ತನಿಖಾ ತಂಡಕ್ಕೆ ಹೆಚ್ಚುವರಿಯಾಗಿ 20 ಪೊಲೀಸ್ ಅಧಿಕಾರಿಗಳ ನೇಮಕ
ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಡಲಾಗಿದೆ ಎಂದು ಆರೋಪಿಸಿದ ಪ್ರಕರಣದ ತನಿಖೆ ನಡೆಸಲು ರಾಜ್ಯ ಸರ್ಕಾರ ರಚಿಸಿದ ಎಸ್ಐಟಿ ಬುಧವಾರದಿಂದ ತನಿಖೆ ಆರಂಭಿಸಲಿದೆ. ನಾಲ್ವರು ಐಪಿಎಸ್ ಅಧಿಕಾರಿಗಳ ಎಸ್ಐಟಿ ತಂಡ ರಚಿಸಲಾಗಿದ್ದು, ಇದಕ್ಕೆ ನಿನ್ನೆ ಮತ್ತೆ 20 ಅಧಿಕಾರಿಗಳನ್ನು ನೇಮಿಸಲಾಗಿದೆ.
ಹಿರಿಯ ಐಪಿಎಸ್ ಅಧಿಕಾರಿ ಪ್ರಣವ್ ಮೊಹಾಂತಿ ನೇತೃತ್ವದ ವಿಶೇಷ ತನಿಖಾ ತಂಡ ಇಂದು ಧರ್ಮಸ್ಥಳಕ್ಕೆ ತೆರಳಿ ಮೊದಲು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅನಾಮಿಕ ವ್ಯಕ್ತಿ ನೀಡಿದ ದೂರಿನ ತನಿಖೆ ನಡೆಸಲಿದೆ. ಧರ್ಮಸ್ಥಳ ಪೊಲೀಸ್ ಠಾಣೆಗೆ ಆಗಮಿಸಲಿರುವ ಎಸ್ಐಟಿ ಅಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ, ಧರ್ಮಸ್ಥಳ ಪೊಲೀಸ್ ಇನ್ಸ್ಪೆಕ್ಟರ್ ಅವರಿಂದ ಪ್ರಕರಣದ ಮಾಹಿತಿ ಪಡೆಯಲಿದ್ದಾರೆ.
ಮೊದಲು ಎಫ್ಐಆರ್ ಮತ್ತು 164 ಅಡಿ ಹೇಳಿಕೆ ಪ್ರತಿ ಅತ್ಯಗತ್ಯ. ಬಳಿಕ ಜಡ್ಜ್ ಮುಂದೆ ಕೊಟ್ಟ ಹೇಳಿಕೆಯ ಮಾಹಿತಿ ಪಡೆಯಲಿದೆ. ನಂತರ ಹೇಳಿಕೆ ನೀಡಿದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ಸದ್ಯ ಸಿಕ್ಕಿರುವ ಅಸ್ಥಿಪಂಜರದ ಡಿಎನ್ಎ ಮ್ಯಾಚಿಂಗ್ ಪ್ರಕ್ರಿಯೆ ನಡೆಯಲಿದೆ. ಇದಾದ ಮೇಲೆ ಬಾಕಿ ಉಳಿದಿರುವ ಅಸ್ಥಿಪಂಜರ ಹುಡುಕಾಟಕ್ಕೆ ಎಸ್ಐಟಿ ಮುಂದಾಗಲಿದೆ ಎನ್ನಲಾಗಿದೆ.
ಧರ್ಮಸ್ಥಳದಲ್ಲಿ ಶುಚಿತ್ವ ನೌಕರನಾಗಿದ್ದ ಎಂದು ಹೇಳಿಕೊಳ್ಳುತ್ತಿರುವ ವ್ಯಕ್ತಿಯೊಬ್ಬ ನಾನು ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿದ್ದೇನೆ ಎಂದು ವಕೀಲರ ಮೂಲಕ ಹೇಳುವುದರೊಂದಿಗೆ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಗೆ ನಾನಾ ಅನುಮಾನಗಳು ಸಾರ್ವಜನಿಕರ ಮನಸ್ಸಿನಲ್ಲಿ ಮೂಡಿವೆ.
1995ರಿಂದ 2014ರವರೆಗೆ ಧರ್ಮಸ್ಥಳದ ನೌಕರನಾಗಿದ್ದೆ. ನಾನು ಹಲವು ಶವಗಳನ್ನು ವಿಲೇವಾರಿ ಮಾಡಿದ್ದೇನೆ. ಹೂತಿಟ್ಟ ಶವಗಳಲ್ಲಿ ಮಹಿಳೆಯರದ್ದೇ ಹೆಚ್ಚು. ಇವೆಲ್ಲ ಅನಾಥ ಶವಗಳು ಅಂತ ನಾನು ಭಾವಿಸಿದ್ದೆ. ಆನಂತರ ನನಗೆ ಅನುಮಾನ ಬರಲು ಶುರುವಾಯ್ತು. ಕೆಲ ಮಹಿಳೆಯರ ಶವಗಳು ನಗ್ನ ಸ್ಥಿತಿಯಲ್ಲಿದ್ದವು. ಲೈಂಗಿಕ ಆಕ್ರಮಣ, ಹಿಂಸೆಯ ಕುರುಹುಗಳಿದ್ದವು. ನಾನು ಪೊಲೀಸರಿಗೆ ಹೇಳಲು ಮುಂದಾದಾಗ ನನ್ನ ಮೇಲೆ ಹಲ್ಲೆ ಮಾಡಿದರು. ಶವ ಹೂತಿಟ್ಟ ವಿಚಾರ ಬಯಲು ಮಾಡದಂತೆ ಬೆದರಿಸಿದರು. ನಿನ್ನನ್ನೂ ಹೂತು ಹಾಕುತ್ತೇನೆ ಅಂತ ಬೆದರಿಕೆ ಹಾಕಿದರು. ನಾನು ಜೀವ ಭಯದಿಂದ 11 ವರ್ಷಗಳ ಹಿಂದೆ ಧರ್ಮಸ್ಥಳ ತೊರೆದೆ. ಈಗ ನನಗೆ ಪಾಪಪ್ರಜ್ಞೆ ಕಾಡುತ್ತಿದೆ. ಕೊಲೆಪಾತಕರು, ಅತ್ಯಾಚಾರಿಗಳು ಯಾರೆಂದು ಗೊತ್ತಾಗಬೇಕು ಎಂದು ಆತ ಹೇಳಿಕೊಂಡಿದ್ದಾನೆ.
