ಅಮೆರಿಕ ವರದಿಯಿಂದ ಅಡಿಕೆ ಬೆಳೆಗಾರರಿಗೆ ಹೊಸ ಸಂಕಷ್ಟ
ಸಾವಿರಾರು ಜನರಿಗೆ ಉದ್ಯೋಗ, ಆರ್ಥಿಕ ಬಲ ಕೊಟ್ಟಿರುವ ಉದ್ಯಮಕ್ಕೆ ಹೊಡೆತ
ಶಿವಮೊಗ್ಗ : ಪ್ಲಾಸ್ಟಿಕ್ಗೆ ಪರ್ಯಾಯವಾಗಿ ಬಳಕೆಯಲ್ಲಿದ್ದ ಅಡಿಕೆ ಹಾಳೆಯ ತಟ್ಟೆಗಳಿಗೂ ಈಗ ಕಂಟಕ ಎದುರಾಗಿದೆ. ಅಮೆರಿಕದ ಸಂಶೋಧನಾ ವರದಿಯೊಂದು ಹಾಳೆ ತಟ್ಟೆಯಲ್ಲೂ ಕ್ಯಾನ್ಸರ್ಗೆ ಕಾರಣವಾಗುವ ಅಂಶ ಇದೆ ಎಂದು ಹೇಳಿರುವುದು ಅಡಿಕೆ ಬೆಳೆಗಾರರಿಗೆ ಹೊಸ ಸಂಕಷ್ಟು ತಂದೊಡ್ಡಿದೆ.
ಅಡಿಕೆ ಹಾಳೆಯ ತಟ್ಟೆಗಳಲ್ಲಿ ಅಲ್ಕಲೈಡ್ ಎಂಬ ಕ್ಯಾನ್ಸರ್ಗೆ ಕಾರಣವಾಗುವಂತಹ ಅಂಶ ಪತ್ತೆಯಾಗಿದೆ ಎಂದಿದೆ ಅಮೆರಿಕದ ಸಂಶೋಧನಾ ವರದಿ. ಈ ವರದಿ ಪ್ರಕಟವಾದ ಬೆನ್ನಿಗೆ ಅಮೆರಿಕ ಅಡಿಕೆ ಹಾಳೆ ತಟ್ಟೆಗಳ ಆಮದನ್ನು ಸ್ಥಗಿತಗೊಳಿಸಿದೆ.

ವಿಶ್ವಾಸಾರ್ಹತೆ ಅನುಮಾನಾಸ್ಪದ
ಆದರೆ ಈ ವರದಿಯ ವಿಶ್ವಾಸಾರ್ಹತೆಯ ಬಗ್ಗೆ ಅನೇಕ ಅನುಮಾನಗಳು ಇವೆ. ಇದು ಅಮೆರಿಕ ಏಕಪಕ್ಷೀಯವಾಗಿ ನಡೆಸಿದ ಸಂಶೋಧನೆಯೇ ಹೊರತು ಇದಕ್ಕೆ ಅಡಿಕೆ ಬೆಳೆಯುವ ದೇಶಗಳ ಸಹಭಾಗಿತ್ವ ಇರಲಿಲ್ಲ. ಇದರ ಹಿಂದೆ ಬೇರೆ ಉದ್ದೇಶವೂ ಇರಹುದು ಎನ್ನಲಾಗುತ್ತಿದೆ.
ಅಡಿಕೆಗೂ ಬಗ್ಗೆಯೂ ಇದೆ ಕ್ಯಾನ್ಸರ್ ಆರೋಪ
ಈಗಾಗಲೇ ಅಡಿಕೆ ಆರೋಗ್ಯಕ್ಕೆ ಹಾನಿಕಾರ, ಅಡಿಕೆಯಿಂದ ಕ್ಯಾನ್ಸರ್ ಬರುತ್ತದೆ ಎನ್ನುವ ವಿಚಾರಗಳು ಕಳೆದ 10 ವರ್ಷಗಳಿಂದ ಚರ್ಚೆಯಲ್ಲಿದೆ. ಸಂಶೋಧನೆಗಳೂ ನಡೆಯುತ್ತಿವೆ. ಈಗಾಗಲೇ ಕೇಂದ್ರ ಸರ್ಕಾರ ಅಡಿಕೆಐ ಕುರಿತು ಸಂಶೋಧನೆ ನಡೆಸಲು ಅನುಮತಿ ನೀಡಿದೆ. ಕರಾವಳಿಯಲ್ಲಿ ಬೇರೆ ಬೇರೆ ನೆಲಯಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಈಗ ಅಡಿಕೆ ಹಾಳೆಯಿಂದ ಸಿದ್ಧಪಡಿಸುವ ತಟ್ಟೆಯಲ್ಲೂ ಆರೋಗ್ಯಕ್ಕೆ ಹಾನಿಕಾರವಾಗಿರುವ ಅಂಶ ಇದೆ ಎನ್ನುವ ಅಮೆರಿಕದ ಎಫ್ಡಿಎ ವರದಿ ಮತ್ತೆ ಬೆಳೆಗಾರರ ನಿದ್ದೆಗೆಡಿಸಿದೆ.
