ಸಿಬಿಐ ಅಧಿಕಾರಿಗಳ ಸೋಗುಹಾಕಿ ಕರೆ ಮಾಡಿದ ವಂಚಕರ ಬೆದರಿಕೆಯನ್ನು ನಿಜವೆಂದು ನಂಬಿದ ಮ್ಯಾನೇಜರ್
ಬೆಂಗಳೂರು : ಆನ್‌ಲೈನ್ ಸೈಬರ್ ವಂಚನೆಯ ಬಗ್ಗೆ ಜಾಗೃತಿ ಮೂಡಿಸಬೇಕಾದ ಬ್ಯಾಂಕ್ ಮ್ಯಾನೇಜರ್ ಕೂಡ ಡಿಜಿಟಲ್ ಅರೆಸ್ಟ್ ಆಗಿ 50 ಲ.ರೂ. ಕಳೆದುಕೊಂದ ಘಟನೆ ಮಂಡ್ಯದಲ್ಲಿ ಸಂಭವಿಸಿದೆ.
ಮಂಡ್ಯದ ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಭವ್ಯಾ ವಂಚನೆಗೊಳಗಾದವರು. ವಂಚಕರು ಭವ್ಯಾ ಅವರಿಗೆ ಸಿಬಿಐ ಅಧಿಕಾರಿಗಳ ಸೋಗುಹಾಕಿ ಫೋನ್ ಮಾಡಿ ನೀವು ಮನಿ ಲಾಂಡರಿಂಗ್ ವ್ಯವಹಾರದಲ್ಲಿ ಶಾಮೀಲಾಗಿದ್ದೀರಿ, ಬೆದರಿಕೆ ಕರೆ ಮಾಡಿದ್ದೀರಿ ಎಂದು ಹೆದರಿಸಿದ್ದಾರೆ. ಹವಾಲ ದಂಧೆಯಲ್ಲಿ ಭಾಗಿಯಾಗಿದ್ದೀರಿ. ನಿಮ್ಮಿಂದ ಹಲವರಿಗೆ ಬೆದರಿಕೆ ಕರೆ ಹೋಗಿದೆ ಎಂದು ಬ್ಲಾಕ್‌ಮೇಲ್ ಮಾಡಿದ್ದಾರೆ. ಇದನ್ನು ನಿಜವೆಂದು ಬ್ಯಾಂಕ್ ಮ್ಯಾನೇಜರ್ ನಂಬಿದ್ದಾರೆ.
ನಿಮ್ಮ ಖಾತೆಯಲ್ಲಿರುವ ಹಣ ನಮ್ಮ ಖಾತೆಗೆ ಕಳುಹಿಸಿ. ಸಮಸ್ಯೆ ಬಗೆಹರಿಸಿ ಸಂಜೆಯೊಳಗಾಗಿ ವಾಪಸ್ ಹಾಕುತ್ತೇವೆ ಎಂದು ನಂಬಿಸಿದ್ದಾರೆ. ಹಣ ಕಳುಹಿಸುವವರೆಗೂ ಎಲ್ಲೂ ಕದಲದಂತೆ ವಿಡಿಯೋ ಕಾಲ್ ಮೂಲಕ ಸೂಚನೆ ನೀಡಿದ್ದಾರೆ. ಬಳಿಕ ತಮ್ಮ ಖಾತೆಗೆ ಹಣ ಬರುತ್ತಿದ್ದಂತೆ ಬೇರೆ ಬೇರೆ 29 ಖಾತೆಗೆ ಖದೀಮರು ಹಣ ವರ್ಗಾವಣೆ ಮಾಡಿದ್ದಾರೆ. ಸೈಬರ್ ಕಳ್ಳರ ಗಾಳಕ್ಕೆ ಸಿಲುಕಿದ ಮ್ಯಾನೇಜರ್ 50 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ.
ಮ್ಯಾನೇಜರ್ ಭವ್ಯಾ ದೂರಿನ ಮೇರೆಗೆ ಮಂಡ್ಯ ಸೆನ್ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ಹಣ ವರ್ಗಾವಣೆ ಆದ ಬ್ಯಾಂಕ್ ಖಾತೆಗಳ ಜಾಡು ಹಿಡಿದು ಹೋಗಿ ರಾಜಸ್ಥಾನದಲ್ಲಿ ಮೂವರು ಸೈಬರ್ ಕಳ್ಳರನ್ನು ಬಂಧಿಸಿದ್ದಾರೆ. ಗೋಪಾಲ್ ಬಿಷ್ಣೋಯಿ, ಮಹಿಪಾಲ್ ಬಿಷ್ಣೋಯಿ, ಜಿತೇಂದ್ರ ಸಿಂಗ್ ಬಂಧಿತರು. ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ಆರೋಪಿಗಳು ವಂಚಿಸುತ್ತಿದ್ದರು. ಸದ್ಯ 9 ತಿಂಗಳ ಬಳಿಕ ಮಂಡ್ಯ ಪೊಲೀಸರು ಪ್ರಕರಣ ಬೇಧಿಸಿದ್ದಾರೆ.
