20 ಅಧಿಕಾರಿಗಳ ನೇಮಕ
ಎಸ್ಐಟಿ ತಂಡಕ್ಕೆ ಹೆಚ್ಚುವರಿ 20 ಅಧಿಕಾರಿಗಳನ್ನು ನೇಮಕ ಮಾಡಿ ಡಿಜಿಪಿ ಆದೇಶ ಹೊರಡಿಸಿದ್ದು, ಧರ್ಮಸ್ಥಳದಲ್ಲಿ ಶವಗಳ ಹೂತಿಟ್ಟ ಪ್ರಕರಣದ ತನಿಖೆಗಾಗಿ ರಚಿಸಿದ್ದ ಎಸ್ಐಟಿ ತಂಡಕ್ಕೆ ಹೆಚ್ಚುವರಿಯಾಗಿ 20 ಅಧಿಕಾರಿಗಳನ್ನು ನಿಯೋಜನೆ ಮಾಡಿದ್ದಾರೆ.
ಹೆಚ್ಚುವರಿಯಾಗಿ ನೇಮಕಗೊಂಡಿರುವ ಅಧಿಕಾರಿಗಳಲ್ಲಿ ಮಂಗಳೂರು ಡಿಸಿಆರ್ಇ ಎಸ್ಪಿ ಸಿ.ಎ ಸೈಮನ್, ಉಡುಪಿ ಸಿಎಎನ್ ಠಾಣೆಯ ಡಿಎಸ್ಪಿ ಎ.ಸಿ ಲೋಕೇಶ್, ದಕ್ಷಿಣ ಕನ್ನಡ ಸಿಇಎನ್ ಠಾಣೆಯ ಡಿಎಸ್ಪಿ ಮಂಜುನಾಥ್, ಸಿಎಸ್ಪಿ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್, ಸಿಎಸ್ಪಿ ಇನ್ಸ್ಪೆಕ್ಟರ್ ಇ.ಸಿ ಸಂಪತ್, ಸಿಎಸ್ಪಿ ಪೊಲೀಸ್ ಇನ್ಸ್ಪೆಕ್ಟರ್ ಕೆ.ಕುಸುಮಾಧರ್, ಉತ್ತರ ಕನ್ನಡದ ಶಿರಸಿ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ ಗೌಡ, ಬೈಂದೂರು ಇನ್ಸ್ಪೆಕ್ಟರ್ ಪಿ.ಡಿ ಸವಿತ್ರು ತೇಜ್, ಸಿಎಸ್ಪಿ ಸಬ್ಇನ್ಸ್ಪೆಕ್ಟರ್ ಕೋಕಿಲ ನಾಯಕ್, ಸಿಎಸ್ಪಿ ಸಬ್ಇನ್ಸ್ಪೆಕ್ಟರ್ ವೈಲೆಟ್ ಫೆಮಿನಾ, ಸಿಎಸ್ಪಿ ಸಬ್ಇನ್ಸ್ಪೆಕ್ಟರ್ ಶಿವಶಂಕರ್, ಶಿರಸಿ ಎನ್.ಎಂ. ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ರಾಜ್ಕುಮಾರ್ ಉಕ್ಕಳ್ಳಿ, ಉತ್ತರ ಕನ್ನಡ ಆಂಕೋಲ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಆರ್.ಸುಹಾಸ್, ಉತ್ತರ ಕನ್ನಡ ಮುಂಡಗೋಡು ಸಬ್ಇನ್ಸ್ಪೆಕ್ಟರ್ ವಿನೋದ್ ಎಸ್. ಕಾಳಪ್ಪನವರ್,
ಮಂಗಳೂರು ಮೆಸ್ಕಾಂ ಸಬ್ಇನ್ಸ್ಪೆಕ್ಟರ್ ಜೆ.ಗುಣಪಾಲ್, ಉಡುಪಿ ನಗರ ಪೊಲೀಸ್ ಠಾಣೆಯ ಎಎಸ್ಐ ಸುಭಾಷ್ ಕಾಮತ್, ಕಾಪು ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ಹರೀಶ್ಬಾಬು, ಉಡುಪಿ ಮಲ್ಪೆ ಸರ್ಕಲ್ ಕಚೇರಿಯ ಹೆಡ್ಕಾನ್ಸ್ಟೆಬಲ್ ಪ್ರಕಾಶ್, ಕುಂದಾಪುರ ನಗರ ಠಾಣೆಯ ಹೆಡ್ಕಾನ್ಸ್ಟೆಬಲ್ ನಾಗರಾಜ್ ಮತ್ತು ಚಿಕ್ಕಮಗಳೂರಿನ ಎಫ್ಎಂಎಸ್ ಹೆಡ್ಕಾನ್ಸ್ಟೆಬಲ್ ದೇವರಾಜ್ ಅವರಿದ್ದಾರೆ.
