ಮಾವು-ಬೇವು ಕೂಡ ಹಾನಿಕಾರಕ ಎಂದು ಹೇಳಿತ್ತು ಅಮೆರಿಕ
ಅಮೆರಿಕದ ಎಫ್ಡಿಎ ಸಂಸ್ಥೆ ಈ ಹಿಂದೆ ಮಾವು, ಬೇವು, ಅರಿಷಿಣ, ಅಕ್ಕಿ ಹಾಗೂ ಶುಂಠಿಯ ಮೇಲೂ ಇಂತಹದ್ದೇ ಸಂಶೋಧನಾ ವರದಿಯನ್ನು ತೇಲಿ ಬಿಟ್ಟಿತ್ತು. ಇದರಿಂದ ಭಾರತದ ರಫ್ತು ವಹಿವಾಟಿಗೆ ದೊಡ್ಡ ಪ್ರಮಾಣದ ಹೊಡೆತ ಬಿದ್ದಿತ್ತು. ಈಗ ಮುಂದುವರಿದ ಭಾಗವಾಗಿ ಅಡಿಕೆ ಹಾಳೆಯ ಮೇಲೆ ಹೊಡೆತ ಕೊಟ್ಟಿದೆ. ಅಡಿಕೆ ಹಾಳೆಯಲ್ಲಿ ಕ್ಯಾನ್ಸರ್ ಕಾರಕ ಇದೆ ಎನ್ನುವ ವರದಿಯನ್ನು ಮಲೆನಾಡಿನ ಅಡಿಕೆ ಬೆಳೆಗಾರರು ಮತ್ತು ಅಡಿಕೆ ತಯಾರಿಕೆ ಘಟಕದವರು ಒಪ್ಪುತ್ತಿಲ್ಲ. ಅಡಿಕೆ ಹಾಳೆ ತಟ್ಟೆ ಪೂರ್ಣವಾಗಿ ನೈಸರ್ಗಿಕವಾಗಿದೆ. ಇದರ ಬಗ್ಗೆ ಅಪಪ್ರಚಾರ ನಡೆಯುತ್ತಿದೆ ಎನ್ನುವುದು ಅಡಿಕೆ ಬೆಳೆಗಾರರು ಮತ್ತು ಅಡಕೆ ತಟ್ಟೆ ತಯಾರಿಕೆ ಘಟಕದ ಮಾಲೀಕರ ಮತ್ತು ಉದ್ಯೋಗಸ್ಥರ ವಾದವಾಗಿದೆ.
ಬೆಳೆಗಾರರ ಪರ್ಯಾಯ ಆದಾಯ ಮೂಲ ಹಾಳೆ ತಟ್ಟೆ
ಅಡಿಕೆ ಬೆಳೆಗಾರರಿಗೆ ಇತ್ತೀಚೆಗಿನ ವರ್ಷಗಳಲ್ಲಿ ಅಡಿಕೆ ಜೊತೆಗೆ ಹಾಳೆಯೂ ಲಾಭ ತಂದುಕೊಡುತ್ತಿದೆ. ಹಿಂದೆ ಸ್ಥಳೀಯವಾಗಿ ಮುಟ್ಟಾಳೆಯಂಥ ಸಣ್ಣಪುಟ್ಟ ಕೃಷಿ ಕಾರ್ಯಕ್ಕೆ ಪೂರಕವಾದ ವಸ್ತುಗಳನ್ನು ತಯಾರಿಸಲು ಮಾತ್ರ ಬಳಕೆಯಾಗುತ್ತಿದ್ದ ಮತ್ತು ಬಹುಪಾಲು ಉರುವಲು ಆಗಿ ಬಳಕೆಯಾಗುತ್ತಿದ್ದ ಅಡಿಕೆ ಹಾಳೆಗಳು ತಟ್ಟೆ ಮತ್ತಿತರ ಪರಿಕರಗಳ ತಯಾರಿಯ ಅನ್ವೇಷಣೆಯ ಬಳಿಕ ಮೌಲ್ಯವರ್ಧಿಸಿಕೊಂಡು ಬೆಳೆಗಾಗರರಿಗೆ ಆದಾಯದ ಇನ್ನೊಂದು ಮೂಲವಾಗಿತ್ತು.
