ಸನಾ: ಯೆಮನ್ ಪ್ರಜೆಯನ್ನು ಹತ್ಯೆ ಮಾಡಿದ ಆರೋಪದಲ್ಲಿ ಮರಣದಂಡನೆಗೆ ಗುರಿಯಾದ ಕೇರಳದ ನರ್ಸ್ ನಿಮಿಷಾ ಪ್ರಿಯ ಮರಣದಂಡನೆಯನ್ನು ಅಲ್ಲಿನ ಸರ್ಕಾರ ರದ್ದು ಮಾಡಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ನಿಮಿಷಾ ಮರಣದಂಡನೆ ರದ್ದು ಮಾಡುವಂತೆ ಯೆಮನ್ ಸರ್ಕಾರದ ಜೊತೆ ಭಾರತ ಮಾತುಕತೆ ನಡೆಸಿತ್ತು. ಹಾಗೆಯೇ ಭಾರತದ ಧಾರ್ಮಿಕ ಮುಖಂಡರು ಸಹ ಯೆಮನ್ ಧಾರ್ಮಿಕ ಮುಖಂಡರ ಜೊತೆಗೆ ಮಾತುಕತೆ ನಡೆಸಿದ್ದರು. ಇವೆಲ್ಲದರ ಫಲ ಎಂಬಂತೆ ನಿಮಿಷಾ ಮರಣದಂಡನೆ ಶಿಕ್ಷೆಯನ್ನು ರದ್ದು ಮಾಡಲಾಗಿರುವುದಾಗಿ ಧರ್ಮಬೋಧಕ, ಜಾಗತಿಕ ಶಾಂತಿ ಪ್ರವರ್ತಕ ಡಾ. ಕೆ. ಎ. ಪೌಲ್ ವಿಡಿಯೋ ಮೂಲಕ ತಿಳಿಸಿದ್ದಾಗಿ ಹೇಳಲಾಗಿದೆ.
ಹಾಗೆಯೇ ಯೆಮನ್ ಮುಖಂಡರ ಪ್ರಭಾವಶಾಲಿ ಮತ್ತು ಪ್ರಾರ್ಥನಾಪೂರ್ವಕ ಪ್ರಯತ್ನಗಳ ಫಲವಾಗಿ ಈ ಬದಲಾವಣೆಯಾಗಿದ್ದು, ಇದಕ್ಕಾಗಿ ಪ್ರಯತ್ನ ನಡೆಸಿದವರೆಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
























