ಕಡಬ : ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಆ್ಯಂಬುಲೆನ್ಸ್ ಚಾಲಕ ಹೊನ್ನಪ್ಪ ದೇವರಗದ್ದೆ (52) ಎಂಬುವರು ಜುಲೈ 22ರಂದು ನಾಪತ್ತೆಯಾಗಿದ್ದು, ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರ ಪತ್ತೆಗಾಗಿ ತೀವ್ರ ಶೋಧ ಕಾರ್ಯ ಆರಂಭಿಸಲಾಗಿದೆ.
ಹೊನ್ನಪ್ಪ ಅವರು ಜುಲೈ 22ರಂದು ಬೆಳಗ್ಗೆ ಕರ್ತವ್ಯಕ್ಕೆಂದು ಮನೆಯಿಂದ ಹೊರಟವರು ಬಳಿಕ ಕಾಣೆಯಾಗಿದ್ದಾರೆ. ಅವರು ಅಗ್ರಹಾರ ದೇವಸ್ಥಾನದ ಬಳಿಯಿಂದಾಗಿ ಕುಮಾರಧಾರಾ ನದಿಯ ಕಡೆಗೆ ಹೋಗುತ್ತಿರುವುದು ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಕಂಡುಬಂದಿದೆ. ಈ ಹಿನ್ನೆಲೆ ಅವರು ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು, ಕುಮಾರಧಾರಾ ನದಿಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ.
ಎಸ್ಡಿಆರ್ಎಫ್ ತಂಡ ಮತ್ತು ಈಜುಗಾರರು ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಸುಬ್ರಹ್ಮಣ್ಯ ಪೊಲೀಸರು ಮತ್ತು ಸ್ಥಳೀಯ ನಿವಾಸಿಗಳು ಕೂಡ ಶೋಧ ಕಾರ್ಯಕ್ಕೆ ಸಹಕರಿಸುತ್ತಿದ್ದಾರೆ.
