ಕರಾವಳಿಯಲ್ಲಿದೆ ಸಾವಿರಾರು ಹಾಳೆ ತಟ್ಟೆ ಉದ್ಯಮ
ಅಡಿಕೆ ಹಾಳೆ ತಟ್ಟೆಗಳನ್ನು ಸಿದ್ಧಪಡಿಸುವ ಸಣ್ಣ ಉದ್ಯಮಗಳು ಕರಾವಳಿ ಮತ್ತು ಮಲೆನಾಡಿನಾದ್ಯಂತ ಸಾವಿರಾರು ಇದ್ದು, ಇದು ಸಾವಿರಾರು ಜನರಿಗೆ ನೌಕರಿಯನ್ನೂ ಕೊಟ್ಟಿದೆ. ಅಡಿಕೆ ಹಾಳೆಯಿಂದ ತಟ್ಟೆ ಮಾತ್ರವಲ್ಲದೆ ಇನ್ನಿತರ ನಿತ್ಯ ಬಳಕೆಯೂ ವಸ್ತುಗಳೂ ತಯಾರಾಗುತ್ತವೆ. ಉತ್ಸವ ಮತ್ತಿತರ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈಗ ಹೆಚ್ಚಾಗಿ ಅನ್ನದಾನಕ್ಕೆ ಹಾಳೆ ತಟ್ಟೆಯನ್ನೇ ಬಳಸುತ್ತಾರೆ. ಬಫೆ ಸಿಸ್ಟಮ್ನಲ್ಲಿ ಊಟ ಬಡಿಸಲು ಇದು ಅನುಕೂಲಕಾರಿ ತಟ್ಟೆಯಾಗಿದೆ ಎಂಬ ಕಾರಣಕ್ಕೆ ಬಹಳ ಜನಪ್ರಿಯವಾಗಿದೆ. ಇದರ ವಿಲೇವಾರಿಯೂ ಸುಲಭ. ರಾಶಿ ಹಾಕಿ ಸುಟ್ಟರೆ ವಿಲೇವಾರಿ ಕೆಲಸ ಮುಗಿದುಹೋಗುತ್ತದೆ. ಮರಗಳ ಬುಡಕ್ಕೆ ಕತ್ತರಿಸಿ ಹಾಕಿ ಗೊಬ್ಬರವಾಗಿ ಬಳಕೆ ಮಾಡುವುದೂ ಇದೆ. ವಿದೇಶಗಳಲ್ಲೂ ಅಡಿಕೆ ಹಾಳೆತಟ್ಟೆಗೆ ಬೇಡಿಕೆ ಇದ್ದು, ಭಾರತದಿಂದ ರಫ್ತು ಆಗುತ್ತಿದೆ.
20ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಅಡಿಕೆ ತಟ್ಟೆಗಳು ರಫ್ತಾಗುತ್ತವೆ. ಅದರಲ್ಲಿ ಪ್ರಮುಖವಾಗಿ ಅಮೆರಿಕ ಮತ್ತು ಇಸ್ರೇಲ್ ದೇಶಗಳಿಗೆ ಅತಿಹೆಚ್ಚು ಅಡಿಕೆ ಹಾಳೆ ತಟ್ಟೆ ರಫ್ತಾಗುತ್ತದೆ. ಈಗ ಅಮೆರಿಕದ ವರದಿಯಿಂದ ಈ ಇಡೀ ಉದ್ಯಮ ಸರಪಣಿಯೇ ಸಮಸ್ಯೆಗೊಳಗಾಗಿದೆ.
ವರದಿಯಿಂದ ಸಂಕಷ್ಟ
ಅಮೆರಿಕದ ವರದಿ ಉದ್ಯಮಕ್ಕೆ ದೊಡ್ಡ ಹೊಡೆತ ಕೊಟ್ಟಿದೆ. ಅಮೆರಿಕ ಅಡಿಕೆ ಹಾಳೆ ತಟ್ಟೆ ಆಮದು ನಿಷೇಧ ಮಾಡಿರುವುದರಿಂದ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್ ರಾಜ್ಯಗಳಲ್ಲಿನ ಅಡಿಕೆ ಹಾಳೆ ತಯಾರಿಕಾ ಘಟಕಗಳಿಗೆ ಭಾರಿ ನಷ್ಟವುಂಟಾಗುವ ಭೀತಿಯಿದೆ. ಕಳೆದ ಎರಡು ತಿಂಗಳಿನಿಂದ ಅಡಕೆ ಹಾಳೆ ತಟ್ಟೆ ರಫ್ತಿಗೆ ದೊಡ್ಡ ಪೆಟ್ಟು ಬಿದ್ದಿದೆ. ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ಅಡಿಕೆ ತಟ್ಟೆ ಸಿದ್ಧಪಡಿಸುತ್ತಿರುವ ಘಟಕಗಳಿಗೆ ಈಗ ಸಂಕಷ್ಟ ಎದುರಾಗಿದೆ.
























