಿಂದ ಮೂರ್ಛೆ ತಪ್ಪಿ ಬಿದ್ದಿದ್ದಾನೆ. ಆತನನ್ನು ಉಪಚರಿಸುತ್ತಿದ್ದ ಜೊತೆಗಿದ್ದ ಇನ್ನೋರ್ವ ಜನರನ್ನು ಕಂಡು ಓಡಲು ಯತ್ನಿಸಿದರೂ ಜನರ ಕೈಗೆ ಸಿಕ್ಕಿಬಿದ್ದಿದ್ದಾನೆ. ಮೂರ್ಛೆ ವ್ಯಾಧಿ ಉಲ್ಬಣಿಸಿ ಗಂಭೀರ ಸ್ಥಿತಿಯಲ್ಲಿದ್ದ ಆತನಿಗೆ ಸ್ಥಳೀಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡು ಸ್ಥಳೀಯರ ಸಹಕಾರದಿಂದ ಮೂರ್ಛೆ ರೋಗಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮತ್ತೊಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳಿಬ್ಬರು ಕೇರಳ ಮೂಲದವರೆಂದು ತಿಳಿದು ಬಂದಿದೆ. ದೇವಸ್ಥಾನದ ಕಾವಲುಗಾರನ ಕರ್ತವ್ಯ ಪ್ರಜ್ಞೆಗೂ ಶ್ಲಾಘನೆ ವ್ಯಕ್ತವಾಗಿದೆ.

error: Content is protected !!
Scroll to Top