ಪತಿಯನ್ನು ಕೊಂದು ಮನೆಯೊಳಗೇ ಹೂತು ಹಾಕಿ ಪತ್ನಿ ಪ್ರಿಯಕರನೊಂದಿಗೆ ಪರಾರಿ
ಮುಂಬೈ : ವಿವಾಹಿತ ಮಹಿಳೆಯೊಬ್ಬಳು ಪ್ರಿಯಕರನ ಜತೆ ಸೇರಿ ಗಂಡನನ್ನು ಕೊಂದು ಮನೆಯೊಳಗೆ ಹೂತು ಹಾಕಿ ಪಲಾಯನ ಮಾಡಿದ ದೃಶ್ಯಂ ಸಿನಿಮಾ ರೀತಿಯ ಆಘಾತಕಾರಿ ಘಟನೆ ಮುಂಬೈ ಸಮೀಪದ ನಲ್ಲಸೋಪಾರದಲ್ಲಿ ಬೆಳಕಿಗೆ ಬಂದಿದೆ.
ಕೊಲೆ ಮಾಡಿದ ಬಳಿಕ ಯಾರಿಗೂ ಅನುಮಾನ ಬಾರದಂತೆ ಮನೆಯ ನೆಲದ ಟೈಲ್ಸ್ ಅಗೆದು ಪತಿಯ ಶವವನ್ನು ಅದರಡಿಯಲ್ಲಿ ಹೂತು ಹಾಕಿದ್ದಳು. ನಂತರ ಅದರ ಮೇಲೆ ಬೇರೆ ಟೈಲ್ಸ್ ಹಾಕಿದ್ದಳು.
ಕೊಲೆಯಾದ ವ್ಯಕ್ತಿಯನ್ನು 35 ವರ್ಷದ ವಿಜಯ್ ಚವಾಣ್ ಏಂದು ಗುರುತಿಸಲಾಗಿದೆ. ಪತ್ನಿ ಚಮನ್ ಅಲಿಯಾಸ್ ಗುಡಿಯಾ ದೇವಿ ಜೊತೆ ನಲ್ಲಸೋಪಾರದಲ್ಲಿ ವಾಸವಾಗಿದ್ದರು. ವಿಜಯ್ ಕಳೆದ 15 ದಿನಗಳಿಂದ ಕಾಣೆಯಾಗಿದ್ದರು. ಹಾಗಾಗಿ ಅವರ ಸಹೋದರ ಅವರನ್ನು ಹುಡುಕಲು ಮುಂಬೈಗೆ ಬಂದಿದ್ದರು. ಮನೆಗೆ ಬಂದು ನೋಡಿದಾಗ ಚಮನ್ ಕೂಡ ಕಾಣೆಯಾಗಿರುವುದು ಕಂಡುಬಂದಿತ್ತು. ಮನೆಯ ನೆಲದ ಮೇಲೆ ಬೇರೆ ಬಣ್ಣದ ಟೈಲ್ಸ್ ಕಂಡಿತ್ತು. ಅದರಿಂದ ಅವರು ಅನುಮಾನಗೊಂಡಿದ್ದರು.
ಟೈಲ್ಸ್ ತೆಗೆದು ನೋಡಿದಾಗ ಅದರ ಕೆಳಗೆ ವಿಜಯ್ ಮೃತದೇಹ ಕೊಳೆತು ನಾರುತ್ತಿರುವುದನ್ನು ಕಂಡು ಎಲ್ಲರೂ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. 15 ದಿನಗಳ ಹಿಂದೆಯೇ ಚಮನ್ ಪ್ರಿಯಕರ ಮೋನು ವಿಶ್ವಕರ್ಮನ ಜೊತೆ ಸೇರಿ ಪತಿಯನ್ನು ಕೊಂದಿದ್ದಳು. ಮನೆಯೊಳಗೆ ಆರು ಅಡಿ ಉದ್ದ, 2 ಅಡಿ ಅಗಲ, ನಾಲ್ಕು ಅಡಿ ಆಳದ ಗುಂಡಿ ತೆಗೆದು ಅವರಿಬ್ಬರು ಸೇರಿ ಶವವನ್ನು ಹೂತಿದ್ದಾರೆ.
ಆರಂಭಿಕ ತನಿಖೆಯಲ್ಲಿ ವಿಜಯ್ ಅವರ 28 ವರ್ಷದ ಪತ್ನಿ ಚಮನ್ ಮೇಲೆ ಶಂಕೆ ವ್ಯಕ್ತಪಡಿಸಲಾಯಿತು. ಕೋಮಲ್ ತನ್ನ ಪತಿಯನ್ನು ಕೊಂದು ತನ್ನ ಪ್ರಿಯಕರ ಮೋನು ಜೊತೆ ಪರಾರಿಯಾಗಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳಿಂದ ಇಬ್ಬರೂ ನಾಪತ್ತೆಯಾಗಿದ್ದಾರೆ. ಇದಲ್ಲದೆ, ಇಬ್ಬರ ನಡುವಿನ ಪ್ರೇಮ ಸಂಬಂಧದ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
























